ಬಸವತತ್ವ ಪಾಲನೆಯಿಂದ ವಿಶ್ವಶಾಂತಿ: ಸಿದ್ದಗಂಗಾಶ್ರೀ

KannadaprabhaNewsNetwork |  
Published : Jun 18, 2024, 12:45 AM IST
17ಕೆಎಂಎನ್‌ಡಿ-11ಮಂಡ್ಯ ತಾಲ್ಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದೇವಿರಮ್ಮ ದೇವಾಲಯ ಲೋಕಾರ್ಪಣೆ ಸಮಾರಂಭದಲ್ಲಿ ಸಿದ್ದಗಂಗಾ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಅವರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ವಿಶ್ವಗುರು ಬಸವಣ್ಣನವರ ಕಾಯಕ-ದಾಸೋಹ ತತ್ವ ಸೇರಿದಂತೆ 12ನೇ ಶತಮಾನದ ಶಿವಶರಣರ ಸಮಸಮಾಜ ನಿರ್ಮಾಣದ ಆಶಯಗಳನ್ನು ಅನುಷ್ಠಾನಗೊಳಿಸಿದಲ್ಲಿ ವಿಶ್ವಶಾಂತಿ ನೆಲೆಯಾಗುತ್ತದೆ ಎಂದು ಶ್ರೀಸಿದ್ದ ಗಂಗಾಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗಮಹಾಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಶ್ವಗುರು ಬಸವಣ್ಣನವರ ಕಾಯಕ-ದಾಸೋಹ ತತ್ವ ಸೇರಿದಂತೆ 12ನೇ ಶತಮಾನದ ಶಿವಶರಣರ ಸಮಸಮಾಜ ನಿರ್ಮಾಣದ ಆಶಯಗಳನ್ನು ಅನುಷ್ಠಾನಗೊಳಿಸಿದಲ್ಲಿ ವಿಶ್ವಶಾಂತಿ ನೆಲೆಯಾಗುತ್ತದೆ ಎಂದು ಶ್ರೀಸಿದ್ದ ಗಂಗಾಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗಮಹಾಸ್ವಾಮೀಜಿ ಹೇಳಿದರು.ತಾಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದೇವಿರಮ್ಮ ದೇವಾಲಯ ಲೋಕಾರ್ಪಣೆ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಶಾಂತಿ, ಅಸಮಾನತೆ, ಮೌಢ್ಯತೆ, ದ್ವೇಷಸಾಧನೆ, ಯುದ್ಧಭೀತಿಯಿಂದ ನಲುಗುತ್ತಿರುವ ವಿಶ್ವದಲ್ಲಿ ಶಾಂತಿ ನೆಲೆಯಾಗಬೇಕಾದರೆ ಪ್ರತಿಯೊಬ್ಬರೂ ದುಡಿದು ಬದುಕುವ ಕಾಯಕ ಹಾಗೂ ಸಮಾನತಾ ಸಮಾಜವನ್ನು ನಿರ್ಮಾಣ ಮಾಡುವ ಶಿವಶರಣರ ದಾಸೋಹ ತತ್ವವನ್ನು ಅನುಸರಿಸಿದಲ್ಲಿ ಸದೃಢ ಸಮಾಜ ನಿರ್ಮಾಣವಾಗುತ್ತದೆ. ಕಾಯಕದಲ್ಲಿ ಕೀಳರಿಮೆಯನ್ನು ಕಾಣದೆ ಎಲ್ಲಾ ಕೆಲಸಗಳೂ ಸರ್ವಶ್ರೇಷ್ಠವೆಂದು ಭಾವಿಸಬೇಕು. ವಿಶೇಷವಾಗಿ ಕೃಷಿ ಕಾಯಕ ಎಲ್ಲರಿಗೂ ಅನ್ನವನ್ನು ನೀಡುವ ಮಹತ್ವದ ಕೆಲಸವಾಗಿದ್ದು ಯುವಜನತೆ ಕೃಷಿಯ ಕಡೆ ಹೆಚ್ಚಿನ ಆಸಕ್ತಿವಹಿಸಬೇಕು ಎಂದರು.

