- ರೋಟರಿ ಕ್ಲಬ್ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಉಪನ್ಯಾಸ-
1973 ರ ಜೂನ್ 5 ರಿಂದ ವಿಶ್ವದ 143 ರಾಷ್ಟ್ರಗಳಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಸಾಮಾಜಿಕ ಅರಣ್ಯ ಉಪ ವಲಯ ಅರಣ್ಯಾಧಿಕಾರಿ ವರುಣ ಸಿ. ಶೆಟ್ಟಿ ತಿಳಿಸಿದರು.
ಶನಿವಾರ ಸಂಜೆ ರೋಟರಿ ಹಾಲ್ ನಲ್ಲಿ ರೋಟರಿ ಕ್ಲಬ್ ನ ವಾರದ ಸಭೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರದ ಬಗ್ಗೆ ಉಪನ್ಯಾಸ ನೀಡಿದರು. ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯದಡಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಒಂದೊಂದು ದೇಶ ಒಂದೊಂದು ಜವಾಬ್ದಾರಿ ತೆಗೆದುಕೊಳ್ಳುತ್ತಿದೆ. ಪರಿಸರ ಎಂದರೆ ಕೇವಲ ಗಿಡ, ಮರ ಮಾತ್ರವಲ್ಲ. ನಮ್ಮ ಸುತ್ತ ಮುತ್ತಲ ಮರುಭೂಮಿ, ಸಮುದ್ರ ಸಹ ಪರಿಸರವಾಗಿದೆ. ಮನುಷ್ಯರು ಎಷ್ಟೇ ಮುಂದುವರಿದಿದ್ದರೂ ಪರಿಸರದ ಮೇಲೆ ಅವಲಂಭಿತರಾಗಿದ್ದೇವೆ ಎಂದರು.ವಿಜ್ಞಾನ ಎಷ್ಟೇ ಮುಂದುವರಿದ್ದರೂ ಮನುಷ್ಯನ ಆಯುಷ್ಯ ಹೆಚ್ಚಿಸಲು ಸಾಧ್ಯವಾಗಿಲ್ಲ. ರಾಸಾಯನಿಕ ಗೊಬ್ಬರದ ಅತಿ ಬಳಕೆ ಯಿಂದ ಇಂದು ಮಾರಕ ರೋಗಗಳಾದ ಕ್ಯಾನ್ಸರ್ , ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದೇವೆ. ಹಿಂದೆ ನಮ್ಮ ಸರಾಸರಿ ಆಯಸ್ಸು 80 ರಿಂದ 100 ವರ್ಷವಾಗಿತ್ತು. ಈಗ 60 ಕ್ಕೆ ಇಳಿದಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಜಿ.ಆರ್.ದಿವಾಕರ್ ಮಾತನಾಡಿ, ನಾವು ಪರಿಸರ ಸ್ವಚ್ಛ ವಾಗಿಟ್ಟು ಕೊಂಡರೆ ಮುಂದಿನ ಪೀಳಿಗೆಯವರು ಆರೋಗ್ಯವಾಗಿರುತ್ತಾರೆ. ನಮ್ಮ ಮನೆ ಸುತ್ತ ಮುತ್ತ ಸ್ವಚ್ಛವಾಗಿಟ್ಟು ಕೊಳ್ಳೋಣ. ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಅದನ್ನು ಪೋಷಣೆ ಮಾಡೋಣ ಎಂದು ಕರೆ ನೀಡಿದರು.ರೋಟರಿ ಕ್ಲಬ್ ಸದಸ್ಯ ಪಿ.ಕೆ.ಬಸವರಾಜಪ್ಪ, ರೋಟರಿ ಕಾರ್ಯದರ್ಶಿ ಮಧು, ಹಿರಿಯ ಸದಸ್ಯರಾದ ಎಸ್.ಎಸ್. ಶಾಂತಕುಮಾರ್, ಸುಂದರೇಶ್, ಪಿ.ಎಸ್.ವಿದ್ಯಾನಂದಕುಮಾರ್, ಲೋಕೇಶ್, ನವೀನ್ ಮತ್ತಿತರರು ಇದ್ದರು.