ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ
ವಿಶ್ವ ಕರಡಿ ದಿನವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕರಡಿಗಳಿಗೆ ವಿಶೇಷ ಆಹಾರ ನೀಡುವ ಮೂಲಕ ವಿಭಿನ್ನ ಚಟುವಟಿಕೆಗಳೊಂದಿಗೆ ಆಚರಿಸಲಾಯಿತು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹಾಗೂ ಕರಡಿ ಸಫಾರಿಯಲ್ಲಿ ಕರಡಿಗಳಿಗೆ ಸೀಬೆ, ಕಲ್ಲಂಗಡಿ, ದ್ರಾಕ್ಷಿ ಸೇರಿದಂತೆ ವಿವಿಧ ಹಣ್ಣುಗಳು, ತರಕಾರಿ, ಎಳನೀರು, ಜೇನಿನ ವಿಶೇಷ ಆಹಾರ ನೀಡಲಾಯಿತು.
ವಿಶ್ವ ಕರಡಿ ದಿನದಂದು ಕರಡಿಗಳ ಜೀವಿತಾವಧಿ, ನೆಚ್ಚಿನ ಆಹಾರ, ವೇಗ ಇತ್ಯಾದಿಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿಯನ್ನು ನೀಡಲಾಯಿತು. ಪೂರ್ಣವಾಗಿ ಬೆಳೆದ ಕರಡಿ ಸೋಮಾರಿ ಪ್ರಾಣಿಯಾದರೂ ಹುಲಿಯನ್ನು ಓಡಿಸುವ ಸಾಮರ್ಥ್ಯ ಹೊಂದಿದೆ ಎಂದು ಮನವರಿಕೆ ಮಾಡಿಕೊಡಲಾಯಿತು.
ಹಣ್ಣು, ಜೇನು ಸವಿದು ಸಂಭ್ರಮಪಡುತ್ತಿರುವ ಕರಡಿಗಳನ್ನು ಕಂಡು ಪ್ರವಾಸಿಗರು ಸಂತಸಪಟ್ಟರು. ಅಲ್ಲದೆ ಕರಡಿಗಳ ಆಟವನ್ನು ಪ್ರವಾಸಿಗರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದರು.
ಪ್ರವಾಸಿಗರಿಗೆ ಕರಡಿಗಳ ಜೀವನ, ಅವುಗಳ ಆಹಾರ ಮತ್ತು ಸಂರಕ್ಷಣೆಯ ಬಗ್ಗೆ ಅರಿವು ಪ್ರಾಣಿಪಾಲಕರು ಪ್ರವಾಸಿಗರಿಗೆ ಸಂಪೂರ್ಣ ಮಾಹಿತಿ ನೀಡಿದರು.
ತಿಂಗಳ ಅವಧಿಯಲ್ಲಿ ಉದ್ಯಾನವನದಲ್ಲಿನ ನರಿಯೊಂದು 3 ಮರಿಗಳಿಗೆ ಜನ್ಮ ನೀಡಿದೆ. ತೋಳ 4 ಮರಿಗಳಿಗೆ ಎರಡು ನೀಲಗಾಯ್‌ಗಳು ಅವಳಿ ಮರಿಗಳಿಗೆ ಜನ್ಮವಿತ್ತಿದೆ.
ಜತೆಗೆ ಸಫಾರಿ ಆವರಣದಲ್ಲಿರುವ ಕಾಡೆಮ್ಮೆಯೂ ಕರು ಹಾಕಿದ್ದು, ಪುಟಾಣಿ ವನ್ಯಜೀವಿಗಳ ತುಂಟಾಟ ನೋಡುಗರನ್ನು ಸೆಳೆಯುತ್ತಿದೆ.
ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮರಿಗಳನ್ನು ಕಾಳಜಿವಹಿಸಿ ನೋಡಿಕೊಳ್ಳಬೇಕಿದೆ. ತೋಳ ಹಾಗೂ ನರಿ ಮರಿಗಳ ಬಗ್ಗೆ ಜಾಗ್ರತೆವಹಿಸಿರುವ ಸಿಬ್ಬಂದಿ ಅವುಗಳಿಗೆ ಬೇಕಾದ ಆಹಾರ ಹಾಗೂ ಹಣ್ಣು, ತರಕಾರಿಗಳನ್ನು ನಿಗದಿತವಾಗಿ ನೀಡುತ್ತಿದ್ದಾರೆ.
ಜತೆಗೆ, ಸಫಾರಿ ರಸ್ತೆ ಆವರಣದಲ್ಲಿರುವ ಕಾಡೆಮ್ಮೆ ಕರು ಗಂಡೋ ಅಥವಾ ಹೆಣ್ಣೋ ಎನ್ನುವುದು ಇನ್ನೂ ದೃಢವಾಗಿಲ್ಲ. ತಾಯಿ ಕಾಡೆಮ್ಮೆ, ಕರುವಿನ ಬಳಿ ಯಾರನ್ನೂ ತೆರಳು ಬಿಡುತ್ತಿಲ್ಲ.
ಹೀಗಾಗಿ ಅಧಿಕಾರಿಗಳು ಸದ್ಯಕ್ಕೆ ಅದರ ಆರೈಕೆಗೂ ಹೆಚ್ಚು ಗಮನಹರಿಸಿದ್ದಾರೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ ವೈದ್ಯಾಧಿಕಾರಿ ಡಾ.ಕಿರಣ್ ಹೇಳಿದರು.
ಏಪ್ರಿಲ್ 1ರಿಂದ 14ರವರೆಗೆ ಬೇಸಿಗೆ ಶಿಬಿರ ಆಯೋಜನೆ
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಏಪ್ರಿಲ್ 1 ರಿಂದ 14ರವರೆಗೆ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. 11 ರಿಂದ 18 ವರ್ಷ ವಯೋಮಾನದ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಶಿಬಿರಕ್ಕೆ ನೊಂದಾಯಿಸಿಕೊಳ್ಳಬಹುದಾಗಿದೆ.
ಗರಿಷ್ಟ 60 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು,ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ 3 ಸಾವಿರ ಮತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ 1 ಸಾವಿರ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ಮಧ್ಯಾಹ್ನದ ಊಟ ಮತ್ತು ಚಟುವಟಿಕೆಗಳನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಮೃಗಾಲಯ, ಚಿಟ್ಟೆ ಉದ್ಯಾನ, ಸಫಾರಿ ವೀಕ್ಷಣೆ, ಪ್ರಕೃತಿ ನಡಿಗೆ ಮತ್ತು ವನ್ಯಜೀವಿಗಳ ನಿರ್ವಹಣೆಯ ಒಳನೋಟವನ್ನು ನೀಡಲಾಗುವುದು - ವಿಶಾಲ್ ಸೂರ್ಯಸೇನ್, ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ.