ಚನ್ನಪಟ್ಟಣ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿವೆ. ದುಡಿಯುವ ಕೈಗಳಿಗೆ ಅಧಿಕಾರ ಸಿಕ್ಕಾಗ ಮಾತ್ರ ಬದಲಾವಣೆ ಸಾಧ್ಯ. ಈ ನಿಟ್ಟಿನಲ್ಲಿ ಸರ್ವೋದಯ ಕರ್ನಾಟಕ ಪಕ್ಷವನ್ನು ಸಶಕ್ತವಾಗಿ ಸಂಘಟಿಸಿ ಮುಂದಿನ ದಿನಗಳಲ್ಲಿ ಪಂಚಾಯಿತಿಯಿಂದ ಪಾರ್ಲಿಮೆಂಟ್ ಚುನಾವಣೆವರೆಗೆ ಸ್ಪರ್ಧಿಸಲು ನಿರ್ಧರಿಸಲಾಗಿದೆ ಎಂದು ರೈತ ಸಂಘದ ಗೌರವಾಧ್ಯಕ್ಷ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ವರಿಷ್ಠ ಚಾಮರಸ ಮಾಲಿ ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹಿತದೃಷ್ಟಿಯಿಂದ ಸರ್ವೋದಯ ಕರ್ನಾಟಕ ಪಕ್ಷ ಸಂಘಟನೆ ಅವಶ್ಯ. ಈಗಾಗಲೇ ೧೫ ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ರಚಿಸಲಾಗಿದೆ. ಕೇಂದ್ರ ಸರ್ಕಾರದ ಮೇಲೆ ರೈತರಿಗೆ ಸಾಕಷ್ಟು ನಿರೀಕ್ಷೆ ಇತ್ತು, ಆದರೆ, ಅದು ಹುಸಿಯಾಗಿದೆ. ಅವರ ಆಶ್ವಾಸನೆ ಎಲ್ಲ ಸುಳ್ಳಲಾಗಿದೆ. ಸ್ವಾಮಿನಾಥನ್ ವರದಿ ಜಾರಿಯಾಗಲಿಲ್ಲ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದರು, ಅದನ್ನು ಮಾಡಲಿಲ್ಲ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದರು, ಆದರೆ, ಅದನ್ನು ಮಾಡಲಿಲ್ಲ. ಉದ್ಯೋಗ ಸಹ ಸೃಷ್ಟಿಯಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದಾನಿ, ಅಂಬಾನಿಯಂತವರ ೪೦ ಸಾವಿರ ಕೋಟಿ ರು. ಕಾರ್ಪೋರೇಟ್ ಸಾಲ ಮನ್ನಾ ಮಾಡಲಾಗಿದೆ. ಅವರ ಅನುಕೂಲಕ್ಕೇ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಡೀಸೆಲ್, ಪೆಟ್ರೋಲ್, ರಸಗೊಬ್ಬರ, ಕೀಟನಾಶಕ ಸೇರಿದಂತೆ ಪ್ರತಿಯೊಂದರ ಬೆಲೆ ಹೆಚ್ಚಳಗೊಂಡಿದ್ದು, ಕೃಷಿಕರು ಸಂಕಷ್ಟ ಎದುರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಪಹಣಿ, ಭೂಮಾಪನ, ಮುದ್ರಾಂಕ ಸೇರಿದಂತೆ ಎಲ್ಲ ಶುಲ್ಕಗಳನ್ನು ಹೆಚ್ಚಳ ಮಾಡಿದ್ದಾರೆ. ಗ್ಯಾರಂಟಿ ಯೋಜನೆ ನೀಡಿದರೆ ಸಾಕು ಎಂದುಕೊಂಡಿದ್ದಾರೆ. ಬಿಜೆಪಿ ವಿರುದ್ಧ ಶೇ.೪೦ ಕಮಿಷನ್ ಆರೋಪ ಹೊರೆಸಿ ಅಧಿಕಾರಕ್ಕೆ ಬಂದವರು, ಅದನ್ನೇ ಮಾಡುತ್ತಿದ್ದಾರೆ. ರೈತರು ತಮ್ಮದೇ ಆದ ರಾಜಕೀಯ ವೇದಿಕೆಯನ್ನು ನಿರ್ಮಿಸಲು ನಿರ್ಧರಿಸಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯಿಂದ ಲೋಕಸಭೆ ಚುನಾವಣೆಯವರೆಗೆ ಎಲ್ಲ ಚುನಾವಣೆಯಲ್ಲೂ ಸ್ಪರ್ಧಿಸಲು ನಿರ್ಧರಿಸಿದೆ ಎಂದರು.ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆ ರೈತರ ಪಾಲಿಗೆ ಮಾರಕವಾಗಿದ್ದು, ಇದನ್ನು ಹಿಂದಕ್ಕೆ ಪಡೆಯಬೇಕು. ಕೃಷಿ ಬೆಲೆ ಆಯೋಗ ಸ್ಥಾಪಿಸಿ ಪರಿಣಿತರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ, ೧೫ ಸಾವಿರ ಕೋಟಿ ರು. ಮೀಸಲಿಡಬೇಕು. ಕಳೆದ ಏಪ್ರಿಲ್‌ನಿಂದ ಇದುವರೆಗೆ ೧೧೮೨ ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಇಡೀ ದೇಶದಲ್ಲಿ ದಿನಕ್ಕೆ ೩೬ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು ರಾಷ್ಟ ಹಾಗೂ ರಾಜ್ಯ ಮಟ್ಟದಲ್ಲಿ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ವಿಭಾಗೀಯ ಅಧ್ಯಕ್ಷ ಕೆ.ಮಲ್ಲಯ್ಯ, ಮುಖಂಡರಾದ ಕುಮಾರಸ್ವಾಮಿ, ಗೋವಿಂದರಾಜು, ಪ್ರಸನ್ನ ಗೌಡ, ರಾಮೇಗೌಡ ಹೊಸಪಾಳ್ಯ ಲೋಕೇಶ್ ಇತರರಿದ್ದರು.ಕೋಟ್...........
ರಾಜಕೀಯ ಪಕ್ಷಗಳಿಗೆ ರೈತರ ಕುರಿತು ನಿಜವಾದ ಕಾಳಜಿ ಇದ್ದಲ್ಲಿ, ರಾಜ್ಯದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ಎದುರಾಗಲಿದ್ದು, ಅದರಲ್ಲಿ ಚನ್ನಪಟ್ಟಣವನ್ನು ರೈತರಿಗೆ ಬಿಟ್ಟುಕೊಡಬೇಕು. ರಾಜಕೀಯ ಪಕ್ಷಗಳ ಸ್ಪರ್ಧೆ ನೋಡಿ ಮೂರು ಕ್ಷೇತ್ರಗಳಲ್ಲಿ ಏನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ.-ಚಾಮರಸಮಾಲಿ ಪಾಟೀಲ್, ರೈತ ಮುಖಂಡ
ಪೊಟೋ: ೨೪ಸಿಪಿಟಿ೧: ಚನ್ನಪಟ್ಟಣದಲ್ಲಿ ರೈತ ಸಂಘದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು.