ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಾಲಾ ಹಂತದಲ್ಲಿ ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸಬೇಕು. ಭಾಷಾ ಕಲಿಕೆ, ಸ್ಪಷ್ಟವಾಗಿ ಓದುವುದು ಬರೆಯುವುದು ರೂಢಿಸಬೇಕು. ಅದಕ್ಕಾಗೇ ಕಳೆದ ಹದಿನೆಂಟು ವರ್ಷಗಳಿಂದ ಸತತ ಪ್ರಯತ್ನ ಮಾಡುತ್ತಿದ್ದೇವೆ. ಅದೇ ರೀತಿ ಈ ಬಾರಿಯು ಶಾಲಾ ಕಾಲೇಜು ಹಂತದಲ್ಲಿ ಸಾಹಿತ್ಯ ಕಮ್ಮಟ ನಡೆಸುತ್ತಿದ್ದೇವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಅನುಪಿನಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಹಿತ್ಯ ರಚನಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಅಭಿರುಚಿ ಮೂಡಿಸಲು ಕಥೆ, ಕವನ, ಪ್ರಬಂಧ ವಿಚಾರವಾಗಿ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ. ಅವುಗಳನ್ನು ಗ್ರಹಿಸಿ. ನಿಮಗೆ ಇಷ್ಟವಾದ ಸಾಹಿತ್ಯ ಬರೆಯುವ ಪ್ರಯತ್ನ ಮಾಡಿ ಎಂದು ವಿವರಿಸಿದರು.
ಸಾಹಿತಿಗಳು, ಶಾಯರಿ ಕವಿ ಎಂದು ಖ್ಯಾತರಾದ ಅಸಾದುಲ್ಲಾ ಬೇಗ್ ಅವರು ಕಾವ್ಯ ಎಂದರೆ ಏನು, ಅದನ್ನು ಬರೆಯುವ ಕ್ರಮಗಳು ಹೇಗೆ, ಕಾವ್ಯ ಆಸ್ವಾಧಿಸುವ ಕ್ರಮ ಕುರಿತು ಮಾಹಿತಿ ನೀಡಿದರು. ಕವಿತೆ ಬರೆಯಲು ಉತ್ಸಾಹ ಬೇಕು. ಸಾಹಿತ್ಯದ ವಿದ್ಯಾರ್ಥಿ ಆಗಬೇಕಿಲ್ಲ. ನೇರವಾಗಿ, ಸರಳವಾಗಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳುವ ಬಗೆಯನ್ನು ಹೇಳಿದರು.ಸಾಹಿತಿಗಳು, ಅಂಕಣಕಾರ ಬಿ.ಚಂದ್ರೇಗೌಡರು ಕನ್ನಡದ ಎಲ್ಲಾ ಸಾಹಿತಿಗಳು ಒಂದು ಕಾಲದಲ್ಲಿ ಪ್ರಬಂಧ ಕಾರರಾಗಿದ್ದರು. ಕಣ್ಣಿಗೆ ಕಂಡಿದ್ದನ್ನು ಪ್ರಾಮಾಣಿಕವಾಗಿ ಬರೆಯುವುದು. ಆ ಬರವಣಿಗೆಗೆ ಕಲ್ಪನೆ ಸೇರಿಸಬೇಕು. ಅದೂ ಪ್ರಾಮಾಣಿಕವಾಗಿರಬೇಕು. ನಿಮ್ಮ ಸುತ್ತಾಮುತ್ತಾ ಎಲ್ಲಾ ಇವೆ. ಅವುಗಳನ್ನು ಗಮನಿಸಬೇಕು. ಎಲ್ಲರೂ ಲೇಖಕರಾಗದಿದ್ದರೂ ಸಾಹಿತ್ಯ ಆಸಕ್ತಿ ರೂಢಿಸಿಕೊಳ್ಳಿ ಎಂದು ವಿವರಿಸಿದರು.
ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ಕಾರ್ಯದರ್ಶಿ ಶೋಭಾ ವೆಂಕಟರಮಣ ಮಾತನಾಡಿ, ಸಾಹಿತ್ಯ, ಸಮ್ಮೇಳನ ದೊಡ್ಡವರಿಗೇ ಮಾತ್ರ ಎಂದು ಕೊಂಡಿದ್ದ ಕಾಲವಿತ್ತು. ಆದರೆ ಶಾಲಾ ಹಂತಕ್ಕೆ ತಂದು ಸಾಹಿತ್ಯ ಮಾರ್ಗದರ್ಶನ ಮಾಡಿ ಮಕ್ಕಳಿಗೆ ಸಮ್ಮೇಳನದ ಅವಕಾಶ ದೊರಕಿಸುತ್ತಿರುವ ಡಿ.ಮಂಜುನಾಥ ಮತ್ತು ತಂಡದ ನಿರಂತರ ಪರಿಶ್ರಮದಿಂದ ನಮ್ಮ ಮಕ್ಕಳ ಆಲೋಚನಾ ಕ್ರಮ ಬದಲಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ವಿವರಿಸಿದರು.ರಂಗ ನಿರ್ದೇಶಕರು, ಉಪಾಧ್ಯಕ್ಷ ಡಾ.ಜಿ.ಆರ್.ಲವ ಮಾತನಾಡಿದರು. ಶಿಕ್ಷಕರಾದ ವಿಜಯಾಶ್ರೀ, ವೈಷ್ಣವಿ ಪ್ರಾರ್ಥನೆ ಹಾಡಿದರು. ಮುಖ್ಯ ಶಿಕ್ಷಕ ವೆಂಕಟೇಶ್ ಸ್ವಾಗತಿಸಿದರು. ಸಂತೋಷ ವಂದಿಸಿದರು. ಜಿಲ್ಲಾ ಕಾರ್ಯದರ್ಶಿ ಡಿ.ಗಣೇಶ್ ನಿರ್ವಹಿಸಿದರು.