ಉತ್ಸವ ಅಚ್ಚುಕಟ್ಟಾಗಲು ಕಾರ್ಯ ಪ್ರವೃತ್ತರಾಗಿ

KannadaprabhaNewsNetwork |  
Published : May 07, 2026, 02:45 AM IST
ಪೋಟೋ ಕನಕಗಿರಿಯ ತಾ.ಪಂ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ನಡೆಯಿತು.   | Kannada Prabha

ಸಾರಾಂಶ

ಉತ್ಸವಕ್ಕೆ ಕಳೆ ತರುವ ಕಲಾವಿದರಿಗೆ ಗೌರವ ಸಮರ್ಪಣೆಗೆ ಬೇಕಾದ ಎಲ್ಲ ಸಾಮಗ್ರಿ ಹೊಂದಿಸಿಕೊಳ್ಳಬೇಕು. ಕಾರ್ಯಕ್ರಮ ನಡೆಯುವಾಗ ಗೊಂದಲ ಮಾಡಿಕೊಳ್ಳಬಾರದು

ಕನಕಗಿರಿ: 2026ರ ಕನಕಗಿರಿ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಅಧಿಕಾರಿಗಳು ಹಾಗೂ ಜವಾಬ್ದಾರಿ ವಹಿಸಿರುವ ಸಮಿತಿಯವರು ಕಾರ್ಯ ಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಸೂಚಿಸಿದರು.

ಅವರು ಇದೇ ತಿಂಗಳ 16 ಹಾಗೂ 17ರಂದು ನಡೆಯುವ ಕನಕಗಿರಿ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ಬುಧವಾರ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಇಲಾಖೆಯ ಅಧಿಕಾರಿ ಒಳಗೊಂಡ ಉತ್ಸವ ಆಚರಣಾ ಸಮಿತಿಗಳೊಂದಿಗೆ ಮಾತನಾಡಿದರು.

ಉತ್ಸವಕ್ಕೆ ಕಳೆ ತರುವ ಕಲಾವಿದರಿಗೆ ಗೌರವ ಸಮರ್ಪಣೆಗೆ ಬೇಕಾದ ಎಲ್ಲ ಸಾಮಗ್ರಿ ಹೊಂದಿಸಿಕೊಳ್ಳಬೇಕು. ಕಾರ್ಯಕ್ರಮ ನಡೆಯುವಾಗ ಗೊಂದಲ ಮಾಡಿಕೊಳ್ಳಬಾರದು. ಉತ್ಸವದಲ್ಲಿ ಭಾಗಿಯಾದ ಎಲ್ಲ ಕಲಾವಿದರಿಗೂ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಸಬೇಕು ಎಂದು ಸಾಂಸ್ಕೃತಿಕ ಸಮಿತಿಗೆ ಆದೇಶಿಸಿದರು.

ಇನ್ನೂ ಸಮಿತಿವಾರು ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಅತಿಥಿಗಳ ಸ್ವಾಗತ, ವಸತಿ, ಊಟ, ಸಾರಿಗೆ, ಗಣ್ಯರಿಗೆ ಸನ್ಮಾನ, ಶಿಷ್ಟಾಚಾರದ ಬಗ್ಗೆ ಗಮನ ಹರಿಸಲು ಸಹಾಯಕ ಆಯುಕ್ತರ ಅಧ್ಯಕ್ಷತೆಯ ಸ್ವಾಗತ ಸಮಿತಿಗೆ ಸೂಚನೆ ನೀಡಿದರು. ಜನಸಂದಣಿ ನಿಯಂತ್ರಣಕ್ಕಾಗಿ ನಗರದ ಅಲ್ಲಲ್ಲಿ ಬ್ಯಾರಿಕೆಡ್ ಹಾಕಬೇಕು. ಜತೆಗೆ ಮುಖ್ಯ ವೇದಿಕೆಯ ಮುಂಭಾಗ, ಅಕ್ಕ-ಪಕ್ಕದಲ್ಲಿ ವ್ಯವಸ್ಥೆ ಮಾಡಬೇಕು ಎಂದು ವೇದಿಕೆ ಸಮಿತಿಗೆ ಸೂಚನೆ ನೀಡಿದರು.

ಎಪಿಎಂಸಿ ಆವರಣದ ಓಪನ್ ಶೆಡ್ ನಲ್ಲಿ ಉತ್ಸವ ಬರುವವರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಆಹಾರ ತಯಾರಿಸುವಾಗ ಜಾಗೃತಿವಹಿಸಬೇಕು. ಶುಚಿತ್ವ ಕಾಪಾಡಿಕೊಳ್ಳಬೇಕು. ಆಹಾರ ಶುಚಿ, ರುಚಿಯ ಬಗ್ಗೆ ಕಾಳಜಿ ವಹಿಸಬೇಕು. ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು ತಂಡಗಳ ರಚಿಸಿ ಎಲ್ಲರಿಗೂ ಊಟ ಬಡಿಸುವಂತಾಗಬೇಕು ಎಂದು ಆಹಾರ ಸಮಿತಿಗೆ ಸೂಚಿಸಿದರು.

