ಇನ್ನೊಬ್ಬರ ಮೀಸಲಾತಿ ಕಸಿಯುತ್ತಿಲ್ಲ: ಯತ್ನಾಳ

KannadaprabhaNewsNetwork |  
Published : May 07, 2026, 02:45 AM IST
ಕುಷ್ಟಗಿ ತಾಲೂಕಿನ ಎಂ. ಗುಡದೂರು ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಶ್ರೀಗಳು ಹಾಗೂ ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಈಗೀನ ರಾಜಕಾರಣಿಗಳಲ್ಲಿ ಧೈರ್ಯ ಇಲ್ಲದಂತಾಗಿದೆ. ದೇವೇಗೌಡ ಪ್ರಧಾನಿ ಇರುವ ಸಂದರ್ಭದಲ್ಲಿ ತಮ್ಮ ಸಮುದಾಯವನ್ನು ಒಬಿಸಿಗೆ ಸೇರ್ಪಡೆ ಮಾಡಿದ್ದಾರೆ.

ಕುಷ್ಟಗಿ: ನಮ್ಮ ಪಂಚಮಸಾಲಿ ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ನಾವು ಮತ್ತೊಬ್ಬರ ಮೀಸಲಾತಿ ಕಸಿದುಕೊಳ್ಳುವ ಕೆಲಸ ಮಾಡುತ್ತಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ತಾಲೂಕಿನ ಎಂ.ಗುಡದೂರು ಗ್ರಾಮದಲ್ಲಿ ನಡೆದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಿತ್ತೂರ ರಾಣಿ ಚೆನ್ನಮ್ಮನವರು ಎಲ್ಲ ಸಮುದಾಯದ ಸಹಕಾರದೊಂದಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ಮಾಡಿದ್ದಾಳೆ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾಳೆ ಎಂದ ಅವರು, ಅವರಂತೆ ನಾವು ಎಲ್ಲರೊಂದಿಗೆ ಬೆರೆಯಬೇಕು ಎಂದರು.

ಈಗೀನ ರಾಜಕಾರಣಿಗಳಲ್ಲಿ ಧೈರ್ಯ ಇಲ್ಲದಂತಾಗಿದೆ. ದೇವೇಗೌಡ ಪ್ರಧಾನಿ ಇರುವ ಸಂದರ್ಭದಲ್ಲಿ ತಮ್ಮ ಸಮುದಾಯವನ್ನು ಒಬಿಸಿಗೆ ಸೇರ್ಪಡೆ ಮಾಡಿದ್ದಾರೆ. ಆದರೆ ಈಗಿರುವ ನಮ್ಮ ರಾಜಕಾರಣಿಗಳು ನಾಟಕ ಕಂಪನಿಯಂತಾಗಿವೆ, ನಮ್ಮ ಸಮಾಜದ ಮಂತ್ರಿಗಳು ಅಧಿಕಾರದ ಆಸೆಗಾಗಿ, ಖುರ್ಚಿಗಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದರು.

ಕೂಡಲ ಸಂಗಮ ಶ್ರೀಗಳ ನೇತೃತ್ವದಲ್ಲಿ 2ಎ ಮೀಸಲಾತಿಗಾಗಿ ದೊಡ್ಡ ಹೋರಾಟಗಳು ನಡೆದವು. ಆದರೆ ಶ್ರೀಗಳ ಹೆಸರಿನಲ್ಲಿ, ಹೋರಾಟದ ಹೆಸರಿನಲ್ಲಿ ಕೋಟಿಗಟ್ಟಲೆ ಹಣವನ್ನು ನಮ್ಮ ಸಮಾಜದ ಹರಿಹರ ಮತ್ತು ಕೂಡಲ ಸಂಗಮ ಟ್ರಸ್ಟ್‌ನವರು ತಿಂದು ತೇಗಿದರು. ಸಮಾಜದ ಒಬ್ಬ ಶಾಸಕ ಅಧಿವೇಶನದಲ್ಲಿ 2ಎ ಮೀಸಲಾತಿ ಕೇಳುವುದನ್ನು ಬಿಟ್ಟು ಐಪಿಎಲ್ ಟಿಕೆಟ್ ಕೇಳಿದರು. ಕೂಡಲ ಸಂಗಮ ಟ್ರಸ್ಟ್‌ನ್ನು ತನ್ನ ಕುಟುಂಬಕ್ಕೆ ಸೀಮಿತಗೊಳಿಸಿಕೊಂಡರು. ಹೋರಾಟಕ್ಕೆ ಮೂರು ಕೋಟಿ ರು. ನೀಡಿದ ಸಂಡೂರು ನಾಗನಗೌಡ ಅವರನ್ನು ಹೊರಹಾಕಿದರು. ಟ್ರಸ್ಟ್‌ನವರ ಕೆಲಸದಿಂದ ಪಂಚಮಸಾಲಿ ಸಮಾಜಕ್ಕೆ ಅಪಮಾನವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ನನಗೂ ಒಂದು ಉತ್ತಮ ಅವಕಾಶ ಬರಲಿದೆ. ಶಾಸಕ ದೊಡ್ಡನಗೌಡ ಪಾಟೀಲ ಅವರು ನನ್ನನ್ನು ಕರೆದುಕೊಂಡು ಹೋಗಲು ಬರುತ್ತಾರೆ. ಆದರೆ ಮುಖ್ಯಮಂತ್ರಿ ಅವಕಾಶ ನೀಡಿದರೆ ಮಾತ್ರ ನಾನು ಅವರೊಂದಿಗೆ ಹೋಗುತ್ತೇನೆ. ಇಲ್ಲವಾದರೆ ಯಾವ ಮಂತ್ರಿ ಸ್ಥಾನವೂ ಬೇಡ ಎಂದರು.

