ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಎಂ ಇನ್ಸ್‌ಟಿಟ್ಯೂಟ್ ಆಫ್ ಫಾರ್ಮಾಸಿಟಿಕಲ್ ಸೈನ್ಸ್ ಅಂಡ್ ರೀಸರ್ಚ್ ಕಾಲೇಜು ಮತ್ತು ಜಿಎಂ ವಿಶ್ವ ವಿದ್ಯಾನಿಲಯದ ಸಾರಥ್ಯದಲ್ಲಿ ಫೆ.4ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ಕ್ಯಾನ್ಸರ್ ವಿರುದ್ಧ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಎಂಐಪಿಎಸ್ಆರ್ ಕಾಲೇಜಿನ ಪ್ರಾಚಾರ್ಯ ಡಾ.ಗಿರೀಶ ಬೋಳಕಟ್ಟೆ ತಿಳಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 7.30ಕ್ಕೆ ಜಿಲ್ಲಾಸ್ಪತ್ರೆ ಆವರಣದಿಂದ ಜಾಥಾ ಆರಂಭವಾಗಲಿದ್ದು, ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಜಿಎಂ ವಿವಿ ಉಪ ಕುಲಪತಿ ಡಾ.ಎಸ್.ಆರ್.ಶಂಕಪಾಲ್, ಸಹ ಉಪ ಕುಲಪತಿ ಡಾ.ಎಚ್.ಡಿ.ಮಹೇಶಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಷಣ್ಮುಖಪ್ಪ, ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ. ಗೋಪಾಲ್, ಜಿಎಂಐಟಿ ಪ್ರಾಚಾರ್ಯ ಡಾ.ಎಂ.ಬಿ.ಸಂಜಯ್ ಪಾಂಡೆ, ಜಿಎಂ ಫಾರ್ಮಸಿ ಕಾಲೇಜು ಪ್ರಾಚಾರ್ಯ ಡಾ.ಗಿರೀಶ ಬೋಳಕಟ್ಟೆ ಭಾಗವಹಿಸುವರು ಎಂದರು.
ಜಿಲ್ಲಾಸ್ಪತ್ರೆಯಿಂದ ಶುರುವಾಗುವ ಜಾಥಾ ಶಾಬನೂರು ರಸ್ತೆಯ ಮಾರ್ಗವಾಗಿ ವಿದ್ಯಾರ್ಥಿ ಭವನ, ಹದಡಿ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಜಯದೇವ ವೃತ್ತ ತಲುಪಲಿದೆ. ಶ್ರೀ ಜಯದೇವ ವೃತ್ತದಲ್ಲಿ ಕ್ಯಾನ್ಸರ್ ಕುರಿತಂತೆ ಹಿರಿಯ ಸಿವಿಲ್ ಇಂಜಿನಿಯರ್, ಕಲಾವಿದ ಆರ್.ಟಿ.ಅರುಣಕುಮಾರ ವಿಶ್ವ ಕ್ಯಾನ್ಸರ್ ದಿನದ ಬಗ್ಗೆ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸಲಿದ್ದಾರೆ. ಕ್ಯಾನ್ಸರ್ ರೋಗ ಚಿಹ್ನೆಗಳು, ರೋಗ ಲಕ್ಷಣಗಳು, ಅಪಾಯ ಸಂಭವನೀಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದಾರೆ ಎಂದು ಅವರು ಹೇಳಿದರು.ಅರ್ಬುದವೆಂದು ಕರೆಯಲ್ಪಡುವ ಕ್ಯಾನ್ಸರ್ ಕೋಶಗಳ ಸಮೂಹವು ಅನಿಯಂತ್ರಿತ ಬೆಳವಣಿಗೆ ತೋರಿಸಿ, ಸಾಮಾನ್ಯಕ್ಕಿಂತಲೂ ಮಿತಿ ಮೀರಿದ ಕೋಶಗಳ ವಿಭಜನೆ ತೋರಿಸುವ ಪರಿಯನ್ನು ಕ್ಯಾನ್ಸರ್ ರೋಗದ ವಿವಿಧ ವಿಧಗಳು ಮತ್ತು ಅದರ ಚಿಕಿತ್ಸೆ ವ್ಯವಸ್ಥೆಯ ಜೊತೆಗೆ ರೋಗ ಸಂಬಂಧಿಸಿದ ಔಷಧೋಪಚಾರಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲಾಗುವುದು. ತಮ್ಮ ಫಾರ್ಮಸಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ಬೀದಿ ನಾಟಕದ ರೂಪದಲ್ಲಿ ಕ್ಯಾನ್ಸರ್ ರೋಗ ತಡೆಗಟ್ಟುವಿಕೆ ಬಗ್ಗೆ ಉಪಯುಕ್ತ ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದರು. ಜನ ಜಾಗೃತಿ ಮೇಳದಲ್ಲಿ ವಿದ್ಯಾರ್ಥಿಗಳು ಕ್ಯಾನ್ಸರ್ ಸಂಬಂಧಿಸಿದ ವಿವಿಧ ಅಂಶಗಳನ್ನು ಜಾಗೃತಿ ಫಲಕಗಳಲ್ಲಿ ಅಳವಡಿಸಿ, ಜನರಲ್ಲಿ ಅರಿವು ಮೂಡಿಸುವರು. ನಂತರ ಜಾಗೃತಿ ಜಾಥಾವು ಹೈಸ್ಕೂಲ್ ಮೈದಾನ ತಲುಪಿ, ಅಲ್ಲಿ ಮುಕ್ತಾಯವಾಗಲಿದೆ. ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ರೋಗದ ವಿರುದ್ಧ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತಮ್ಮ ಕಾಲೇಜಿನಿಂದ ಇಂತಹದ್ದೊಂದು ಜಾಗೃತಿ ಜಾಥಾ ಹಮ್ಮಿಕೊಂಡಿದ್ದು, ಸಾರ್ವಜನಿಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಜೊತೆಗೆ ಕ್ಯಾನ್ಸರ್ ವಿರುದ್ಧ ಜಾಗೃತರಾಗಬೇಕು ಎಂದು ಅವರು ಮನವಿ ಮಾಡಿದರು.
ಜಿಎಂಐಟಿ ಕಾಲೇಜಿನ ಉದ್ಯೋಗ ಮತ್ತು ತರಬೇತಿ ನಿರ್ದೇಶಕ ಟಿ.ಆರ್.ತೇಜಸ್ವಿ ಕಟ್ಟಿಮನಿ, ರಾಕೇಶ, ಪ್ರತೀಕ್ಷಾ, ಮಹಮ್ಮದ್ ಯೂಸೂಫ್, ಮಹಮ್ಮದ್ ಯಾಸೀನ್ ಇತರರು ಇದ್ದರು.