ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ತಾಲೂಕಿನ ಎರ್ಲಪಾಡಿ ಕರ್ವಾಲು ವಿಷ್ಣು ಮೂರ್ತಿ ದೇವಾಲಯಕ್ಕೆ ಖ್ಯಾತ ಕ್ರಿಕೆಟಿಗ, ಭಾರತ ತಂಡದ ಮಾಜಿ ನಾಯಕ ರವಿಶಂಕರ್ ಜಯದ್ರಥಾ ಶಾಸ್ತ್ರಿ (ರವಿಶಾಸ್ರಿ ) ಮಂಗಳವಾರ ಭೇಟಿ ನೀಡಿದರು. ಮೂಲ ನಾಗದೇವರಿಗೆ ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ, ಕಲ್ಪೋಕ್ತ ಪೂಜೆ, ನಾಗತಂಬಿಲ ಸೇವೆ ಅರ್ಪಿಸಿದರು ಬಳಿಕ ವಿಷ್ಣು ಮೂರ್ತಿ ದೇವರಿಗೆ ಮಹಾಪೂಜೆ ಸಲ್ಲಿಸಲಾಯಿತು.ಈ ಸಂದರ್ಭ ಅವರ ಸಂಬಂಧಿಗಳಾದ ಸಂತೋಷ್ ಶಾಸ್ತ್ರಿ , ಕವಿತಾ ಶಾಸ್ತ್ರೀ ಹಾಗೂ ಕುಟುಂಬದವರು, ದೇವಾಲಯ ಮೊಕ್ತೇಸರ ಅನಂತ ಪಟ್ಟಾಭಿರಾವ್, ದೇವಾಲಯ ಅಭಿವೃದ್ದಿ ಸಮಿತಿ ಅಧ್ಯಕ್ಷ ಭೋಜ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ರಮೇಶ್ ರಾವ್, ಸತೀಶ್ ರಾವ್, ಪವನ್ ಜೈನ್, ಕಸ್ತೂರಿ ಹಾಜರಿದ್ದರು.
ಪೂರ್ವಜರ ಮೂಲ ಸ್ಥಾನ:ರವಿಶಾಸ್ತ್ರಿ ಅವರ ಪೂರ್ವಜರು ಎರ್ಲಪಾಡಿಯ ಕರ್ವಾಲಿಗೆ ಸೇರಿದವರು, 1950ರ ದಶಕದಲ್ಲಿ ರವಿಶಾಸ್ತ್ರಿ ಅವರ ಅಜ್ಜ ಎಂ.ವಿ.ಶಾಸ್ತ್ರಿ ಮಂಗಳೂರಿನ ಪ್ರಸಿದ್ಧ ವೈದ್ಯರಾಗಿದ್ದರು. ಬಳಿಕ ರವಿಶಾಸ್ತ್ರಿ ಅವರು ತಂದೆ ಜಯದ್ರಥ ಶಾಸ್ತ್ರಿ ಅಂದಿನ ಮದ್ರಾಸ್‌ನಲ್ಲಿ ಶಿಕ್ಷಣ ಮುಗಿಸಿ ಮುಂಬೈಯಲ್ಲಿ ವೈದ್ಯರಾಗಿ ಅಲ್ಲೆ ನೆಲೆ ನಿಂತರು. ಮುಂಬೈಯಲ್ಲೆ ಹುಟ್ಟಿ ಬೆಳೆದ ರವಿಶಾಸ್ತ್ರೀ ಅಲ್ಲೇ ಶಿಕ್ಷಣ ಪಡೆದು ದೇಶದ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾದರು.
14 ವರ್ಷಗಳ ಹಿಂದೆ ಪತ್ನಿ ಸಮೇತ ಸ್ಥಳಕ್ಕೆ ಭೇಟಿ ನೀಡಿದ್ದ ಅವರು ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ಅವರು ಮಗಳು ಅಲೈಕಾಳನ್ನು ಪಡೆದರು. ಅಂದಿನಿಂದ ವಾರ್ಷಿಕವಾಗಿ ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತಿದ್ದಾರೆ. ಶಾಸ್ತ್ರಿ 2007ರಿಂದ 2025 ರ ವರೆಗೆ ಒಟ್ಟು 13 ಬಾರಿ ಕರ್ವಾಲು ದೇವಸ್ಥಾನಕ್ಕೆ ಆಗಮಿಸಿ ನಾಗನಿಗೆ ಪೂಜೆ ಸಲ್ಲಿಸುತ್ತಿದ್ದಾರೆ.