ಹುಬ್ಬಳ್ಳಿ: ಗಣೇಶೋತ್ಸವದೊಳಗೆ ನಗರದ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಿಸಲಾಗುವುದು. ಈ ಕುರಿತು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಜನಸ್ನೇಹಿ ಜಿಲ್ಲಾಡಳಿತದ ಅಂಗವಾಗಿ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ತಾಲೂಕಿನ ಸಾರ್ವಜನಿಕರಿಂದ ಅಹವಾಲು ಹಾಗೂ ಕುಂದುಕೊರತೆ ಅರ್ಜಿ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.ಸತತ ಮಳೆಯಿಂದ ರಸ್ತೆ ದುರಸ್ತಿಗೆ ಅಡ್ಡಿಯಾಗಿದೆ. ಮಳೆನಿಂತ ತಕ್ಷಣ ರಾತ್ರಿ ಮತ್ತು ಹಗಲು ಕೆಲಸ ಮಾಡಿ ತಗ್ಗು- ಗುಂಡಿಗಳನ್ನು ಮುಚ್ಚಲಾಗುವುದು. ಆ ಮೂಲಕ ಹಬ್ಬಕ್ಕೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು.
ಭೂ ಸುರಕ್ಷಾ ಯೋಜನೆ ಮೂಲಕ ದಾಖಲೆಗಳನ್ನು ಡಿಜಟಲೀಕರಣ ಮಾಡಲಾಗುತ್ತಿದೆ. ಈಗಾಗಲೇ ಹುಬ್ಬಳ್ಳಿ ಮತ್ತು ಅಳ್ನಾವರ ತಾಲೂಕಿನಲ್ಲಿ ಶೇ. 100ರಷ್ಟು ದಾಖಲೆ ಡಿಜಟಲೀಕರಣ ಮಾಡಲಾಗಿದೆ. ಉಳಿದ ತಾಲೂಕುಗಳು 6 ತಿಂಗಳಲ್ಲಿ ಶೇ. 100ರಷ್ಟು ದಾಖಲೆ ಡಿಜಟಲೀಕರಣ ಗೊಳಿಸಲಾಗುವುದು. ಸಾರ್ವಜನಿಕರು https://recordroom.karnataka.gov.in./service4 ವೆಬ್‌ಸೈಟ್ ಮೂಲಕ ದಾಖಲೆಗೆ ತಗಲುವ ಮೊತ್ತವನ್ನು ಆನ್‌ಲೈನ್ ಮೂಲಕ ಭರಿಸಿದ ಬಳಿಕ ದಾಖಲೆ ಪಡೆದುಕೊಳ್ಳಬಹುದು. ಭೂ ಸುರಕ್ಷಾ ಯೋಜನೆಯು ನಾಡಾ ಕಚೇರಿಗಳಲ್ಲಿ ಪ್ರಾಯೋಗಿಕ ಹಂತದಲ್ಲಿದೆ. ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಕೇಂದ್ರಗಳಲ್ಲಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.ಇ-ಸ್ವತ್ತು ವಿತರಣೆ ಸಂಬಂಧ ನಿಯಮಾವಳಿಗಳ ಅನ್ವಯ ಅಧಿಕಾರಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ನಿಜವಾದ ಮಾಲೀಕರ ಬಗ್ಗೆ ದತ್ತಾಂಶ ಸಂಗ್ರಹ ಕಾರ್ಯ ನಡೆಯುತ್ತಿದೆ. ಈಗಾಗಲೇ ಬಿ ಖಾತಾ ವಿತರಿಸಲಾಗುತ್ತಿದೆ. ಬಾಕಿಯಿರುವ ಅರ್ಜಿಗಳನ್ನು ಶೀಘ್ರಗತಿಯಲ್ಲಿ ವಿಲೇವಾರಿ ಮಾಡಲಾಗುವುದು ಎಂದರು.
