‘ಕಾಪುದ ಅಮ್ಮ’ನ ದರ್ಶನ ಪಡೆದ ವಿಶ್ವಕಪ್ ಸ್ಟಾರ್ ಸೂರ್ಯಕುಮಾರ್

KannadaprabhaNewsNetwork | Published : Jul 10, 2024 12:31 AM

ಸಾರಾಂಶ

ಕ್ರಿಕೆಟ್‌ ಸ್ಟಾರ್‌ ಸೂರ್ಯಕುಮಾರ್‌ ಯಾದವ್‌ ಪತ್ನಿ ದೇವಿಶಾ ಶೆಟ್ಟಿ ಕರಾವಳಿಯವರಾಗಿದ್ದು, ಖಾಸಗಿ ಕಾರ್ಯಕ್ರಮಕ್ಕೆ ಮಂಗಳೂರಿಗೆ ಬಂದಿದ್ದ ಅವರಿಬ್ಬರೂ ಜೀರ್ಣೋದ್ಧಾರಗೊಳ್ಳುತ್ತಿರುವ ಮಾರಿಗುಡಿಗೆ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಕಾಪು

ಭಾರತ ಟಿ-20 ಕ್ರಿಕೆಟ್ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತು ಪತ್ನಿ ದೇವಿಶಾ ಶೆಟ್ಟಿ ಮಂಗಳವಾರ ಇಲ್ಲಿನ ಮಾರಿಗುಡಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ದೇವಿಶಾ ಶೆಟ್ಟಿ ಕರಾವಳಿಯವರಾಗಿದ್ದು, ಖಾಸಗಿ ಕಾರ್ಯಕ್ರಮಕ್ಕೆ ಮಂಗಳೂರಿಗೆ ಬಂದಿದ್ದ ಅವರಿಬ್ಬರೂ ಜೀರ್ಣೋದ್ಧಾರಗೊಳ್ಳುತ್ತಿರುವ ಮಾರಿಗುಡಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವಿಶಾ, ಐದು ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದೆ, ಮತ್ತೊಮ್ಮೆ ಕಾಪು ಅಮ್ಮನ ಭೇಟಿ ಮಾಡಬೇಕು ಎಂಬ ಇಚ್ಛೆ ಇತ್ತು. ಇದೀಗ ಪತಿಯೊಂದಿಗೆ ಬಂದಿರುವುದು ತುಂಬಾ ಸಂತೋಷ ನೀಡುತ್ತಿದೆ ಎಂದರು.

ಭಾರತವನ್ನು ಪ್ರತಿನಿಧಿಸಬೇಕು, ವಿಶ್ವಕಪ್ ಗೆಲ್ಲಬೇಕು ಎಂಬುದು ಎಲ್ಲ ಕ್ರಿಕೆಟ್ ಆಟಗಾರರ ಕನಸಾಗಿರುತ್ತದೆ, ಸೂರ್ಯಕುಮಾರ್ ಅವರ ಕನಸು ಸಾಕಾರಗೊಂಡಿದೆ. ಮುಂದೆ ಇನ್ನೂ ಹಲವಾರು ಕನಸುಗಳಿವೆ. ದೇವಿಯಲ್ಲಿ ಏನು ಪ್ರಾರ್ಥನೆ ಮಾಡಿದ್ದೇವೆ, ಏನು ಹರಕೆ ನೀಡಿದ್ದೇವೆ ಅದನ್ನು ಹೇಳುವುದಿಲ್ಲ ಎಂದರು.

ಸೂರ್ಯ ಕುಮಾರ್ ಯಾದವ್ ಮಾತನಾಡಿ, ಕಾಪುದ ಅಮ್ಮ (ಕಾಪುವಿನ ತಾಯಿ)ನ ದರ್ಶನ, ಪೂಜೆಯಿಂದ ಮನಸ್ಸಿಗೆ ಬಹಳ ನೆಮ್ಮದಿಯಾಯಿತು. ಮುಂದೆ ಅವಕಾಶ ಸಿಕ್ಕಿದರೆ ದೇವಾಲಯದ ಲೋಕಾರ್ಪಣೆಯ ಸಂದರ್ಭದಲ್ಲಿ ಬರುತ್ತೇನೆ ಎಂದರು.

ಇಲ್ಲಿ ನಮ್ಮನ್ನು ನೋಡುವುದಕ್ಕೆ ಇಷ್ಟು ಜನ ಬರುತ್ತಾರೆ ಎಂದು ಯೋಚಿಸಿರಲಿಲ್ಲ. ಇಲ್ಲಿನ ಜನರ ಪ್ರೀತಿ ಮನಸ್ಸಿಗೆ ಮುಟ್ಟಿದೆ. ಕರಾವಳಿಯ ಬೇರೆ ದೇವಸ್ಥಾನಗಳಿಗೂ ಹೋಗಿದ್ದೇವೆ, ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ದೇವಸ್ಥಾನಗಳಿಗೆ ಹೋಗುತಿದ್ದೇನೆ, ಸೆಲೆಬ್ರಿಟಿಯಾಗಿ ಅಲ್ಲ. ಸಾಮಾನ್ಯ ವ್ಯಕ್ತಿಯಾಗಿ ದೊಡ್ಡ ಜೀವನವನ್ನು ನಡೆಸಬೇಕು ಎಂಬುದು ನನ್ನ ಆಸೆ ಎಂದರು.

