ಅರಿಹಂತ ಆಸ್ಪತ್ರೆಯಿಂದ ವಿಶ್ವ ಹೃದಯ ವಾಕ್‌ಥಾನ್‌

KannadaprabhaNewsNetwork | Published : Sep 30, 2024 1:26 AM

ಸಾರಾಂಶ

ಅರಿಹಂತ ಆಸ್ಪತ್ರೆಯಿಂದ ವಿಶ್ವ ಹೃದಯ ದಿನದ ಅಂಗವಾಗಿ ನಗರದಲ್ಲಿ ಭಾನುವಾರ ವಾಕ್‌ಥಾನ್‌ ಹಮ್ಮಿಕೊಳ್ಳಲಾಗಿತ್ತು. ಚನ್ನಮ್ಮ ವೃತ್ತದಿಂದ ಆರಂಭಗೊಂಡ ವಾಕ್‌ಥಾನ್‌ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೆಹರು ನಗರದಲ್ಲಿರುವ ಅರಿಹಂತ ಆಸ್ಪತ್ರೆಗೆ ತಲುಪಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅರಿಹಂತ ಆಸ್ಪತ್ರೆಯಿಂದ ವಿಶ್ವ ಹೃದಯ ದಿನದ ಅಂಗವಾಗಿ ನಗರದಲ್ಲಿ ಭಾನುವಾರ ವಾಕ್‌ಥಾನ್‌ ಹಮ್ಮಿಕೊಳ್ಳಲಾಗಿತ್ತು. ಚನ್ನಮ್ಮ ವೃತ್ತದಿಂದ ಆರಂಭಗೊಂಡ ವಾಕ್‌ಥಾನ್‌ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೆಹರು ನಗರದಲ್ಲಿರುವ ಅರಿಹಂತ ಆಸ್ಪತ್ರೆಗೆ ತಲುಪಿತು. ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ವಾಕ್‌ಥಾನ್‌ಗೆ ಚಾಲನೆ ನೀಡಿದರು. ಅತಿಥಿಯಾಗಿದ್ದ ಬಿಮ್ಸ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದು ಹುಲ್ಲೋಳಿ ಅವರು, ಸಾರ್ವಜನಿಕ ಆರೋಗ್ಯದ ಮೇಲಿನ ಅಸಾಧಾರಣ ಬದ್ಧತೆ ಮತ್ತು ಸಮುದಾಯಕ್ಕೆ ನೀಡಿದ ಸೇವೆಗಾಗಿ ಅರಿಹಂತ ಆಸ್ಪತ್ರೆಯ ತಂಡವನ್ನು ಅಭಿನಂದಿಸಿದರು.

ವಾಕ್‌ಥಾನ್‌ನಲ್ಲಿ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತರು, ಬೆಳಗಿನ ವಾಕ್ ಮಾಡುವ ಜನರು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಹೃದಯ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಅದನ್ನು ತಡೆಯಲು ಆರೈಕೆಯ ಪ್ರಾಮುಖ್ಯತೆಯನ್ನು ಮತ್ತು ಹೃದಯ ರೋಗ ಕಾಯಿಲೆಗಳಿಂದ ದೂರ ಇರಲು ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವುದನ್ನು ಒತ್ತಿ ಹೇಳಿತು.

ಅರಿಹಂತ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ಡಿ. ದೀಕ್ಷಿತ್ ಮಾತನಾಡಿ, ಈ ವರ್ಷದ ವಿಶ್ವ ಹೃದಯ ದಿನದ ಧ್ಯೇಯ ವಾಕ್ಯ ಹೃದಯಕ್ಕಾಗಿ ಕ್ರಿಯೆ ಆಗಿದೆ. ಈ ದಿನ ಸಂಭ್ರಮಾಚರಣೆಗೆ ಅಲ್ಲ, ಬದಲಾಗಿ ಹೃದಯ ರೋಗ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕಾದ ದಿನ. ಜಂಕ್ ಆಹಾರ ತ್ಯಜಿಸುವುದು ಮತ್ತು ದಿನನಿತ್ಯ 30 ನಿಮಿಷ ನಡೆಯುವ ಸರಳ ವಿಧಾನ, ಜೀವನ ಶೈಲಿಯ ಬದಲಾವಣೆ ಅಳವಡಿಸಿಕೊಳ್ಳಲು ಸಲಹೆ ನೀಡಿದರು.

ನಿರ್ದೇಶಕರಾದ ಅಭಿನಂದನ್ ಪಾಟೀಲ ಮತ್ತು ಉತ್ತಮರಾವ್ ಪಾಟೀಲ ಅವರು, ಆಸ್ಪತ್ರೆಯ ಹೃದಯ ಆರೋಗ್ಯಕ್ಕೆ ಪ್ರೋತ್ಸಾಹಿಸುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ ಎಂದರು.

ಅರಿಹಂತ್ ಆಸ್ಪತ್ರೆಯ ವೈದ್ಯರಾದ ಡಾ.ಪ್ರಭು ಹಲಕಟ್ಟಿ, ಡಾ.ಲೋಕನಾಥ್ ಮಡಗಣ್ಣವರ, ಡಾ.ವರದರಾಜ್ ಗೋಕಾಕ, ಡಾ.ಅಂಬರೀಶ್, ಡಾ.ಸೂರಜ್ ಪಾಟೀಲ, ಡಾ.ವಿಜಯ್, ಡಾ.ಸಂಜೀವ್ ಮತ್ತು ಡಾ.ನಿಖಿಲ್ ದೀಕ್ಷಿತ್ ಪಾಲ್ಗೊಂಡಿದ್ದರು.

Share this article