ಕಾರವಾರ: ಇಲ್ಲಿನ ನಗರಸಭೆ ಸಭಾಭವನದಲ್ಲಿ ವಿಶ್ವ ಪರಿಸರ ದಿನಾಚರಣೆ-2025 ಅಂಗವಾಗಿ “ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು” ಘೋಷವಾಕ್ಯದ ಅಡಿಯಲ್ಲಿ ಶನಿವಾರ ಪೌರಕಾರ್ಮಿಕರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಲ್ಲಿ ಸಾರ್ವಜನಿಕರ ಪಾಲುದಾರಿಕೆ ಮತ್ತು ಸಹಕಾರ ಅತ್ಯಮೂಲ್ಯವಾದುದು ಪ್ಲಾಸ್ಟಿಕ್ ತ್ಯಾಜ್ಯವು ಎಲ್ಲ ರೀತಿಯ ಮಾಲಿನ್ಯಕ್ಕೂ ಕಾರಣವಾಗುತ್ತಿದೆ ಮತ್ತು ಪಶು, ಪಕ್ಷಿ, ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇರುವುದೊಂದೇ ಭೂಮಿ ಪ್ರಪಂಚದ ಯಾವುದೇ ಜಾಗದಲ್ಲಿ ಮಾಲಿನ್ಯವಾದರೆ ಅದರ ಪರಿಣಾಮವನ್ನು ಎಲ್ಲರೂ ಎದುರಿಸಬೇಕಾಗಿರುತ್ತದೆ. ತ್ಯಾಜ್ಯ ವಿಲೇವಾರಿಯಲ್ಲಿ ಪೌರಕಾರ್ಮಿಕರ ದೈನಂದಿನ ಕೆಲಸವನ್ನು ಶ್ಲಾಘಿಸಿದರು.
ಪೌರಾಯುಕ್ತ ಜಗದೀಶ ಬಿ., ಹುಲಗೆಜ್ಜಿ, ನಗರಸಭೆಯ ವತಿಯಿಂದ ನಿಯಮಿತವಾಗಿ ಪ್ಲಾಸ್ಟಿಕ್ ಮಾರಾಟಮಾಡುವ ಅಂಗಡಿಗಳಿಗೆ ಭೇಟಿ ನೀಡಿ ರೈಡ್ ಮಾಡಲಾಗುತ್ತಿದೆ ಹಾಗೂ ದಂಡವನ್ನು ವಿಧಿಸಲಾಗುತ್ತಿದೆ. ಇನ್ನು ಮುಂದೆ ನಿಯಮಿತವಾಗಿ ಭೇಟಿ ನೀಡುವುದು ಹಾಗೂ ಪೌರಕಾರ್ಮಿಕರು ಮನೆ ಮನೆಗಳಿಂದ ಕಸವನ್ನು ಸಂಗ್ರಹಿಸುವ ಸಂದರ್ಭದಲ್ಲಿ ಸಂಗ್ರಹಿಸಿದ ತ್ಯಾಜ್ಯಗಳಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಬೇರ್ಪಡಿಸಬೇಕಾಗಿರುತ್ತದೆ ಎಂದು ತಿಳಿಸಿದರು.
ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕಿ ದೀಪಾ ಎಮ್. ಶೆಟ್ಟಿ, ಲೆಕ್ಕಾಧಿಕಾರಿ ಮಂಜುನಾಥ ಬಿಸ್ಗಣ್ಣವರ, ಕಂದಾಯ ಅಧಿಕಾರಿ ರವಿ ನಾಯ್ಕ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಶಂಕರ ಚೆಲುವ ಹಾಗೂ ಕಾರವಾರ ನಗರಸಭೆಯ ಪೌರಕಾರ್ಮಿಕರು ಇದ್ದರು.ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಹಾಗೂ ನಗರಸಭೆ ಇವರ ಸಹಯೋಗದೊಂದಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು.