ಶಿವಸೇನೆಗೆ ಕೈ, ಕಮಲ, ಜೆಡಿಎಸ್‌ನಿಂದ ಕಾರ್ಯಕರ್ತರ ವಲಸೆ

KannadaprabhaNewsNetwork |  
Published : Sep 12, 2026, 02:15 AM IST
ಶಿವಸೇನೆಯ ಸುದ್ದಿಗೋಷ್ಠಿಯಲ್ಲಿ ರಾಜ್ಯ ವಕ್ತಾರ ಎಸ್‌. ಭಾಸ್ಕರನ್‌ ಮಾತನಾಡಿದರು.  | Kannada Prabha

ಸಾರಾಂಶ

ಕರ್ನಾಟಕದಲ್ಲಿ ಶಿವಸೇನೆ ಸ್ಥಾಪನೆಯಾಗಿ ಒಂದು ವರ್ಷವಾಗಿದ್ದು, ಈ ಅವಧಿಯಲ್ಲಿ ವಿದ್ಯಾರ್ಥಿಗಳ, ನಿರುದ್ಯೋಗಿಗಳ, ರೈತರ ಹಾಗೂ ಬಡ ಜನರ ಸಂಕಷ್ಟಕ್ಕೆ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ.

ಧಾರವಾಡ:

ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷ, ಹೊಂದಾಣಿಕೆ ರಾಜಕಾರಣ ಮಾಡುತ್ತಿರುವ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಬೇಸತ್ತು ರಾಜ್ಯದ ಜನರು ಶಿವಸೇನೆ ಪಕ್ಷದತ್ತ ಮುಖ ಮಾಡುತ್ತಿದ್ದು, ನವೆಂಬರ್‌ ತಿಂಗಳಲ್ಲಿ ಈ ಮೂರು ಪಕ್ಷಗಳಿಂದ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರ್ಪಡೆ ಆಗುತ್ತಿದ್ದಾರೆ ಎಂದು ಶಿವಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಶಿವಸೇನೆ ಸ್ಥಾಪನೆಯಾಗಿ ಒಂದು ವರ್ಷವಾಗಿದ್ದು, ಈ ಅವಧಿಯಲ್ಲಿ ವಿದ್ಯಾರ್ಥಿಗಳ, ನಿರುದ್ಯೋಗಿಗಳ, ರೈತರ ಹಾಗೂ ಬಡ ಜನರ ಸಂಕಷ್ಟಕ್ಕೆ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಸೆಪ್ಟೆಂಬರ್‌ ತಿಂಗಳು ಪೂರ್ತಿ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದು 20 ಲಕ್ಷ ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದರು.

ರಾಜ್ಯದಲ್ಲಿ ತೀವ್ರ ಬರ ಇದ್ದು, ಸಾಮಾನ್ಯ ಜನರ, ರೈತರ, ಕೂಲಿ ಕಾರ್ಮಿಕರ, ಜಾನುವಾರುಗಳ ಸ್ಥಿತಿ ಅಧೋಗತಿಗೆ ಇಳಿದಿದೆ. ರಾಜ್ಯ ಸರ್ಕಾರ ಮಾತ್ರ ಮೇಲ್ನೋಟಕ್ಕೆ ಆಡಳಿತ ನಡೆಸುತ್ತಿದೆ. ಆಡಳಿತ ಸರ್ಕಾರವನ್ನು ಎಚ್ಚರಿಸಬೇಕಾದ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಹೊಂದಾಣಿಕೆ ರಾಜಕೀಯ ಮಾಡಿಕೊಂಡು ರಾಜ್ಯದ ಜನರನ್ನು ಸಂಕಷ್ಟಕೆ ಸಿಲುಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಶಿವಸೇನೆ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.