ಅಲ್ಲದೇ ಆಯಾ ಕ್ರೀಡಾ ತಂಡಗಳ ವಿವರ, ಪಾವತಿಸಬೇಕಾದ ಸಂಭಾವನೆ ಎಲ್ಲವೂ ಪಾರದರ್ಶಕವಾಗಿರಬೇಕು. ಕಲಾವಿದರು, ಕ್ರೀಡಾಪಟುಗಳು ಹಾಗೂ ಪತ್ರಕರ್ತರಿಗೆ ರೂಮು ಕಾಯ್ದಿರಿಸುವ ಎಲ್ಲ ಕಡೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ವಸತಿ ಸಮಿತಿಗೆ ನಿರ್ದೇಶನ ನೀಡಿದರು. ಸುಮಾರು 500 ಬಸ್ಸುಗಳಿಗೆ ಉತ್ಸವದ ಪೋಸ್ಟರ್ ಅಂಟಿಸುವ ಮೂಲಕ ಪ್ರಚಾರ ಕೈಗೊಳ್ಳಬೇಕು. ಮತ್ತಷ್ಟು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ತಿಳಿಸಿದರು.

ಇನ್ನೂ ಹೆಲಿಕ್ಯಾಪ್ಟರ್ ರೈಡಿಂಗ್ ಕಾರ್ಯವು ಸುರಕ್ಷಿತ ಕ್ರಮಗಳೊಂದಿಗೆ ಹಾರಾಟ ನಡೆಸಲು ಮುಂದಾಗಬೇಕು. ಇನ್ನೂ ವೇದಿಕೆಯ ಮುಂಭಾಗದಲ್ಲಿ ತಾತ್ಕಾಲಿಕ ಒಪಿಡಿ ತೆರೆಯಬೇಕು. ನಗರದ ಸ್ವಚ್ಛತೆ ಮತ್ತು ವೇದಿಕೆ ಪ್ರದೇಶದಲ್ಲಿ ಮರಮು ಹಾಕಿಸಿ ನೆಲ ಸಮತಟ್ಟುಗೊಳಿಸಬೇಕು. ದುರಸ್ಥಿಗೊಂಡ ರಸ್ತೆಗಳಿಗೆ ಡಾಂಬರೀಕರಣ ಮಾಡಬೇಕು. ಸಾರ್ವಜನಿಕರಿಗಾಗಿ ನಳ ಹಾಗೂ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಲು ಸೂಚಿಸಿದರು.

ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ.ರಾಮಚಂದ್ರ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ, ತಹಸೀಲ್ದಾರ ವಿಶ್ವನಾಥ ಮುರಡಿ, ತಾಪಂ ಇಒ ಕೆ. ರಾಜಶೇಖರ ಇದ್ದರು.

35 ಸಾವಿರ ಚೇರ್ ವ್ಯವಸ್ಥೆ: ಮುಖ್ಯ ವೇದಿಕೆಯಾಗಿರುವ ರಾಜಾ ಉಡಚಪ್ಪ ನಾಯಕ ವೇದಿಕೆಯ ಮುಂಭಾಗದಲ್ಲಿ 35 ಸಾವಿರ ಆಸನ ಹಾಕಬೇಕು. ಕಳೆದ ಬಾರಿ 25 ಸಾವಿರ ಹಾಕಲಾಗಿತ್ತು. ಈ ಬಾರಿ 10 ಸಾವಿರಕ್ಕೂ ಹೆಚ್ಚು ಮಾಡಬೇಕು. ವೇದಿಕೆ ಸಂಪೂರ್ಣವಾಗಿ ಬೆಳಕಿನಿಂದ ಕೂಡಿರಬೇಕು ಎಂದು ವೇದಿಕೆ ಸಮಿತಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಉತ್ಸವ ನಿಮಿತ್ತ ಪಟ್ಟಣದ 4 ವೃತ್ತಗಳಿಗೆ ಹಾಗೂ 12 ಇತಿಹಾಸ ಪ್ರಸಿದ್ಧ ದೇಗುಲಗಳಿಗೆ ವಿದ್ಯುತ್ ದೀಪಾಲಂಕಾರ ಮಾಡುವುದಕ್ಕಾಗಿ ಪಟ್ಟಿ ಮಾಡಿಕೊಳ್ಳಲಾಗಿದೆ. ಝಗಮಗಿಸುವ ರೀತಿಯಲ್ಲಿ ಜನಾಕರ್ಷಿಸುವಂತೆ ಅಲಂಕಾರ ಮಾಡಬೇಕು. ಫಲಪುಷ್ಪ ಪ್ರದರ್ಶನ, ಪುಸ್ತಕ ಸೇರಿದಂತೆ ರೈತರಿಗೆ ಉಪಯುಕ್ತವಾದ ನಾನಾ ಸಾಮಗ್ರಿ ಪ್ರದರ್ಶನ ಮಳಿಗೆಗಳನ್ನು ಶಿಸ್ತುಬದ್ಧವಾಗಿ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿರುವೆ ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಹೆ-ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಒಪ್ಪಂದ
ಉಡುಪಿ: ಅಗ್ನಿಶಾಮಕ ದಳದ ಬಲವರ್ಧನೆ ಬಿಜೆಪಿ ಯುವಮೋರ್ಚಾ ಮನವಿ