20 ಅರ್ಜಿಗಳ ಸ್ವೀಕಾರ: ಪಾಲಿಕೆಯ 9, ಕಂದಾಯ 5, ಹುಡಾ- 1, ತಾಪಂ 2, ಸರ್ವೇ ಇಲಾಖೆ 2 ಹಾಗೂ ಸಾರಿಗೆ ಸಂಸ್ಥೆಗೆ ಸೇರಿದ 1 ಅರ್ಜಿ ಸ್ವೀಕೃತಗೊಂಡಿವೆ. ರಸ್ತೆ, ಚರಂಡಿ ವ್ಯವಸ್ಥೆ, ಆಶ್ರಯ ಮನೆ, ತೆರಿಗೆ, ಕಟ್ಟಡ ಪರವಾನಗಿಗೆ ಸೇರಿದ ಅರ್ಜಿಗಳು ಬಂದಿವೆ. ಐಪಿಜಿಆರ್‌ಎಸ್ ಪೋರ್ಟಲ್ ನಲ್ಲಿ ಯಾವ ಅರ್ಜಿಗಳು ಯಾವ ಹಂತದಲ್ಲಿವೆ. ಯಾವ ಅಧಿಕಾರಿಗಳ ಕಡೆ ಇವೆ ಎಂಬುದನ್ನು ತಿಳಿಯಬಹುದಾಗಿದೆ ಎಂದು ತಿಳಿಸಿದರು.ದೇವಸ್ಥಾನ ಅಭಿವೃದ್ಧಿಗೆ ಕ್ರಮ: ಉಣಕಲ್ ನಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಪಾಲಿಕೆಯಿಂದ ಅಲ್ಲಿ ವಾಸವಿರುವರಿಗೆ ಬೇರೆ ಸ್ಥಳದಲ್ಲಿ ವಸತಿ ಸೌಕರ್ಯ ಕಲ್ಪಿಸುವ ಹಾಗೂ ಭೂ ಸ್ವಾಧೀನ ಕಾರ್ಯ ಕೈಗೊಳ್ಳಲಾಗುತ್ತದೆ. 30 ಅಡಿ ರಸ್ತೆ, ಅಂಗಡಿ ಹಾಗೂ ಶೌಚಾಲಯ ಮತ್ತು ಮೂಲ ಸೌಕರ್ಯ ಕಲ್ಪಿಸಲು ದೇವಸ್ಥಾನ ಪ್ರದೇಶದಲ್ಲಿನ ಸುಮಾರು 65 ಮನೆ ತೆರವು ಮಾಡಲಾಗುವುದು ಎಂದು ತಿಳಿಸಿದರು.
ಇಲ್ಲಿ ಸರ್ವೇ ಕಾರ್ಯ ಸಹ ಮುಕ್ತಾಯವಾಗಿದೆ. ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಎಎಸ್‌ಐ (ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ) ಸಂಸ್ಥೆಯಿಂದ ಪರವಾನಗಿ ಪಡೆಯಬೇಕಾಗುತ್ತದೆ. ಸಂಸ್ಥೆಯವರು ಜಂಟಿ ಸರ್ವೇ ಕಾರ್ಯ ಕೈಗೊಳ್ಳಲಿದ್ದಾರೆ. ಸಂಸ್ಥೆಯಿಂದ ಎನ್‌ಓಸಿ ದೊರೆತ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದರು.ಒತ್ತುವರಿ ತೆರವುಗೊಳಿಸಿ: ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಸಾರ್ವಜನಿಕರು, ರೇವಡಿಹಾಳ ಗ್ರಾಮದಲ್ಲಿ ಡೆವೆಲಪರ್ಸ್ ಒಬ್ಬರು ಸರ್ಕಾರಿ ರಸ್ತೆ ಒತ್ತುವರಿ ಮಾಡಿಕೊಂಡಿರುವ ಮತ್ತು ಗ್ರಾಮದ ಕೆರೆ ಅಭಿವೃದ್ಧಿಗೆ ಕ್ರಮವಹಿಸುವಂತೆ ಅರ್ಜಿ ಸಲ್ಲಿಸಿದರು. ಈ ಹಿಂದೆಯೂ ಈ ಕುರಿತಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಇನ್ನೂ ಕೆಲವರು ಆಶ್ರಯ ಯೋಜನೆಯಡಿ ಮನೆ ವಿತರಣೆ, ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ನಿಂದ ಆಗುತ್ತಿರುವ ತೊಂದರೆ, ಉಣಕಲ್ ಗ್ರಾಮದಲ್ಲಿ ಅರ್ಧಂಮರ್ದ ಆಗಿರುವ ರಸ್ತೆ ಅಗಲೀಕರಣ, ಪಾಲಿಕೆಗೆ ಟ್ಯಾಕ್ಸ್ ಕಟ್ಟಿದ್ದರೂ ಬಾಕಿ ಇದೆ ಎಂದು ಕೊಟ್ಟಿರುವ ನೋಟಿಸ್ ಕುರಿತಂತೆ ಅಹವಾಲು ಸಲ್ಲಿಸಿದರು.ಫ್ಲೈಓವರ್ ಕಾಮಗಾರಿ ಸೆ.10ಕ್ಕೆ: ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಿಂದ ಹೊಸೂರು ಹಾಗೂ ವಿಜಯಪುರ ರಸ್ತೆ ಕಡೆಗೆ ಕೈಗೊಂಡಿರುವ ಮೇಲ್ಸೇತುವೆ ಕಾಮಗಾರಿ ಸೆ. 10ರಂದು ಮುಕ್ತಾಯವಾಗಲಿದೆ. ಶೇ. 90ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಆ.25ರಂದು ಖುದ್ದಾಗಿ ಕಾಮಗಾರಿ ಪರಿಶೀಲಿಸುವೆ. ಆ. 30ಕ್ಕೆ ಹಳೆ ಬಸ್ ನಿಲ್ದಾಣವನ್ನು ಪುನಃ ಆರಂಭಿಸಲು ನಿರ್ಧರಿಸಲಾಗಿದೆ. ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದ ಭೂ ಸ್ವಾಧೀನ ಪ್ರಕ್ರಿಯೆಯು ಈಗಾಗಲೇ ಪೂರ್ಣಗೊಂಡಿದೆ. ಗದಗ ರಸ್ತೆಯ ಕಾಮಗಾರಿಯನ್ನು ಅಕ್ಟೋಬರ್ 1ರಿಂದ ಪ್ರಾರಂಭಿಸಲಾಗುವುದು ಎಂದರು.
96 ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಶೇ. 519ರಷ್ಟು ಮಳೆಯಾಗಿದೆ. ಮಳೆಯಿಂದ ಜಿಲ್ಲೆಯಲ್ಲಿ ಸುಮಾರು 96 ಮನೆಗಳಿಗೆ ಹಾಮಿಯಾಗಿದೆ. ಜೀವಹಾನಿ, ಜಾನುವಾರು ಹಾನಿಯಾಗಿಲ್ಲ. ಬೆಳೆಗಳ ಹಾನಿ ಕುರಿತು ಪರಿಸೀಲಿಸಿ ವರದಿ ನೀಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.ನೆಹರು ಮೈದಾನ ಪರಿಶೀಲಿಸಿ, ಕ್ರಮ: ಹುಬ್ಬಳ್ಳಿಯ ನೆಹರು ಮೈದಾನ ಅನೇಕ ಕಾರ್ಯಕ್ರಮಗಳ ಆಯೋಜನೆಗೆ ಸೂಕ್ತ ಸ್ಥಳವಾಗಿದೆ. ಆ. 15ರಂದು ನಡೆದ ಸ್ವಾತಂತ್ರ್ಯೋತ್ಸವ ವೇಳೆ ಶಾಲಾ ಮಕ್ಕಳು ಕೆಸರಿನಲ್ಲಿಯೇ ಪರೇಡ್ ಮಾಡಿರುವ ಕುರಿತು ಗಮನಸೆಳೆದಾಗ ಮೈದಾನ ಪರಿಶೀಲಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
ಈ ಕುರಿತಂತೆ ಆ. 16ರಂದು ಕನ್ನಡಪ್ರಭ ಕೆಸರುಗದ್ದೆಯಲ್ಲಿ ಸ್ವಾಂತ್ರ್ಯೋತ್ಸವ ಕಾರ್ಯಕ್ರಮ ತಲೆಬರಹದಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಈ ಸಂದರ್ಭದಲ್ಲಿ ಉಪವಿಭಾಧಿಕಾರಿ ಶಾಲಂ ಹುಸೇನ್, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಸಂತೋಷ ಬಿರಾದಾರ, ಹುಬ್ಬಳ್ಳಿ ಶಹರ ತಹಸೀಲ್ದಾರ್ ಮಹೇಶ ಗಸ್ತೆ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ತಾಪಂ ಇಒ ಡಾ. ರಾಮಚಂದ್ರ ಹೊಸಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.