ಕನ್ನಡಪ್ರಭ ವಾರ್ತೆ ಕೋಲಾರ
ಯೋಧ, ರೈತ ಹಾಗೂ ಕಾರ್ಮಿಕರ ಋಣವನ್ನು ದೇಶದ ಜನತೆ ಸದಾ ನೆನೆಯಬೇಕು ಎಂದು ನಗರಸಭಾ ಸದಸ್ಯ ಪ್ರವೀಣ್ ಗೌಡ ತಿಳಿಸಿದರು.ನಗರದ ಹಳೆ ಬಸ್ ನಿಲ್ದಾಣದ ಬಳಿ ಬುಧವಾರ ಡಾ.ಅಂಬೇಡ್ಕರ್ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಂದರ ಸಮಾಜ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಕಾರ್ಮಿಕರಿಗೆ ಗೌರವಯುತ ಬದುಕು ಕಟ್ಟಿಕೊಡಬೇಕು. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.
ಸರ್ಕಾರ ದಿನಗೂಲಿ ನೌಕರರಿಗೆ ಸಂಬಳ ನಿಗಧಿಪಡಿಸಿರುವಂತೆ ಅಸಂಘಟಿತ ಕೂಲಿ ಕಾರ್ಮಿಕರಿಗೂ ವೇತನ ನಿಗಧಿಗೊಳಿಸಬೇಕು. ಕಾರ್ಮಿಕರಲ್ಲಿ ಸಂಘಟನೆ ಕೊರತೆಯಿಂದ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಅಸಂಘಟಿತ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.ಕಾರ್ಮಿಕ, ವ್ಯವಸ್ಥಾಪಕ ಹಾಗೂ ಮಾಲೀಕರ ನಡುವೆ ಸಾಮರಸ್ಯ ಇದ್ದರೆ ಮಾತ್ರ ಕಾರ್ಖಾನೆ ಸೇರಿದಂತೆ ಯಾವುದೇ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ಭಾರತ ದೇಶವು ಅಭಿವೃದ್ಧಿ ಪಥದತ್ತ ಸಾಗುತ್ತಿರಲು ಮುಖ್ಯ ಕಾರಣ ಶ್ರಮಿಕ ಕಾರ್ಮಿಕರು. ಅವರ ಆರೋಗ್ಯ, ಕುಟುಂಬ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವನ್ನು ಮಾಡಿಕೊಡುವುದು ಸರ್ಕಾರಗಳ ಮುಖ್ಯ ಕರ್ತವ್ಯವೆಂದರು.
ಮುಖಂಡ ಶಾಮ್ ನಾಯಕ್ ಮಾತನಾಡಿ, ಖಾಸಗೀಕರಣದಿಂದ ಕಾರ್ಮಿಕನ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಪ್ರಸಕ್ತ ದಿನದಲ್ಲಿ ಕಾರ್ಮಿಕರಿಗೆ ಕಾಯಂ ಉದ್ಯೋಗವೆಂಬುದೇ ಮರೀಚಿಕೆಯಾಗಿದೆ. ದುಡಿಮೆಯೇ ಜೀವನ ಎಂದು ನಂಬಿ ಕುಳಿತ ನೌಕರರ ವರ್ಗಕ್ಕೆ ನೆಮ್ಮದಿಯೇ ಇಲ್ಲದಂತಾಗಿದೆ. ಕಾಯಂ ಉದ್ಯೋಗವಿಲ್ಲದೇ ಕಾರ್ಮಿಕನ ತಲೆ ಮೇಲೆ ಅನಿಶ್ಚಿತತೆಯ ತೂಗು ಕತ್ತಿ ನೇತಾಡುತ್ತಿದೆ ಎಂದರು.ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಕೂಲಿ ಕಾರ್ಮಿಕರು ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿದರು.
ಡಾ.ಅಂಬೇಡ್ಕರ್ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಮೆಹಬೂಬ್ ಪಾಷಾ, ಕಾರ್ಯದರ್ಶಿ ಮುನಿರಾಜು, ಖಜಾಂಚಿ ಗೋವಿಂದ, ಮುಖಂಡ ಸುರೇಶ್, ಸದಸ್ಯರಾದ ಬಜಶ್, ಧನು, ವೆಂಕಟೇಶ್, ಮನೋಜ್, ಮುನಿರಾಜ್ ಇದ್ದರು.