ಆಧ್ಯಾತ್ಮಿಕ ಜೀವನದಿಂದಲೇ ವಿಶ್ವಶಾಂತಿ ಸಾಧ್ಯ-ಸುರೇಖಾ ಬಿ.ಕೆ.

KannadaprabhaNewsNetwork |  
Published : Jul 31, 2026, 02:15 AM IST
ಬ್ಯಾಡಗಿ ಪಟ್ಟಣದ ಬಸವೇಶ್ವರ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಗುರು ಸನ್ಮಾನ ಹಾಗೂ ಆಧ್ಯಾತ್ಮಿಕ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. | Kannada Prabha

ಸಾರಾಂಶ

ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಮನುಷ್ಯ ಅನ್ಯಗ್ರಹಕ್ಕೆ ತೆರಳಿ ಬಂದರೂ ಜಗತ್ತಿನಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ಇನ್ನೂ ನೆಲೆಸಿಲ್ಲ. ಯುದ್ಧದ ಕಾರ್ಮೋಡ, ಭಯೋತ್ಪಾದನೆ, ಪ್ರಕೃತಿ ವಿಕೋಪ, ದ್ವೇಷ, ಅಸೂಯೆ ಹಾಗೂ ಸ್ವಾರ್ಥ ದಿಂದ ಮಾನವಕುಲ ತತ್ತರಿಸಿದೆ.

