ಬಾಲ್ಯವಿವಾಹ, ಬಾಲ ಗರ್ಭಿಣಿ ಸಮಸ್ಯೆಗಳಲ್ಲಿ ಮೈಸೂರು ಮೊದಲ ಸ್ಥಾನದಲ್ಲಿದೆ

KannadaprabhaNewsNetwork |  
Published : Oct 28, 2026, 01:15 AM IST
6, 7 | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಮಕ್ಕಳು ಬೇರೆ ಸಮಸ್ಯೆಗಳಿಂದ ಸಹ ತೊಂದರೆಗೊಳಗಾಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ಜಿಲ್ಲೆ ಬಾಲ್ಯವಿವಾಹ ಮತ್ತು ಬಾಲ ಗರ್ಭಿಣಿ ಸಮಸ್ಯೆಗಳಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇದು ಬುದ್ಧಿವಂತ ಮತ್ತು ಸಾಂಸ್ಕೃತಿಕ ಜಿಲ್ಲೆಯಾದ ಮೈಸೂರಿಗೆ ಒಂದು ಕಪ್ಪು ಚುಕ್ಕೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್‌ ತಿಳಿಸಿದರು.ನಗರದ ವಿ.ವಿ. ಪುರಂ ಸಂಚಾರ ಪೊಲೀಸ್ ಠಾಣೆಯ ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ವಿಶೇಷ ಪೊಲೀಸ್ ಘಟಕ ಹಾಗೂ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ವಿಶೇಷ ಪೊಲೀಸ್ ಅಧಿಕಾರಿಗಳಿಗೆ ಮಕ್ಕಳ ರಕ್ಷಣೆ ಮತ್ತು ಸುರಕ್ಷತೆ ಕುರಿತು ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಪೊಲೀಸ್ ಮತ್ತು ಇತರ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಸಹಯೋಗದಲ್ಲಿ ಕೆಲಸ ಮಾಡುವುದರೊಂದಿಗೆ ಮೈಸೂರು ಜಿಲ್ಲೆಯನ್ನು ಈ ಸಮಸ್ಯೆಗಳಿಂದ ಹೊರಗಡೆ ತರಬೇಕು. ಜಿಲ್ಲೆಯಲ್ಲಿ ಮಕ್ಕಳು ಬೇರೆ ಸಮಸ್ಯೆಗಳಿಂದ ಸಹ ತೊಂದರೆಗೊಳಗಾಗುತ್ತಿದ್ದಾರೆ. ಅದನ್ನು ನಾವೆಲ್ಲರೂ ಸೇರಿ ತಡೆಯಬೇಕು. ಮಕ್ಕಳ ಸ್ನೇಹ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಅವರು ಕರೆ ನೀಡಿದರು. ಸೂಕ್ಷ್ಮವಾಗಿ ಕೆಲಸ ಮಾಡಿಅಧ್ಯಕ್ಷತೆ ವಹಿಸಿದ್ದ ಡಿಸಿಪಿ ಕೆ.ಎಸ್. ಸುಂದರ್‌ ರಾಜ್‌ ಮಾತನಾಡಿ, ಇಲಾಖೆಯ ಅಧಿಕಾರಿಗಳು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಅತಿ ಕಠಿಣವಾದ ಹಲವಾರು ಪ್ರಕರಣಗಳನ್ನು ಭೇದಿಸಿ ಆರೋಪಿಗಳಿಗೆ ಶಿಕ್ಷೆಯಾಗುವಲ್ಲಿ ಶ್ರಮ ವಹಿಸಿರುತ್ತಾರೆ ಎಂದರು.ಅಧಿಕಾರಿಗಳು ಇನ್ನೂ ಕೆಲವು ಕ್ಷೇತ್ರಗಳಲ್ಲಿ ತುಂಬಾ ಸೂಕ್ಷ್ಮವಾಗಿ ಕೆಲಸ ಮಾಡಬೇಕಾಗಿದೆ. ಮುಖ್ಯವಾಗಿ ಬಾಲ್ಯ ವಿವಾಹ, ಬಾಲ ಗರ್ಭಿಣಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲಕಾರ್ಮಿಕ ಮಕ್ಕಳು, ಭಿಕ್ಷಾಟನೆ ಮಕ್ಕಳು ಇಂತಹ ವಿಚಾರಗಳಲ್ಲಿ ಅಧಿಕಾರಿಗಳು ತುಂಬಾ ಸೂಕ್ಷ್ಮವಾಗಿ ಮತ್ತು ಮಗು ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಎಲ್ಲೇ ಆಗಲಿ ಮಕ್ಕಳ ಸಮಸ್ಯೆಗಳು ಕಂಡು ಬಂದಲ್ಲಿ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ನಿರ್ದಾಕ್ಷಿಣ್ಯವಾಗಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.ಸಂಪನ್ಮೂಲ ವ್ಯಕ್ತಿ ಸಿ.ಜಿ. ರೋಹಿತ್ ಅವರು, ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ, ಬಾಲ ಗರ್ಭಿಣಿಯರು ಮತ್ತು ಬಾಲಕಾರ್ಮಿಕತೆಗೆ ಸಂಬಂಧಿಸಿದ ವಿಚಾರಗಳನ್ನು ವಿವರಿಸಿದರು. ಈ ಕಾರ್ಯಾಗಾರದಲ್ಲಿ ನಗರ ಪೊಲೀಸ್ ವ್ಯಾಪ್ತಿಯ ವಿವಿಧ ಠಾಣೆಗಳ ಸುಮಾರು 70 ಮಕ್ಕಳ ವಿಶೇಷ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.ಸಿಸಿಬಿ ಎಸಿಪಿ ಮಹಮ್ಮದ್‌ ಶರೀಫ್ ರಾವುತರ್‌, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ. ರವಿಚಂದ್ರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಎಸ್. ಆಶಾ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಕಾರ್ಯದರ್ಶಿ ಪ್ರೊ.ವಿ.ಕೆ. ಜೋಸ್‌, ನಿರ್ದೇಶಕಿ ಸರಸ್ವತಿ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಲ್ಲರಬಾಣವಾಡಿಯಲ್ಲಿ ಚಿರತೆ ಮರಿ ಪತ್ತೆ
ಬದುಕಿನ ಸನ್ನಡತೆಗೆ ಯೋಗ-ಅಧ್ಯಾತ್ಮ ಸಹಕಾರಿ: ಸ್ವಾಮೀಜಿ