ಮುಕ್ತ ವಿವಿ ಕುಲಸಚಿವರ ಕಚೇರಿ ಬಾಗಿಲಿಗೆ ನೋಟಿನ ತೋರಣ ಕಟ್ಟಿ ನೌಕರರ ಪ್ರತಿಭಟನೆ

KannadaprabhaNewsNetwork |  
Published : Mar 19, 2025, 12:32 AM IST
8 | Kannada Prabha

ಸಾರಾಂಶ

ಕುಲಸಚಿವರ ಕಚೇರಿ ಸಿಬ್ಬಂದಿ ನಡುವೆ ಕೆಲಕಾಲ ಮಾತಿನ ಚಕಮಕಿ

ಕನ್ನಡಪ್ರಭ ವಾರ್ತೆ ಮೈಸೂರು

ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕಾಯಂ ಶಿಕ್ಷಕೇತರ ನೌಕರರ ಸಂಘದವರು ವಿವಿ ಕುಲಸಚಿವರ ಕಚೇರಿ ಬಾಗಿಲಿಗೆ ನೋಟಿನ ತೋರಣ ಕಟ್ಟಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಸಿಬ್ಬಂದಿ ವರ್ಗಾವಣೆ, ಪದನಾಮ ಬದಲಾವಣೆ, ಪದೋನ್ನತಿ ಇನ್ನಿತರ ವಿಚಾರಗಳಿಗೆ ಲಂಚದ ಬೇಡಿಕೆ ಹಿನ್ನೆಲೆಯಲ್ಲಿ ಕುಲಸಚಿವರ ಕಚೇರಿ ಮುಂಭಾಗದಲ್ಲಿ ನೋಟಿನ ತೋರಣ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನೌಕರರು ಮತ್ತು ಕುಲಸಚಿವರ ಕಚೇರಿ ಸಿಬ್ಬಂದಿ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಮುಕ್ತ ವಿವಿ ಆಡಳಿತ ಮಂಡಳಿ ಕೈಗೊಂಡಿರುವ ಕೆಲವೊಂದು ಕ್ರಮ, ನಿರ್ಣಯಗಳಿಂದ ವಿಶ್ವವಿದ್ಯಾನಿಲಯ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮಾರಕವಾಗಿದೆ. ವಿವಿಗೆ ಮಂಜೂರಾಗಿರುವ ಬೋಧಕ ಮತ್ತು ಬೋಧಕೇತರರ ಹುದ್ದೆಗಳಿಗಿಂತಲೂ ಹೆಚ್ಚು ಹಾಗೂ ನಿಯಮ ಉಲ್ಲಂಘಿಸಿ ತಾತ್ಕಾಲಿಕವಾಗಿ ಸಿಬ್ಬಂದಿ ನೇಮಿಸಿಕೊಂಡಿದ್ದು, ಈ ನೇಮಕಾತಿಯನ್ನು ಕೂಡಲೇ ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ವಿವಿ ಪ್ರಾದೇಶಿಕ, ಜಿಲ್ಲಾ ಕೇಂದ್ರಗಳ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸುವುದು ಹಾಗೂ ಹಾಲಿ ತಾಲೂಕು, ಗ್ರಾಮಗಳ ಮಟ್ಟದಲ್ಲಿ ಪ್ರಾರಂಭಿಸಿರುವ ಪ್ರಾದೇಶಿಕ ಕೇಂದ್ರಗಳನ್ನು ಮುಚ್ಚಲು ಕ್ರಮ ವಹಿಸಬೇಕು. ಕೆಲವು ವರ್ಷಗಳಿಂದ ವಿವಿ ಎಲ್ಲಾ ವರ್ಗದ ಸಿಬ್ಬಂದಿಗೆ ಆರ್ಥಿಕ ಅಭದ್ರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳ ಜಮಾ ಖರ್ಚಿನ ಅಂಕಿ ಅಂಶಗಳನ್ನು ಬ್ಯಾಂಕಿನ ಹೆಸರಿನೊಂದಿಗೆ ಒದಗಿಸಿ ಹಾಗೂ ವಿವಿಯ ವೇತನ ಮತ್ತು ಪಿಂಚಣಿಗೆ ವಿವಿಧ ಬ್ಯಾಂಕ್‌ ಗಳಲ್ಲಿ ಠೇವಣಿ ಇಟ್ಟಿರುವ ಹಣದ ಮಾಹಿತಿಯನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ವಿವಿ ನಿಗದಿಪಡಿಸಲಾಗಿರುವ ಪ್ರತ್ಯೇಕ ವೇತನ ಮತ್ತು ಪಿಂಚಣಿ ನಿಧಿಗಳನ್ನು ಯಾವುದೇ ಸಂದರ್ಭದಲ್ಲೂ ಇತರೆ ವೆಚ್ಚಗಳಿಗೆ ಬಳಕೆ ಮಾಡದಂತೆ ತುರ್ತಾಗಿ ಪರಿನಿಯಮ ರಚಿಸಿ, ವಿವಿಯಲ್ಲಿ ಯಾವುದೇ ಕಟ್ಟಣ ಕಾಮಗಾರಿ, ಹೊಸ ಯೋಜನೆ ಪ್ರಾರಂಭಿಸಿದೆ ಸ್ಥಗಿತಗೊಳಿಸುವಂತೆ ಅವರು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಎಸ್.ಎನ್. ಸತೀಶ್, ಪದಾಧಿಕಾರಿಗಳಾದ ನಾಗೇಂದ್ರ, ಎನ್. ಪ್ರದೀಪ್ ಗಿರಿ, ಟಿ. ರವೀಂದ್ರ, ಗೀತಾ, ಸಿ.ಎಂ. ಕೃಷ್ಣೇಗೌಡ, ಬಸವರಾಜು, ಎಚ್.ಎಂ. ನಾಗರಾಜಮೂರ್ತಿ ಮೊದಲಾದವರು ಇದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