ಸಚಿವ ಸೋಮಣ್ಣರತ್ತ ಖುರ್ಚಿ ಎಸೆದು ಕೈ ಕಾರ್ಯಕರ್ತರ ಆಕ್ರೋಶ

KannadaprabhaNewsNetwork |  
Published : Jan 06, 2026, 02:45 AM IST
ಕೇಂದ್ರ ಸಚಿವ ಸೋಮಣ್ಣ ಭಾಷಣ ಮಾಡುತ್ತಿದ್ದ ವೇಳೆ ಅವರ ವಿರುದ್ಧ ಘೋಷಣೆ ಕೂಗುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು. | Kannada Prabha

ಸಾರಾಂಶ

ಸುಮಾರು ₹27 ಕೋಟಿ ವೆಚ್ಚದ ಎಲ್‌ಸಿ ಗೇಟ್ ನಂ.77 ಬದಲಿಗೆ ನಿರ್ಮಾಣವಾಗಲಿರುವ ಮೇಲ್ಸೇತುವೆ ಕಾಮಗಾರಿಗೆ ಸೋಮವಾರ ರೈಲ್ವೆ ಸಚಿವ ಬಿ. ಸೋಮಣ್ಣ ಚಾಲನೆ ನೀಡಬೇಕಿತ್ತು

ಕೊಪ್ಪಳ: ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲಾನ್ಯಾಸದ ವೇಳೆ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಕಾರ್ಯಕರ್ತರು, ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಬಿ. ಸೋಮಣ್ಣ ಅವರತ್ತ ಖುರ್ಚಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಅವರ ಕಾರಿನ ಎದುರು ಕುಳಿತು ಪ್ರತಿಭಟನೆ ನಡೆಸಿದರು.

ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ ಅವರು ಇದೇ ವಿಷಯವಾಗಿ ಸಚಿವ ವಿ.ಸೋಮಣ್ಣ ಅವರೊಂದಿಗೆ ವಾಗ್ವಾದ ನಡೆಸಿದರು.

ಸುಮಾರು ₹27 ಕೋಟಿ ವೆಚ್ಚದ ಎಲ್‌ಸಿ ಗೇಟ್ ನಂ.77 ಬದಲಿಗೆ ನಿರ್ಮಾಣವಾಗಲಿರುವ ಮೇಲ್ಸೇತುವೆ ಕಾಮಗಾರಿಗೆ ಸೋಮವಾರ ರೈಲ್ವೆ ಸಚಿವ ಬಿ. ಸೋಮಣ್ಣ ಚಾಲನೆ ನೀಡಬೇಕಿತ್ತು. ಆ ಸಂದರ್ಭದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಸಂಸದರು, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ನಮೂದಿಸಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರೆ, ಶಿವರಾಜ್ ತಂಗಡಗಿ ಕೂಡ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತದೆ ಎಂದು ಹೇಳಿದ ತಂಗಡಗಿ, ರಾಜ್ಯಕ್ಕೆ ಅವಮಾನ ಮಾಡಬೇಡಿ ಎಂದಿದ್ದಾರೆ.

ಈ ವೇಳೆ ವಿಪ ಸದಸ್ಯ ಶಶೀಲ ನಮೋಶಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಅವರು ಕೂಡ ಎಂಟ್ರಿಯಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಮಾತಿನ ಚಕಮಕಿ ನಡೆದಿದೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸಚಿವ ಸೋಮಣ್ಣ ಅವರತ್ತ ಖುರ್ಚಿ ಎಸೆದರು. ಆದರೆ ಅದು ಅವರಿಗೆ ತಾಗಲಿಲ್ಲ. ಅಷ್ಟೇ ಅಲ್ಲ ಸಭಾಂಗಣದಲ್ಲಿದ್ದ ಎಲ್ಲ ಖುರ್ಚಿ ತೂರಾಡಿದರು. ಅಂಗರಕ್ಷಕರು ತಕ್ಷಣ ಮಧ್ಯ ಪ್ರವೇಶಿಸಿ ಸಚಿವರನ್ನು ರಕ್ಷಿಸಿದರು.

ಬಳಿಕ ಕಾರ್ಯಕರ್ತರು ಸಚಿವರ ಕಾರಿನ ಮುಂದೆ ಕುಳಿತು ಪ್ರತಿಭಟನೆ ನಡೆಸಿ ಕಾರ್ಯಕ್ರಮ ಮುಂದುವರಿಯಲು ಅಡ್ಡಿಪಡಿಸಿದರು.

ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಮಧ್ಯಪ್ರವೇಶಿಸಿ ವಾಗ್ವಾದ ಮಾಡದಂತೆ ಬಸವರಾಜ ಕ್ಯಾವಟರ್ ಅವರಲ್ಲಿ ಕೈ ಮುಗಿದು ಹೇಳಿಕೊಂಡರು.