ಈಗಿನ ರಾಜಕಾರಣಿಗಳಲ್ಲಿ ಪ್ರಾಮಾಣಿಕತೆ ಇಲ್ಲ. ಹಣ ಖರ್ಚು ಮಾಡಿ ಟಿಕೆಟ್ ತರ್ತಾರೆ, ಮತದಾರರಿಗೆ ಹಣ ಕೊಟ್ಟು ಎಲೆಕ್ಷನ್ ಮಾಡ್ತಾರೆ, ಗೆದ್ದುಬಂದ ನಂತರದಲ್ಲಿ ವಾಪಸ್‌ ಖರ್ಚು ಮಾಡಿರುವ ಹಣ ತಿನ್ನುವ ಕೆಲಸ ಮಾಡುತ್ತಿದ್ದಾರೆ, ಜನರ ಸೇವೆಯನ್ನು ಮಾಡುತ್ತಿಲ್ಲ ಎಂದರು. ದೊಡ್ಡನಗೌಡ ಪಾಟೀಲ ಅವರು ಸಂಧಾನ ಮಾಡಿದರೆ ಸರಿ, ಇಲ್ಲವಾದರೆ ತಮಿಳುನಾಡಿನಲ್ಲಿ ವಿಜಯ್ ಮುಖ್ಯಮಂತ್ರಿ ಆದಂತೆ ನಾನೂ ಆಗುತ್ತೇನೆ, ಕರ್ನಾಟಕದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕಿಳಿಯಲಿದೆ ಎಂದರು.

ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿದರು. ತುಂಗಭದ್ರಾ ಕಾಡಾ ನಿಗಮ ಅಧ್ಯಕ್ಷ ಹಸನಸಾಬ್‌ ದೋಟಿಹಾಳ, ಡಾ. ಬಸವರಾಜ ಕ್ಯಾವಟರ್, ವಕೀಲ ಬಿ.ಎಸ್. ಪಾಟೀಲ ಮಾತನಾಡಿದರು.

ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಹಾಗೂ ನೆಲೋಗಿಯ ಸಿದ್ದಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಪಂಚಮಸಾಲಿ ಸಮಾಜದ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಅಧ್ಯಕ್ಷತೆ ವಹಿಸಿದ್ದರು.

ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಮಾಲಿಪಾಟೀಲ, ಚಂದ್ರು ನಾಲತವಾಡ, ಅಶೋಕ ಬಳೂಟಗಿ, ಬಸವರಾಜ ಹಳ್ಳೂರು, ಕೆ. ಮಹೇಶ, ಸಿಪಿಐ ವಿಶ್ವನಾಥ ಹಿರೇಗೌಡ್ರ, ಪಿಎಸ್‌ಐ ಚಂದ್ರಪ್ಪ ಇದ್ದರು.

ಅದ್ಧೂರಿ ಮೆರವಣಿಗೆ:

ವಿಜಯಪುರ ಶಾಸಕ ಬಸನಗೌಡ ಯತ್ನಾಳ ಅವರನ್ನು ಪಂಚಮಸಾಲಿ ಸಮಾಜದ ಯುವಕರು ಬೈಕ್ ರ‍್ಯಾಲಿ ಮೂಲಕ ಕರೆತಂದರು. ಈ ಸಂದರ್ಭದಲ್ಲಿ ಮುಂದಿನ ಮುಖ್ಯಮಂತ್ರಿ ಯತ್ನಾಳ ಅವರಿಗೆ ಜಯವಾಗಲಿ ಎಂದು ಜೈಕಾರ ಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಹೆ-ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಒಪ್ಪಂದ
ಉಡುಪಿ: ಅಗ್ನಿಶಾಮಕ ದಳದ ಬಲವರ್ಧನೆ ಬಿಜೆಪಿ ಯುವಮೋರ್ಚಾ ಮನವಿ