ಕಾರ್ಮಿಕರಿಗೆ ಕಾನೂನು, ಸೌಲಭ್ಯಗಳ ಬಗ್ಗೆ ಅರಿವು ಅಗತ್ಯ

KannadaprabhaNewsNetwork |  
Published : Sep 28, 2024, 01:23 AM IST
ಕಾರ್ಮಿಕರಿಗೆ ಕಾನೂನು ಮತ್ತು ಸೌಲಭ್ಯಗಳ ಬಗ್ಗೆ ಅರಿವು ಅತ್ಯಗತ್ಯ-  ಬಿ.ಎಸ್.ಭಾರತಿ | Kannada Prabha

ಸಾರಾಂಶ

ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳು/ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಜಿಲ್ಲಾ , ಸತ್ರ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪ್ರಸ್ತುತ ಸನ್ನಿವೇಶದಲ್ಲಿ ಕಾರ್ಮಿಕರಿಗೆ ಅದರಲ್ಲೂ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಕಾನೂನುಗಳ ಜೊತೆಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಇವುಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ಭಾರತಿ ತಿಳಿಸಿದರು.ಜಿಲ್ಲಾಡಳಿತ ಭವನದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲೆಯ ಸಾರ್ವಜನಿಕರಿಗೆ, ಉದ್ಯೋಗದಾತರಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ, ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳು, ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಎಷ್ಟೋ ಅಸಂಘಟಿತ ಕಾರ್ಮಿಕರಿಗೆ ತಮ್ಮ ಕಲ್ಯಾಣಕ್ಕಾಗಿ ಸರ್ಕಾರ ರೂಪಿಸಿರುವ ಕಾನೂನಿನ ಬಗ್ಗೆ ಅರಿವು ಇಲ್ಲದೇ ಮಾಲೀಕರಿಂದ ಶೋಷಣೆಗೆ ಒಳಗಾಗುತ್ತಿರುವ ಹಲವಾರು ಪ್ರಕರಣಗಳು ನ್ಯಾಯಾಲಯದಲ್ಲಿವೆ, ಈ ಜಿಲೆಯಲ್ಲೂ ಎಷ್ಟೇ ಅರಿವು ಮೂಡಿಸುತ್ತಿದ್ದರೂ ಪ್ರಕರಣಗಳು ದಾಖಲಾಗುತ್ತಿರುವುದು ಬೇಸರ ತರಿಸುವ ವಿಷಯವಾಗಿದೆ ಎಂದರು. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಆತ್ಮಸಾಕ್ಷಿಯಾಗಿ ಕರ್ತವ್ಯ ನಿರ್ವಹಿಸಬೇಕು, ಸರ್ಕಾರ ನಿಮಗೆ ಸಂಬಳದ ಜೊತೆಗೆ ಎಲ್ಲಾ ರೀತಿಯ ಭತ್ಯೆಗಳನ್ನು ನೀಡುತ್ತಿದೆ ಇದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದರು.

ಸರ್ಕಾರಗಳು ಕಾರ್ಮಿಕರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಇರುವುದಿಲ್ಲ. ಹೊಸ ಹೊಸ ಕಾರ್ಮಿಕರು ದಿನೇ ದಿನೇ ಬಂದು ಸೇರಿಕೊಳ್ಳುತ್ತಿದ್ದಾರೆ ಇದಕ್ಕೆ ತಕ್ಕಂತೆ ಸರ್ಕಾರ ಕಾನೂನು ಮತ್ತು ಸೌಲತ್ತುಗಳನ್ನು ಒದಗಿಸುತ್ತಿವೆ. ಅನೇಕ ಕಡೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ರಜೆ ಇರಲಿ ಕನಿಷ್ಠ ವೇತನ ನೀಡುವುದಿಲ್ಲ. ಎಂಬ ದೂರುಗಳು ಸರ್ವೇ ಸಾಮಾನ್ಯವಾಗಿವೆ. ಈ ಸಂಬಂಧ ಸಂಬಂಧಪಟ್ಟ ಕಾರ್ಮಿಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಿ ಎಂದರು.

ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಆನೇಕ ಕಡೆಗಳಲ್ಲಿ ಹೆರಿಗೆ ರಜೆ ಕೂಡ ನೀಡದೇ ಶೋಷಣೆ ಮಾಡಲಾಗುತ್ತಿದೆ. ಸರ್ಕಾರಿ ಸಿಬ್ಬಂದಿಗೆ ಸಾಕಷ್ಟು ಸವಲತ್ತುಗಳಿದ್ದರೂ ಇತರೆ ಬೇಡಿಕೆಗಳಿಗೆ ಧರಣಿ ಮಾಡುತ್ತಿರುವುದು ವಿಪರ್ಯಾಸ. ಕಾರ್ಮಿಕರ ಅನೇಕ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸಲು ಕ್ರಮವಹಿಸಬೇಕು ಎಂದರು. ಇಂತಹ ಕಾರ್ಯಗಾರಗಳನ್ನು ಕಾರ್ಮಿಕರು ಮತ್ತು ಮಾಲೀಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಈಶ್ವರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾದರೂ ಕೂಡ ಕಾರ್ಮಿಕರ ಅವಶ್ಯಕತೆ ಇದೆ. ಕಾರ್ಮಿಕರು ಕಷ್ಟ ಜೀವಿಗಳು, ಮಾಲೀಕರು ಹಾಗೂ ಕಾರ್ಮಿಕರ ನಡುವೆ ಉತ್ತಮ ಬಾಂಧವ್ಯ ಇರಬೇಕು ಎಂದರು. ಕಾರ್ಮಿಕರು ನೋಂದಣಿ ಕಾರ್ಡ್‌ಗಳನ್ನು ವರ್ಷಕ್ಕೊಮ್ಮೆ ನವೀಕರಿಸಿಕೊಳ್ಳಬೇಕು, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು. ಎಸ್ಪಿ ಡಾ.ಬಿ.ಟಿ. ಕವಿತಾ ಮಾತನಾಡಿ, ಬಸವಣ್ಣನವರು ಕಾಯಕವೇ ಕೈಲಾಸ ಎಂದರು. ನಮ್ಮ ಮಾಡುವ ಕಾಯಕ ನಿಷ್ಠೆಯಿಂದಿರೆಬೇಕು, ಕಾರ್ಮಿಕರು ಮಾಲೀಕರ ಬಾಂಧವ್ಯ ಚೆನ್ನಾಗಿದ್ದರೆ ಕಂಪನಿ ಉತ್ತಮವಾಗಿರುತ್ತದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅಧ್ಯಕ್ಷತೆ ವಹಿಸಿ ಮಾಲೀಕರ ಜೊತೆ ಉತ್ತಮ ಒಡನಾಟ ಇದ್ದರೆ ಬರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯ. ಹಿಂದೆ ಕಾರ್ಮಿಕರಿಗೆ ಕಡಿಮೆ ಸೌಲಭ್ಯಗಳಿತ್ತು, ಆದರೆ, ಈಗ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಬಗ್ಗೆ ಅರಿವು ಮೂಡಿಸಿಕೊಳ್ಳಿ ಎಂದರು. ಕೃಷ್ಣಕಾಂತರಾಜೇ ಅರಸ್, ನಿವೃತ್ತ ಕಾರ್ಮಿಕ ಅಧಿಕಾರಿ ರಾಜಗೋಪಾಲ, ಸತೀಶ್, ವಿನಾಯಕ್‌ಕುಮಾರ್, ಆಶೋಕ್ ಕುಮಾರ್, ಹಿರಿಯ ಕಾರ್ಮಿಕ ಅಧಿಕಾರಿ ಪ್ರಸಾದ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಲೇಬರ್ ಕಾನೂನು ಮತ್ತು ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ.ಸವಿತಾ, ಸಿಬ್ಬಂದಿ, ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಅಸಂಘಟಿತ ಕಾರ್ಮಿಕರು ನೋಂದಾಯಿತ ಕಾರ್ಡ್ ಹೊಂದಿರುವ ಕಾರ್ಮಿಕರು, ಮಾಲೀಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