ಖರ್ಗೆಗೆ ಆರ್‌ಎಸ್‌ಎಸ್‌ ಫೋಬಿಯಾ?:

ಶಿವಸೇನೆಯ ರಾಜ್ಯ ವಕ್ತಾರ ಎಸ್‌. ಭಾಸ್ಕರನ್‌ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತೀವ್ರವಾಗಿ ಹದಗೆಟ್ಟಿದೆ. ಆದರೆ, ಗೃಹ ಸಚಿವರು ಪೊಲೀಸ್‌ ವ್ಯವಸ್ಥೆ ಸರಿಪಡಿಸುವುದನ್ನು ಬಿಟ್ಟು ಬರೀ ಆರ್‌ಎಸ್‌ಎಸ್‌ ಹಿಂದೂ ಸಂಘಟನೆಗಳನ್ನು ಬಯ್ಯುವುದರಲ್ಲಿ ನಿರತರಾಗಿದ್ದಾರೆ. ಅವರಿಗೆ ಆರ್‌ಎಸ್‌ಎಸ್‌ ಹಾಗೂ ಹಿಂದೂಗಳ ಫೋಬಿಯಾ ಶುರುವಾಗಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಪೊಲೀಸರು ತೀವ್ರ ಸಮಸ್ಯೆ, ಪರವಾನಗಿ ಕಿರಿಕಿರಿ ಮಾಡುತ್ತಿದ್ದು, ಇದನ್ನು ಶಿವಸೇನೆ ವಿರೋಧಿಸುತ್ತದೆ. ಪೊಲೀಸರು ಇದೇ ರೀತಿ ವರ್ತನೆ ಮುಂದುವರಿಸಿದರೆ ಪೊಲೀಸ್‌ ಠಾಣೆಯಲ್ಲಿಯೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಹಾಲಿಂಗಣ್ಣ ಗುಂಜಗಾವಿ, ಅಮರನಾಥ ಹಾಗೂ ಸ್ಥಳೀಯ ಪದಾಧಿಕಾರಿಗಳಿದ್ದರು. ಚುನಾವಣೆಗಳಲ್ಲಿ ಸ್ಪರ್ಧೆ....

ಶಿವಸೇನೆಯು ಮುಂಬರುವ ಜಿಪಂ, ತಾಪಂ, ಗ್ರಾಪಂ ಸೇರಿದಂತೆ ಎಲ್ಲ ರೀತಿಯ ಚುನಾವಣೆಗಳಲ್ಲಿ ಅಧಿಕೃತವಾಗಿ ಸ್ಪರ್ಧಿಸಲಿದೆ. ಈ ಮೂಲಕ ರಾಜ್ಯದ ಜನರಿಗೆ ಬೇಕಾದ ಹಕ್ಕು, ನ್ಯಾಯ ದೊರಕಿಸಿಕೊಡಲು ಪಕ್ಷದಿಂದ ಉತ್ತಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಬರ ಬಿದ್ದರೂ ಸರ್ಕಾರ ಕಾಲಹರಣ ಮಾಡುತ್ತಾ ಕಾಟಾಚಾರಕ್ಕೆ ಬರ ಅಧ್ಯಯನ ಮಾಡುತ್ತಿದೆ. ಒಟ್ಟಾರೆ ರಾಜ್ಯ ಸರ್ಕಾರದ ವಿಫಲತೆ ಎತ್ತಿ ತೋರುವುದು ಹಾಗೂ ಜನರಿಗೆ ನ್ಯಾಯಾ ಕೊಡಿಸುವಲ್ಲಿ ಪಕ್ಷವು ಕಾರ್ಯೋನ್ಮುಖವಾಗಲಿದೆ.

ಗಂಗಾಧರ ಕುಲಕರ್ಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಶಿವಸೇನೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ–ಕಲಾವಿದ ಮಾಳವಾಡ ನಿಧನಕ್ಕೆ ಸಂತಾಪ
ಶೂನ್ಯ ತ್ಯಾಜ್ಯ ಗಣೇಶೋತ್ಸವ:ಯುವ ಸಂಘಟನೆಗಳ ಪದಾಧಿಕಾರಿಗಳಿಗೆ ಕಾರ್ಯಾಗಾರ