ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಬಿಜೆಪಿಯ ಶಾಸಕರು ಇರುವ ಕ್ಷೇತ್ರಗಳಿಗೆ ಬೇಕಾಗಿರುವ ಶುದ್ಧೀಕರಿಸಿರುವ ವೃಷಾಭಾವತಿ ನೀರು ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಕ್ಕೆ ಏಕೆ ಬೇಡ, ರೈತರಿಗೆ ಒಳಿತು ಮಾಡಿದರೆ ಕಾಂಗ್ರೆಸ್ ಪರವಾಗಿರುತ್ತಾರೆ ಎಂಬ ಭಾವನೆಯಿಂದ ವಿರೋಧ ಮಾಡುವವರಿಗೆ ಉತ್ತರಿಸುವ ಅಗತ್ಯವಿಲ್ಲ, ರೈತಪರ ಕೆಲಸ ಮಾಡುವುದು ಮಾತ್ರ ನನ್ನ ಕರ್ತವ್ಯ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.ಯಲಚಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ನೂತನ ಶಾಲಾ ಕೊಠಡಿಯನ್ನು ಶಾಸಕ ಎನ್.ಶ್ರೀನಿವಾಸ್ ಉದ್ಟಾಟಿಸಿ ಮಾತನಾಡಿದರು.
ಕೇಂದ್ರ ಬಿಜೆಪಿ ಸರ್ಕಾರ ಕೆಸಿ ವ್ಯಾಲಿ ಯೋಜನೆಯನ್ನು ಶ್ಲಾಘಿಸಿ ಅಭಿನಂದನಾ ಪತ್ರ ನೀಡಿದ್ದು, ಬಿಜೆಪಿ ಶಾಸಕರೇ ನಮ್ಮ ಕ್ಷೇತ್ರಕ್ಕೆ ಶುದ್ಧೀಕರಿಸಿದ ನೀರು ನೀಡಲು ಒತ್ತಾಯ ಮಾಡುತ್ತಿದ್ದಾರೆ. ಈಗಗಾಲೇ ಯಲಹಂಕ ಕ್ಷೇತ್ರದಲ್ಲಿ ಕೆರೆ ತುಂಬಿದ್ದು, ದೊಡ್ಡಬಳ್ಳಾಪುರ, ನೆಲಮಂಗಲ ನಂತರ ತುಮಕೂರು ಗ್ರಾಮಾಂತರಕ್ಕೂ ನೀರು ಹೋಗಲಿದೆ. ಈ ಯೋಜನೆ ಚಾಲನೆ ಸಿಕ್ಕಿ 1 ವರ್ಷವಾಗಿದೆ. ಯಲಹಂಕದಲ್ಲಿ ಕೆಲಸವಾಗಿ ನೆಲಮಂಗಲಕ್ಕೆ ಬರುತ್ತಿದೆ ಈಗ ಕೆಲ ಬಿಜೆಪಿ ಜೆಡಿಎಸ್‍ನವರು ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಲಸಗಳ ಬಗ್ಗೆ ಸಂಕಟ, ಹೊಟ್ಟೆ ಉರಿ ಹೆಚ್ಚಾಗಿ, ತಲೆಕೆಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿದರೆ ನಾನೇನು ಮಾಡಲು ಸಾಧ್ಯ, ಸಾರ್ವಜನಿಕರಿಗೆ ಒಳ್ಳೆಯದಾಗುವ ಕೆಲಸ ಮಾಡಬೇಕು ಮಾಡುತ್ತಿದ್ದೇನೆ ಎಂದರು.ವಿಷವೆಂಬ ಅವಿವೇಕದ ಮಾತು:ಬಿಜೆಪಿಯ ಕೆಲವರು ಐಜಿಟಿ, ಇಸ್ರೋ, ನಾಸಾ ವಿಜ್ಞಾನಿಗಳಿಗಿಂತ ಮೇದಾವಿಗಳಂತೆ ವರ್ತನೆ ಮಾಡುತ್ತಿದ್ದಾರೆ. ವಿಷದ ನೀರು ಎಂಬ ಅವಿವೇಕದ ಮಾತನ್ನು ತಿಳಿಸುತ್ತಿದ್ದಾರೆ. ಕೆ.ಸಿ ವ್ಯಾಲಿ ಯೋಜನೆಗಿಂತಲೂ ಅತ್ಯುತ್ತಮ ತಂತ್ರಜ್ಞಾನದಲ್ಲಿ ವೃಷಾಭಾವತಿ ನೀರನ್ನು ಶುದ್ಧೀಕರಿಸಿ ನೆಲಮಂಗಲಕ್ಕೆ ತರಲಾಗುತ್ತಿದೆ. ಶುದ್ಧೀಕರಸದ ಒಂದು ಹನಿಯೂ ನೀರು ನೆಲಮಂಗಲಕ್ಕೆ ಬರುವುದಿಲ್ಲ. ನಾನು ಕ್ಷೇತ್ರದ ಜನರ ಆಶೀರ್ವಾದದಿಂದ ಬಂದಿದ್ದೇನೆ, ಜನರ ರಕ್ಷಣೆ, ಆರೋಗ್ಯ ನನಗೆ ಗೊತ್ತಿದೆ ಅವಿವೇಕದ ಮಾತುಗಳು ಅವರಿಗೆ ಒಂದು ದಿನ ತಿಳಿಯಲಿದೆ ಎಂದರು.
ರೈತರ ಭೇಟಿ:ಕೆ.ಸಿ ವ್ಯಾಲಿ ಯೋಜನೆಯ ಲಾಭ ಪಡೆದಿರುವ ರೈತರಜೊತೆ ಸಂವಾದ ಹಾಗೂ ಅವರ ಗ್ರಾಮಗಳ ಭೇಟಿಗೆ ನಾನೇ ನನ್ನ ಸ್ವಂತ ಹಣ ಖರ್ಚು ಮಾಡಿ ಕರೆದುಕೊಂಡು ಹೋಗುತ್ತೇನೆ, ರೈತರಿಗೆ ಆಗಿರುವ ಲಾಭವನ್ನು ನೋಡಲಿ ಎಂದರು.
ಈ ಸಂದರ್ಭದಲ್ಲಿ ಬಿಇಓ ರಮೇಶ್, ಶ್ರೀನಿವಾಸಪುರ ಗ್ರಾ.ಪಂ. ಅಧ್ಯಕ್ಷ ನಟರಾಜು, ಮಾಜಿ ಅಧ್ಯಕ್ಷ ಹನುಮಂತರಾಜು, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂಬಿಟಿ ರಾಮಕೃಷ್ಣಪ್ಪ, ರಾಜ್ಯ ಪ್ರಶಸ್ತಿ ವಿಜೇತ ಬಸಣ್ಣ, ಮುಖಂಡರಾದ ಎಂ.ಕೆ ನಾಗರಾಜು, ಟಿ.ನಾಗರಾಜು, ಸಿ.ಎಂಗೌಡ, ಚಿಕ್ಕಣ್ಣ, ಚಿಕ್ಕಹನುಮೇಗೌಡ, ಗ್ರಾಮಪಂಚಾಯಿತಿ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.