ಬ್ಯಾಡಗಿ: ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಮನುಷ್ಯ ಅನ್ಯಗ್ರಹಕ್ಕೆ ತೆರಳಿ ಬಂದರೂ ಜಗತ್ತಿನಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ಇನ್ನೂ ನೆಲೆಸಿಲ್ಲ. ಯುದ್ಧದ ಕಾರ್ಮೋಡ, ಭಯೋತ್ಪಾದನೆ, ಪ್ರಕೃತಿ ವಿಕೋಪ, ದ್ವೇಷ, ಅಸೂಯೆ ಹಾಗೂ ಸ್ವಾರ್ಥ ದಿಂದ ಮಾನವಕುಲ ತತ್ತರಿಸಿದೆ. ಭೌತಿಕ ಪ್ರಗತಿಯೊಂದಿಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ನಿಜವಾದ ಶಾಂತಿ ಮತ್ತು ಸಂತೋಷ ದೊರೆಯುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿ ಸುರೇಖಾ ಬಿ.ಕೆ. ಹೇಳಿದರು.ಪಟ್ಟಣದ ಬಸವೇಶ್ವರ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಗುರು ಸನ್ಮಾನ ಹಾಗೂ ಆಧ್ಯಾತ್ಮಿಕ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಮನುಷ್ಯನ ಬದುಕನ್ನು ಸುಲಭಗೊಳಿಸಿದರೂ ಮನಸ್ಸಿಗೆ ಶಾಂತಿ ನೀಡಲು ಸಾಧ್ಯವಾಗಿಲ್ಲ. ಇಂದಿನ ಸಮಾಜದಲ್ಲಿ ಮಾನಸಿಕ ಒತ್ತಡ, ಕುಟುಂಬ ಕಲಹ, ಆತಂಕ, ನಿರಾಶೆ ಮತ್ತು ಅಸಹಿಷ್ಣುತೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆತ್ಮಜ್ಞಾನ ಮತ್ತು ರಾಜಯೋಗ ಧ್ಯಾನವೇ ಮನಸ್ಸಿನ ಶಾಂತಿಗೆ ಶಾಶ್ವತ ಪರಿಹಾರವಾಗಿದೆ ಎಂದು ತಿಳಿಸಿದರು.ಸಹೋದರಿ ಸೌಭಾಗ್ಯ ಬಿ.ಕೆ ಮಾತನಾಡಿ, ಜಗತ್ತಿನ 148ಕ್ಕೂ ಹೆಚ್ಚು ದೇಶಗಳಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಲಕ್ಷಾಂತರ ಜನರಿಗೆ ಉಚಿತವಾಗಿ ರಾಜಯೋಗ ಧ್ಯಾನ, ಆತ್ಮ ಜ್ಞಾನ, ವ್ಯಕ್ತಿತ್ವ ವಿಕಸನ ಹಾಗೂ ಮೌಲ್ಯಾಧಾರಿತ ಜೀವನದ ಶಿಕ್ಷಣ ನೀಡಲಾಗುತ್ತಿದೆ. ಪ್ರಕೃತಿ ವಿಕೋಪ, ಯುದ್ಧ ಮತ್ತು ತುರ್ತು ಸಂದರ್ಭಗಳಲ್ಲಿ ಅಸಹಾಯಕರಿಗೆ ಆಶ್ರಯ, ಅನ್ನ, ವೈದ್ಯಕೀಯ ನೆರವು ಸೇರಿದಂತೆ ವಿವಿಧ ಮಾನವೀಯ ಸೇವೆಗಳನ್ನೂ ಸಂಸ್ಥೆ ನಿರಂತರವಾಗಿ ಒದಗಿಸುತ್ತಿದೆ ಎಂದು ಹೇಳಿದರು.ಪುರಸಭೆ ಮಾಜಿ ಸದಸ್ಯೆ ಸುಲೋಚನಾ ಅರ್ಕಾಚಾರಿ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ರಾಜಯೋಗ ಧ್ಯಾನ, ಆತ್ಮ ಜ್ಞಾನ, ಪರಮಾತ್ಮನ ನೈಜ ಪರಿಚಯ, ನೈತಿಕ ಶಿಕ್ಷಣ, ಮೌಲ್ಯಾಧಾರಿತ ಜೀವನ, ಸಕಾರಾತ್ಮಕ ಚಿಂತನೆ, ಕೋಪ ನಿಯಂತ್ರಣ, ಒತ್ತಡ ನಿರ್ವಹಣೆ, ಕುಟುಂಬ ಸೌಹಾರ್ದ, ವ್ಯಸನಮುಕ್ತ ಜೀವನ, ಮಹಿಳಾ ಸಬಲೀಕರಣ, ಯುವಜನರ ವ್ಯಕ್ತಿತ್ವ ನಿರ್ಮಾಣ, ಆರೋಗ್ಯಕರ ಜೀವನಶೈಲಿ, ಪರಿಸರ ಸಂರಕ್ಷಣೆ, ಸೇವಾಭಾವ ಹಾಗೂ ವಿಶ್ವ ಬಂಧುತ್ವದ ಕುರಿತು ಉಚಿತ ತರಬೇತಿ ನೀಡಲಾಗುತ್ತಿದೆ. ಆತ್ಮಸಾಕ್ಷಾತ್ಕಾರ ಮತ್ತು ಪರಮಾತ್ಮನ ಸ್ಮರಣೆಯ ಮೂಲಕ ಪ್ರತಿಯೊಬ್ಬರೂ ತಮ್ಮೊಳಗಿನ ದೈವೀ ಗುಣಗಳನ್ನು ಜಾಗೃತಗೊಳಿಸಿಕೊಂಡು ಸಮಾಜದ ಉತ್ತಮ ನಾಗರಿಕರಾಗಬೇಕು ಎಂದು ತಿಳಿಸಿದರು.ಈ ವೇಳೆ ಕಳೆದ 30 ವರ್ಷಗಳಿಂದ ಸ್ವಯಂ ಪ್ರೇರಿತಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಜಾಪಿತ ಬ್ರಹ್ಮನ ವಾಣಿಯನ್ನು ಹಾಗೂ ವಿಚಾರಗಳನ್ನು ಎಲ್ಲರಿಗೂ ಮುಟ್ಟಿಸುತ್ತಿರುವ 20ಕ್ಕೂ ಹೆಚ್ಚು ಹಿರಿಯ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನ್ಯಾಮತಿಯ ವಂದನಾ. ಬಿಕೆ, ವನಜಾಕ್ಷಿ, ಇಂದ್ರಕ್ಕ, ಶಿವಲೀಲಕ್ಕ, ಗಿರಿಜಕ್ಕ, ನೇತ್ರಕ್ಕ ಸುಶೀಲಮ್ಮ ಬಡಿಗೇರ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಬ್ರಹ್ಮಕುಮಾರಿಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ರಕ್ಷಣೆಗೆ ಸೂಕ್ತ ಕಾನೂನು ಅರಿವು ನೀಡುವುದು ಅತ್ಯಗತ್ಯ: ಹುಲಗಪ್ಪ ಡಿ.
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಬಾರದು: ಜಾನಕಿ ಕೆ.ಎಂ.