ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನ ಕಂಬಳೀಪುರ ಗ್ರಾಮದ ಬಳಿ ಇರುವ ಬಿಸಿಡಿ ಅಪಾರ್ಟ್ಮೆಂಟ್‌ನಲ್ಲಿ ಕಾರ್ಮಿಕರನ್ನು ಹೊರಗುತ್ತಿಗೆ ಪಡೆದ ಏನ್ಲೆವೇನ್ ಕಂಪನಿ ಮಾಲೀಕರು ಕಾರ್ಮಿಕರಿಗೆ ಪ್ರತಿ ತಿಂಗಳು ಸಮರ್ಪಕವಾಗಿ ಸಂಬಳ ನೀಡುತ್ತಿಲ್ಲ ಎಂದು ಅಪಾರ್ಟ್ಮೆಂಟ್ ಮುಂದೆ ಕಾರ್ಮಿಕರು ಭಾರತೀಯ ಅಂಬೇಡ್ಕರ್ ಸೇನೆ ಅಧ್ಯಕ್ಷ ಶಿವಕುಮಾರ್ ಚಕ್ರವರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಭಾರತೀಯ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಶಿವಕುಮಾರ್ ಚಕ್ರವರ್ತಿ ಮಾತನಾಡಿ, ಬಿಸಿಡಿ ಅಪಾರ್ಟ್‌ಮೆಂಟ್‌ನಲ್ಲಿ ಗುತ್ತಿಗೆ ಪಡೆದಂತಹ ಏನ್ಲೆವೆನ್ ಕಂಪನಿಯು ಕಾರ್ಮಿಕರಿಗೆ ಪ್ರತಿ ತಿಂಗಳು ಸೂಕ್ತ ಸಮಯಕ್ಕೆ ಸಂಬಳ ನೀಡದೆ ಅವರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ಇಲ್ಲಿನ ಸಂಬಳ ನಂಬಿ ಕಾರ್ಮಿಕರು ಹಲವಾರು ರೀತಿಯ ವ್ಯವಹಾರಗಳನ್ನು ಮಾಡಿಕೊಂಡಿದ್ದಾರೆ. ಆದರೆ ಕಂಪನಿಯು ಸೂಕ್ತ ಸಮಯಕ್ಕೆ ವೇತನ ನೀಡದೆ ಕಾರ್ಮಿಕರಿಗೆ ವಿನಾಕಾರಣವಾಗಿ ತೊಂದರೆ ಕೊಡುತ್ತಿದ್ದಾರೆ. ಗುತ್ತಿಗೆ ಕಂಪನಿಯನ್ನು ಕೇಳಿದರೆ ಬಿಸಿಡಿ ಅಪಾರ್ಟ್ಮೆಂಟ್‌ನವರು ನಮಗೆ ಸರಿಯಾದ ಸಮಯಕ್ಕೆ ಹಣ ನೀಡಿದ ಪರಿಣಾಮವಾಗಿ ಕಾರ್ಮಿಕರಿಗೆ ನಾವು ಸಂಬಳ ನೀಡಲಾಗುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಇನ್ನು ಬಿಸಿಡಿ ಕಂಪನಿ ಅವರನ್ನ ಪ್ರಶ್ನೆ ಮಾಡಿದ್ರೆ ಗುತ್ತಿಗೆದಾರರಿಗೆ ಸಕಾಲಕ್ಕೆ ವೇತನ ಪಾವತಿ ಮಾಡಿರುವುದಾಗಿ ಹೇಳ್ತಾರೆ. ಈಗ ನಾವು ಪ್ರತಿಭಟನೆ ಮಾಡಿದ ನಂತರ ಒಂದೆರಡು ದಿನದಲ್ಲಿ ಕಾರ್ಮಿಕರ ಎಲ್ಲಾ ವೇತನ ಚುಕ್ತಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಎಂದರು.
ಇಎಸ್‌ಐಪಿಎಫ್ ಇಲ್ಲ:ಅಷ್ಟೆ ಅಲ್ಲದೆ ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ರೀತಿಯ ಇಎಸ್‌ಐ ಹಾಗೂ ಪಿಎಫ್ ನೀಡದೆ ಕಾರ್ಮಿಕರಿಗೆ ಗುತ್ತಿಗೆ ಕಂಪನಿಯು ಮೋಸ ಮಾಡಿದೆ. ಅಲ್ಲದೆ ಕೆಲಸ ಮಾಡುವ ಸಂದರ್ಭದಲ್ಲಿ ಸುರಕ್ಷತೆಗೆ ಬೇಕಾದ ಯಾವುದೇ ರೀತಿಯ ಪರಿಕರಗಳನ್ನು ಮಹಿಳೆಯರಿಗೆ ಕೊಟ್ಟಿಲ್ಲ ಎಂದು ಶಿವಕುಮಾರ್ ಚಕ್ರವರ್ತಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಭಾರತೀಯ ಅಂಬೇಡ್ಕರ್ ಸೇನೆ ಯುವ ಘಟಕ ರಾಜ್ಯಾಧ್ಯಕ್ಷ ಕೆಎಂ ನಾಗರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷ ಮನೋಜ್ ಕುಮಾರ್ ಹಾಜರಿದ್ದರು.ಕಾರ್ಮಿಕ ಇಲಾಖೆ ಅಧಿಕಾರಿ ಭೇಟಿ
ಕಾರ್ಮಿಕರಿಗೆ ಸಮರ್ಪಕ ವೇತನ ನೀಡದ ಹಿನ್ನೆಲೆ ಪ್ರತಿಭಟನಾ ಸ್ಥಳವಾದ ಬಿಸಿಡಿ ಅಪಾರ್ಟ್ಮೆಂಟ್ ಬಳಿಗೆ ಹೊಸಕೋಟೆ ತಾಲೂಕು ಕಾರ್ಮಿಕ ಇಲಾಖೆ ಅಧಿಕಾರಿ ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಸಮಸ್ಯೆ ಆಲಿಸಿದರು. ಈ ವೇಳೆ ಹೊರಗುತ್ತಿಗೆ ಕಂಪನಿಯವರಿಗೆ ದೂರವಾಣಿ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಹಿನ್ನೆಲೆ ಕಂಪನಿ ಕಾರ್ಮಿಕರ ಮೇಲ್ವಿಚಾರಕನ ಮೂಲಕ ನೋಟಿಸ್ ರವಾನಿಸಿದ್ದು ಸೂಕ್ತ ಮಾಹಿತಿ ಪಡೆದು ಅಗತ್ಯವಾದ ದಾಖಲೆಗಳೊಂದಿಗೆ ಕಾರ್ಮಿಕರನ್ನು ದಾಖಲು ಮಾಡಿಕೊಳ್ಳದೆ ವೇತನ ನೀಡದೆ ವಂಚಿಸಿದ್ದರೆ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.