ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಇತರೆ ಗಣ್ಯರು ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ ಅವರು ತಂಬಾಕು ಸೇವನೆ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಂಬಾಕು ಸೇವನೆ ಹಾಗೂ ಮದ್ಯಪಾನ ಇನ್ನಿತರ ದುಶ್ಚಟದಿಂದ ಆರೋಗ್ಯದ ಮೇಲೆ ಉಂಟಾಗುವ ಗಂಭೀರ ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕು. ಸಾರ್ವಜನಕರು ದುಶ್ಚಟಗಳಿಂದ ಹೊರಬಂದು ಕುಟುಂಬದ ಪೋಷಣೆ ಕಡೆ ಗಮನಹರಿಸಿ ಉತ್ತಮ ಜೀವನ ನಡೆಸುವಂತೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಎಡಿಸಿ ಗೀತಾ ಹುಡೆದ ಅವರು ಮಾತನಾಡಿ, ವಿಶ್ವಸಂಸ್ಥೆ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು 1988 ಮೇ 31 ರಂದು ಮೊದಲ ಬಾರಿಗೆ ಆಚರಣೆಗೆ ತಂದಿತು. ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು. ಮದ್ಯ ವಯಸ್ಕರಿಗೆ ಸೀಮಿತವಾಗಿದ್ದ ತಂಬಾಕು ಸೇವನೆಯಿಂದ ಪ್ರಸ್ತುತ ದಿನಗಳಲ್ಲಿ 13-14 ವರ್ಷದ ಮಕ್ಕಳು ಕೂಡ ಈ ಚಟಕ್ಕೆ ಒಳಗಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ. ಮಕ್ಕಳು ಬೇಗನೆ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಶಾಲೆ ಕಾಲೇಜಿನ ಮಕ್ಕಳಿಗೂ ಇದರ ಬಗ್ಗೆ ಅರಿವು ಮೂಡಿಸುವುದು ಉತ್ತಮ. ಈ ವರ್ಷದ ಘೋಷವಾಕ್ಯ ‘ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು’ ಎಂಬುದಾಗಿದೆ ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಚಿದಂಬರಂ ಮಾತನಾಡಿ, ತಂಬಾಕಿನಲ್ಲಿರುವ ನಿಕೋಟಿನ್ ಅಂಶವು ಮತ್ತೆ ಮತ್ತೆ ತಂಬಾಕು ಬಳಸಲು ಜನರನ್ನು ಪ್ರೇರೆಪಿಸಲಿದೆ. ಪುರುಷರಲ್ಲಿ ತಂಬಾಕು ಸೇವನೆ ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಸಹ ತಂಬಾಕು ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸ ಸಂಗತಿಯಾಗಿದೆ. ತಂಬಾಕು ಸೇವನೆಯ ದುಶ್ಚಟಗಳಿಂದಾಗುವ ನಿರಂತರ ಆರೋಗ್ಯದ ಸಮಸ್ಯೆಗಳ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಿ ತಂಬಾಕು ಸೇವನೆಯನ್ನು ತಡೆಯುವುದೇ ಜಾಥಾದ ಉದ್ದೇಶ ಎಂದರು.