ನುಗ್ಗೇಹಳ್ಳಿ: ಕರ್ನಾಟಕ ರಾಜ್ಯ ರೈತ ಸಂಘ ಸಮಿತಿಯ ಹೋಬಳಿ ಘಟಕದ ವತಿಯಿಂದ ಹೋಬಳಿ ಕೇಂದ್ರದಲ್ಲಿ ಜನವರಿ 10ರಂದು ವಿಶ್ವ ರೈತ ದಿನ ಆಚರಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ರಾಮಚಂದ್ರು ತಿಳಿಸಿದರು.ಹೋಬಳಿ ಕೇಂದ್ರದಲ್ಲಿ ಹೋಬಳಿ ರೈತ ಸಂಘದ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಹೋಬಳಿ ಕೇಂದ್ರದ ಸರ್ಕಾರಿ ಮಾಧ್ಯಮಿಕ ಶಾಲೆ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹೋಬಳಿ ಘಟಕ ಹಾಗೂ ವಿವಿಧ ಸಂಘಟನೆಗಳೊಂದಿಗೆ ಜನವರಿ 10ರ ಶನಿವಾರದಂದು ವಿಶ್ವ ರೈತ ದಿನಾಚರಣೆ ಅಂಗವಾಗಿ ಬೃಹತ್ ಸಮಾರಂಭವನ್ನು ಆಯೋಜಿಸಲಾಗಿದೆ ವಿಶ್ವ ರೈತ ದಿನಾಚರಣೆ ಅಂಗವಾಗಿ ಶನಿವಾರ ಬೆಳಗ್ಗೆ ಹೋಬಳಿ ಕೇಂದ್ರದ ಕೃಷಿ ಇಲಾಖೆ ಮುಂಭಾಗದಿಂದ ರೈತ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಜಾತಾ ನಡೆಸುವ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬರಲಾಗುತ್ತದೆ ಎಂದರು.ರೈತ ದಿನಾಚರಣೆ ಅಂಗವಾಗಿ ಲಿಂಗದ ಬೀರರ ಕುಣಿತ ನಾಸಿಕ್ ಡೋಲ್ ಮತ್ತು ದೊಡ್ಡೇರಿ ಹಾಗೂ ಚಿನ್ನೇನಹಳ್ಳಿ ಗ್ರಾಮಸ್ಥರಿಂದ ಕೋಲಾಟ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಲಿದ್ದಾರೆ ಅಧ್ಯಕ್ಷತೆಯನ್ನು ಶಾಸಕ ಬಾಲಕೃಷ್ಣರವರು ವಹಿಸಲಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಎಂ ಎ ಗೋಪಾಲಸ್ವಾಮಿ, ತಹಸೀಲ್ದಾರ್ ಶಂಕರಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್ ಆರ್ ನಟರಾಜ್, ರಾಜ್ಯ ಮಹಿಳಾ ರೈತ ಸಂಘದ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ಸೇರಿದಂತೆ ರೈತ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು, ಹೋಬಳಿ ಕೇಂದ್ರದ ಪದಾಧಿಕಾರಿಗಳು ಹಾಗೂ ವಿವಿಧ ಪ್ರಗತಿಪರ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.