ದೇವಾಲಯಗಳು, ಪ್ರಾರ್ಥನಾ ಮಂದಿರಗಳು ಮನುಷ್ಯನಿಗೆ ಸನ್ಮಾರ್ಗವನ್ನು ತೋರುವ ದಾರಿದೀಪವಾಗಿವೆ. ಪ್ರತಿಯೊಬ್ಬರೂ ನಿತ್ಯ ಪ್ರಾರ್ಥನೆ, ಪೂಜೆಯ ಜೊತೆಗೆ ಶಿವಶರಣರ ಆದರ್ಶವನ್ನು ಮೈಗೂಡಿಸಿಕೊಂಡು ನಡೆದಾಗ ಎಲ್ಲೆಡೆ ಶಾಂತಿಯ ವಾತಾವರಣ ನೆಲೆಯಾಗುತ್ತದೆ. ಮಹಿಳೆಯರು ಮಕ್ಕಳಿಗೆ ಸಾಧಕರ, ಹಿರಿಯರ ಆದರ್ಶಗಳನ್ನು ಪರಿಚಯಿಸುವ ಮೂಲಕ ಬಾಲ್ಯದಿಂದಲೇ ಮಕ್ಕಳಲ್ಲಿ ಬಸವಪ್ರಜ್ಞೆ ಮೂಡಿಸಬೇಕಾದ ಅನಿವಾರ್‍ಯತೆ ಎದುರಾಗಿದೆ ಎಂದರು.೧೧೧ವರ್ಷಗಳ ಸುದೀರ್ಘ ಕಾಲ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕಾರ್ಯಗಳ ಮೂಲಕ ಕೋಟ್ಯಾಂತರ ಭಕ್ತರಭಾವಕೋಶದಲ್ಲಿ ನೆಲೆಯಾಗಿ ನಿಂತ ಲಿಂಗೈಕ್ಯ ಪರಮಪೂಜ್ಯ ಗುರುವರ್ಯರಾದ ಡಾ.ಶ್ರೀಶಿವ ಮಾರಮಹಾ ಸ್ವಾಮೀಜಿ ಅವರ ಪುತ್ಥಳಿ ಹಾಗೂ ವಿಶ್ವಗುರು ಬಸವಣ್ಣನವರ ಪ್ರತಿಮೆಯನ್ನು ಮಾಚಹಳ್ಳಿ ಗ್ರಾಮದಲ್ಲಿ ಸ್ಥಾಪಿಸಿರುವುದು ಅತ್ಯಂತ ಶ್ಲಾಘನೀಯ. ಅವರ ಆದರ್ಶಗಳು ಪ್ರತಿಯೊಬ್ಬರ ಮನೆಮನಗಳನ್ನು ಮುಟ್ಟಬೇಕೆಂದು ಆಶೀರ್ವದಿಸಿದರು.

ಭವ್ಯಮೆರವಣಿಗೆ: ಗ್ರಾಮಕ್ಕೆ ಆಗಮಿಸಿದ ಪೂಜ್ಯ ಶ್ರೀ ಸಿದ್ದಲಿಂಗಮಹಾಸ್ವಾಮೀಜಿ, ಬೇಬಿಬೆಟ್ಟದ ಶ್ರೀಶಿವಸಿದ್ದೇಶ್ವರಸ್ವಾಮೀಜಿ ಹಾಗೂ ಗಣ್ಯರನ್ನು ಪೂರ್ಣಕುಂಭದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಗ್ರಾಮದ ಹಲವು ಭಕ್ತರ ಮನೆಗೆ ತೆರಳಿಸಿದ ಸ್ವಾಮೀಜಿಯವರಿಗೆ ಭಕ್ತರು ಪಾದಪೂಜೆ ನೆರವೇರಿಸಿ ಗುರುವಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್‌, ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್‌ ಬೆಟ್ಟಹಳ್ಳಿ, ಅಖಿಲಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎಂ.ಸುಬ್ರಹ್ಮಣ್ಯ, ಬಸಂತ್, ಬಿಜೆಪಿ ಮುಖಂಡರಾದ ರಾಜು, ರೈತಸಂಘ ಮುಖಂಡ ಸಂತೋಷ್ ಕುಮಾರ್, ಜೆಡಿಎಸ್ ಮುಖಂಡ ಶಿವರಾಜ್, ಚೇತನ್, ತಮ್ಮಣ್ಣ, ಹುಲಿಕೆರೆಕೊಪ್ಪಲು ಕುಮಾರ್ ಮತ್ತಿತರರಿದ್ದರು.

PREV