ವಿಶ್ವ ಕಾರ್ಮಿಕರ ದಿನಾಚರಣೆ
ಪ್ರತಿಯೊಂದು ಕ್ಷೇತ್ರದಲ್ಲಿ ನಿರಂತರ ಕೆಲಸ ಮಾಡುತ್ತಿರುವ ಕಾರ್ಮಿಕರು ರಾಜಕೀಯ ಪ್ರಜ್ಞೆ ಬೆಳಸಿಕೊಳ್ಳಬೇಕೆಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಜ್ಯಾಧ್ಯಕ್ಷ ಡಾ. ಕೆ.ಎಸ್. ಜನಾರ್ದನ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಎಐಟಿಯುಸಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಮತ್ತು 2ನೇ ತಾಲೂಕು ಕಾರ್ಮಿಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನೀವು ಆಯ್ಕೆ ಮಾಡುವ ಜನಪ್ರತಿನಿಧಿ ನಿಮ್ಮ ಪರ ಕೆಲಸ ಮಾಡುವ ವ್ಯಕ್ತಿಯ ಆಯ್ಕೆ ಮಾಡಲು ನಿಮಗೆ ಮೊದಲು ರಾಜಕೀಯ ಪ್ರಜ್ಞೆ ಬೇಕಿದೆ. ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ಕಾರ್ಮಿಕರು ಸೆಸ್ ರೂಪದಲ್ಲಿರುವ ಕೋಟ್ಯಂತರ ಕೊಳೆಯುತ್ತಿದೆ. ಇದೇನು ಸರ್ಕಾರದ ಹಣವಲ್ಲ, ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಬಿಡುಗಡೆ ಮಾಡಲು ಅಧಿಕಾರಿಗಳು ಮತ್ತು ಸಂಬಂಧ ಪಟ್ಟ ಕಾರ್ಮಿಕ ಸಚಿವರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.ಭಾರತ ಕಮ್ಯುನಿಸ್ಟ್ ಪಾರ್ಟಿ ಸೇರಿದಂತೆ ಇದರ ಅಡಿಯಲ್ಲಿ ಹತ್ತು ಹಲವು ಸಂಘಟನೆ ಸೇರಿಕೊಂಡು ಬೆವರಿನ ಹನಿ ಸುರಿಸುತ್ತಿರುವ ದುಡಿಯುವ ವರ್ಗದ ಪರ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಆದರೆ ನಮ್ಮ ಆಳುವ ಸರ್ಕಾರಗಳು ಅವೈಜ್ಞಾನಿಕ ಕಾನೂನು ಜಾರಿಗೊಳಿಸಿದ ಫಲವಾಗಿ,ನಮ್ಮ ದುಡಿಮೆಯ ಪ್ರತಿಫಲ ಬಂಡವಾಳ ಶಾಹಿಗಳು ಮತ್ತು ಪ್ರಭಾವಿ ರಾಜಕಾರಣಿಗಳು ಪಡೆಯುತ್ತಿದ್ದಾರೆ. ಆದರಿಂದ ಕಾರ್ಮಿಕರು ಬಹಳ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.
ತಾಪಂ ಇಒ ಎಂ. ಉಮೇಶ ಮಾತನಾಡಿ, ಎಐಟಿಯುಸಿ ಸಂಘಟನೆ ಎಲ್ಲ ವರ್ಗದ ಜನರ ಜೊತೆಗೂಡಿ ಸಮಾನತೆ ಸಾರುವ ಸಂಘಟನೆಯಾಗಿದೆ. ಕಾರ್ಮಿಕ ವರ್ಗದ ಹಿತ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕತೆಯರು, ಬಿಸಿಯೂಟ ತಯಾರಿಕರು ಹೀಗೆ ಹಲವಾರು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬೇಡಿಕೆಗಾಗಿ ಹೋರಾಟ ಮಾಡಿ, ಸಣ್ಣ ಪ್ರಮಾಣದಲ್ಲಾದರೂ ಪ್ರತಿಫಲ ಕಂಡಿದೆ ಎಂದರು.
ಸಂಘಟನೆಯ ಗುಡಿಹಳ್ಳಿ ಹಾಲೇಶ, ಇಪ್ಟಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪಿ. ಚಮನ್‌ಸಾಬ್, ಎಐವೈಎಫ್ ಸಂಘಟನೆ ಸಂಚಾಲಕ ಬಸವರಾಜ ಸಂಶಿ, ಎಐಟಿಯುಸಿ ರಾಜ್ಯ ಸಂಘಟನೆ ಸದಸ್ಯ ಸುರೇಶ ಹಲಗಿ, ಪತ್ರಕರ್ತ ಖಾಜಾ ಹುಸೇನ್ ಸೇರಿದಂತೆ ಇತರರು ಮಾತನಾಡಿದರು.