ಕನ್ನಡ ಸಾಹಿತ್ಯ ಪರಿಷತ್ತಿನ ೧೧೨ನೇ ಸಂಸ್ಥಾಪನ ದಿನಾಚರಣೆ
ಕನ್ನಡ ನಾಡಿನ ನುಡಿ, ಜಲ, ನೆಲ, ಸಂಸ್ಕೃತಿ ಇವುಗಳನ್ನು ಕಾಪಾಡಿಕೊಂಡು ಹೋಗುವುದೇ ಕನ್ನಡ ಸಾಹಿತ್ಯ ಪರಿಷತ್ ಮುಖ್ಯ ಕಾರ್ಯವಾಗಿದೆ ಎಂದು ಉದ್ಯಮಿ ಸುರೇಶ ಕಲ್ಲೊಳಿ ಹೇಳಿದರು.
ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಮುಂಡಗೋಡ ಪರಿಷತ್ತು ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೨ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು. ಇದುವರೆಗೆ ೮೮ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ದೆಹಲಿ ಹೀಗೆ ನಾನಾ ಕಡೆ ನಡೆಸಿದ್ದು, ಅವುಗಳಲ್ಲಿ ನಾಲ್ಕು ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಮಹಿಳಾ ಸಾಹಿತಿಗಳನ್ನು ಸರ್ವಾಧ್ಯಕ್ಷನಾಗಿ ಮಾಡಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಿದ್ದು ಅಭಿನಂದನೀಯ ಎಂದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಭಾಸ ಡೋರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುಂಡಗೋಡ ಕನ್ನಡ ಸಾಹಿತ್ಯ ಪರಿಷತ್‌ನವರು ಅನೇಕ ಕನ್ನಡ ಪರ ಕಾರ್ಯಕ್ರಮಗಳನ್ನು ಮಾಡಿ ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇತ್ತೀಚೆಗೆ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆದಿದ್ದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಕೆ. ಬೋರ್ಕರ್ ಹಾಗೂ ಸಿಎಂ ಕೋಚಿಂಗ್ ತರಬೇತಿಯ ಸಂಚಾಲಕ ಪ್ರವೀಣ್ ತಟ್ಟಿ ಮಾತನಾಡಿದರು.
ಆನಂದ ಹೊಸೂರ್, ಸಿ.ಎನ್. ಸುರಕೋಡ, ಮಂಜುನಾಥ ಕಂಬಿ, ಎಸ್.ಬಿ. ಹೂಗಾರ, ಸಂಗಪ್ಪ ಕೋಳೂರ ಮುಂತಾದವರಿದ್ದರು. ನಾಗರಾಜ್ ಅರ್ಕಸಾಲಿ ಸ್ವಾಗತಿಸಿದರು. ವಿನಾಯಕ್ ಶೇಟ ಕಾರ್ಯಕ್ರಮ ನಿರೂಪಿಸಿದರು. ಸುಭಾಸ ವಡ್ದರ್ ವಂದಿಸಿದರು.