ಘಟನೆ: ಕಾರ್ಯಕ್ರಮಕ್ಕೆ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಆಗಮಿಸಿದ್ದರು.

ನಂತರ ಸ್ಥಳಕ್ಕೆ ಆಗಮಿಸಿದ ಸಚಿವ ಸೋಮಣ್ಣ ಭೂಮಿಪೂಜೆ ನೆರವೇರಿಸಿದರು. ಈ ವೇಳೆ ಬ್ಯಾನರ್ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರದ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಕಾಂಗ್ರೆಸ್ ನಾಯಕರ ಹೆಸರು ಇಲ್ಲದಿರುವುದನ್ನು ಪ್ರಶ್ನಿಸಿ ಶಿವರಾಜ್ ತಂಗಡಗಿ ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವಿಚಾರಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಸೋಮಣ್ಣ ವಿರುದ್ಧ ಘೋಷಣೆ ಕೂಗಿ ಅವರ ಮೇಲೆ ಕುರ್ಚಿ ತೂರಾಟ ನಡೆಸಿದರು. ಅಂಗರಕ್ಷಕರು ತಕ್ಷಣ ಮಧ್ಯ ಪ್ರವೇಶಿಸಿ ಸಚಿವರನ್ನು ರಕ್ಷಿಸಿದರು.

ಬಳಿಕ ಕಾರ್ಯಕರ್ತರು ಸಚಿವರ ಕಾರಿನ ಮುಂದೆ ಕುಳಿತು ಪ್ರತಿಭಟನೆ ನಡೆಸಿ ಕಾರ್ಯಕ್ರಮ ಮುಂದುವರಿಯಲು ಅಡ್ಡಿಪಡಿಸಿದರು.

ಹಿಟ್ನಾಳ ಗ್ರಾಮವು ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಸ್ವಗ್ರಾಮವಾಗಿದ್ದು, ಸದರಿ ಗ್ರಾಮದಲ್ಲೇ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಅವರ ಹೆಸರುಗಳನ್ನು ಬ್ಯಾನರ್ ಹಾಗೂ ವೇದಿಕೆಯಲ್ಲಿ ಉಲ್ಲೇಖಿಸದಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಯಿತು.

ಶಿಲಾನ್ಯಾಸ ಕಲ್ಲಿನಲ್ಲಿ ಎಲ್ಲ ನಾಯಕರ ಹೆಸರುಗಳಿದ್ದರೂ ವೇದಿಕೆ ಕಾರ್ಯಕ್ರಮದಲ್ಲಿ ಹೆಸರುಗಳಿಲ್ಲದ್ದಕ್ಕೆ ಕಾಂಗ್ರೆಸ್ ನಾಯಕರು ವೇದಿಕೆ ಬಳಿ ಹೋಗಲಿಲ್ಲ. ಕೇವಲ 10 ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಸಿದ ಸಚಿವ ಸೋಮಣ್ಣ, ನಂತರ ಸ್ಥಳದಿಂದ ವಾಪಸ್ ತೆರಳಿದರು. ಶಿಷ್ಟಾಚಾರ ಉಲ್ಲಂಘನೆಯ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಉದ್ದೇಶಪೂರ್ವಕ ತಪ್ಪು ನಡೆದಿಲ್ಲ ಎಂದರು.

ಕೊಪ್ಪಳದಲ್ಲಿ ಬಿಜೆಪಿಗರ ಸರ್ವಾಧಿಕಾರ ನಡೆಯುವುದಿಲ್ಲ. ಕಮಲ‌ ಪಡೆಯವರು ಸದ್ದಾಂ ಹುಸೇನರಂತೆ ವರ್ತಿಸುತ್ತಿದ್ದಾರೆ. ವೇದಿಕೆ ಹಾಗೂ ಶಂಕುಸ್ಥಾಪನೆ ಕಲ್ಲಿನಲ್ಲಿ ನಮ್ಮ ಹೆಸರುಗಳೇ ಇಲ್ಲ. ಜನಪ್ರತಿನಿಧಿಗಳಿಗೆ ಗೌರವ ಕೊಡಬೇಕು. ಗೌರವ ಸಿಗದೇ ಇದ್ದಾಗ ನಮ್ಮ ಕಾರ್ಯಕರ್ತರು ಸಹಿಸಿಕೊಂಡು ಕುಳಿತುಕೊಳ್ಳುವುದಿಲ್ಲ. ಕೈ ಕಾರ್ಯಕರ್ತರು ತಂಗಡಗಿ ಪಟಾಲಂ ಎಂದು ಸೋಮಣ್ಣ ಹೇಳಿರುವುದು ಸರಿಯಲ್ಲ, ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಇವರು ಮೋದಿಯನ್ನು ದೇವಮಾನವ ಎಂದು ಹೇಳಿಕೊಳ್ಳುತ್ತಾರೆ. ಇದನ್ನು ಕೊಪ್ಪಳದ ಜನತೆ ಸಹಿಸಿಕೊಳ್ಳುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