* ದೇವರಿಚ್ಛಿಸಿದರೆ ಕ್ಯಾಪ್ಟನ್

ಇನ್ನೊಮ್ಮೆ ದೇಶದ ಕ್ರಿಕೆಟ್ ತಂಡದ ನಾಯಕನಾಗಿ ಮಾರಿಗುಡಿಗೆ ಬರುವಂತಾಗಲಿ ಎಂದು ಅರ್ಚಕರು ದೇವಿಯಲ್ಲಿ ಮಾಡಿದ ಪ್ರಾರ್ಥನೆಗೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್, ತಂಡದ ನಾಯಕನಾಗುವುದು ನಮ್ಮ ಕೈಯಲ್ಲಿಲ್ಲ. ದೇಶಕ್ಕಾಗಿ ಚೆನ್ನಾಗಿ ಆಡುವುದು ನನ್ನ ಗುರಿ. ಮುಂದೆ ದೇವರು ಇಚ್ಛಿಸಿದಂತೆ ಆಗುತ್ತದೆ. ವಿಶ್ವಕಪ್ ಅನ್ನುವುದೇ ಜೀವನ ಅಲ್ಲ, ಅದು ಜೀವನದ ಒಂದು ಭಾಗ ಎಂದವರು ವಿಶ್ಲೇಷಿಸಿದರು.

ಮಂಗಳೂರಿನಲ್ಲಿ ಕೇಕ್ ಕತ್ತರಿಸಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಕೂಡ ಸಾಕಷ್ಟು ಬಾರಿ ಕೇಕ್ ಕತ್ತರಿಸಿದ್ದೇನೆ. ಆದರೆ ಒಂದೇ ಬಾರಿ ಇಷ್ಟು ಕೇಕ್ ಕಟ್ ಮಾಡಿಲ್ಲ, ತಿಂದಿಲ್ಲ. ವಿಶ್ವಕಪ್ನ ಫೈನಲ್‌ನಲ್ಲಿ ಕ್ಯಾಚ್ ಹಿಡಿದು ಎಂಟು ದಿವಸ ಆಯಿತು, ಮದುವೆಯ ಆನಿವರ್ಸರಿಯಾಗಿಯೂ ಎಂಟು ದಿವಸ ಆಯಿತು. ಆದರೆ ಕೇಕ್ ಕಟ್ ಮಾಡುವುದು ನಿಂತಿಲ್ಲ ಎಂದರು.

ಇದಕ್ಕೆ ಮೊದಲು ಸೂರ್ಯಕುಮಾರ್ ದಂಪತಿಯನ್ನು ದೇವಸ್ಥಾನಕ್ಕೆ ಭವ್ಯವಾಗಿ ಸ್ವಾಗತಿಸಿ, ಗೌರವಿಸಲಾಯಿತು. ನಿರ್ಮಾಣದ ಹಂತದಲ್ಲಿರುವ ದೇವಾಲಯವನ್ನು ವೀಕ್ಷಿಸಿ ವಿವರಗಳನ್ನು ಪಡೆದುಕೊಂಡರು. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಾಪು ವಾಸುದೇವ ಶೆಟ್ಟಿ ಮುಂತಾದವರಿದ್ದರು.----

ಆ ಕ್ಯಾಚ್ ದೇವರೇ ಮಾಡಿಕೊಟ್ಟ ಅವಕಾಶ: ಸೂರ್ಯ

ಫೈನಲ್ ಪಂದ್ಯದಲ್ಲಿ ಆಟಕ್ಕೆ ಟರ್ನಿಂಗ್ ನೀಡಿದ ಸೂರ್ಯ ಕುಮಾರ್ ಅವರು ಹಿಡಿದ ಕ್ಯಾಚ್ ಬಗ್ಗೆ ಉಂಟಾಗಿರುವ ವಿವಾದದ ಕುರಿತು ಮಾತನಾಡಿದ ಅವರು, ನಾನು ಬೌಂಡರಿ ಲೈನ್ ಟಚ್ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಆದರೆ ಪ್ರಪಂಚದ ಎಲ್ಲ ಜನರನ್ನು ಖುಷಿ ಪಡಿಸಲು ಸಾಧ್ಯವಿಲ್ಲ ಎಂದು ಬೇಸರಿಸಿದರು.

ದೇವರ ಆಶೀರ್ವಾದದಿಂದ ಒಂದು ಅದ್ಭುತ ಕ್ಯಾಚ್ ಹಿಡಿಯುವ ಅವಕಾಶ ನನಗೆ ಸಿಕ್ಕಿತು. ಎಲ್ಲಾ ರೀತಿಯ ಕ್ಯಾಚ್ ಹಿಡಿಯುವುದಕ್ಕೆ ನಾವು ತರಬೇತಿ ಪಡೆದಿರುತ್ತೇವೆ. ಆದರೆ ದೇಶಕ್ಕೆ ವಿಶ್ವ ಕಪ್ ತಂದುಕೊಡುವುದಕ್ಕಾಗಿಯೇ ದೇವರು ನನ್ನನ್ನು ಆ ಜಾಗದಲ್ಲಿರುವಂತೆ ಮಾಡಿ ಕ್ಯಾಚ್ ಹಿಡಿಯುವ ಸಂದರ್ಭವನ್ನು ಸೃಷ್ಟಿ ಮಾಡಿದ್ದ. ಅದಕ್ಕಾಗಿ ಕ್ಯಾಚ್ ಹಿಡಿದ ಮೇಲೆ ನಾನು ದೇವರನ್ನು ನೆನಪಿಸಿಕೊಂಡೆ ಎಂದರು.

Share this article