ತಮಿಳುನಾಡು ಯುವಕ ಗಿನ್ನೆಸ್ ದಾಖಲೆಗಾಗಿ ಸೈಕಲ್ ಮೂಲಕ ವಿಶ್ವ ಪರ್ಯಟನೆ!

KannadaprabhaNewsNetwork | Published : Feb 4, 2024 1:33 AM

ಸಾರಾಂಶ

ವಿಶ್ವದಾಖಲೆಗಾಗಿ ಸೈಕಲ್‌ ಏರಿ ಪ್ರಪಂಚದ ಪರ್ಯಟನೆ ಕೈಗೊಂಡಿರುವ ತಮಿಳುನಾಡಿನ ಯುವಕ ಮುತ್ತು ಸೆಲ್ವಂ ಪೊಳ್ಳಾಚಿ ಶನಿವಾರ ರೋಣಕ್ಕೆ ಆಗಮಿಸಿದರು. ವೇಳೆ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.

ರೋಣ: ವಿಶ್ವದಾಖಲೆಗಾಗಿ ಸೈಕಲ್‌ ಏರಿ ಪ್ರಪಂಚದ ಪರ್ಯಟನೆ ಕೈಗೊಂಡಿರುವ ತಮಿಳುನಾಡಿನ ಯುವಕ ಮುತ್ತು ಸೆಲ್ವಂ ಪೊಳ್ಳಾಚಿ ಶನಿವಾರ ರೋಣಕ್ಕೆ ಆಗಮಿಸಿದರು. ವೇಳೆ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.

ತಹಸೀಲ್ದಾರ್‌ ನಾಗರಾಜ ಕೆ. ಮತ್ತು ಕಚೇರಿ ಸಿಬ್ಬಂದಿ, ಸಿಪಿಐ ಎಸ್. ಎಸ್. ಬೀಳಗಿ ಹಾಗೂ ಪೊಲೀಸ್ ಠಾಣೆ ಸಿಬ್ಬಂದಿ, ಕರ್ನಾಟಕ ರಾಜ್ಯ ಮಾಜಿ ಸೈನಿಕರ ಸಂಘ, ಈಶ್ವರ ಸ್ಪೋರ್ಟ್ಸ್ ಸೇರಿದಂತೆ ಅನೇಕ ಸಂಘ- ಸಂಸ್ಥೆಗಳಿಂದ ಮುತ್ತು ಸೆಲ್ವಂ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಕೆಲವರು ತಮ್ಮ‌ ಕೈಲಾದಷ್ಟು ಸಹಾಯ ಮಾಡಿ ಪ್ರಯಾಣ ಸುಖಕರವಾಗಿರಲಿ, ಗುರಿ ಸಾಧನೆಗೆ ಯಾವುದೇ ಅಡ್ಡಿ ಆತಂಕ ಬರದಿರಲೆಂದು ಹಾರೈಸಿದರು. ರೋಣದಿಂದ ನರಗುಂದಕ್ಕೆ ಮುತ್ತು ಸೆಲ್ವಂ ಪ್ರಯಾಣ ಬೆಳಸಿದರು.

ಅಮೆರಿಕಾ ದೇಶದ ಸಾಹಸಿ ಲೀಕ್ಹಾಲ್ ಎಂಬುವರು 752 ದಿನ ಸೈಕಲ್ ಮೂಲಕ ಪ್ರಪಂಚ ಪರ್ಯಟನೆ ಮಾಡಿ ವಿಶ್ವ ಗಿನ್ನೆಸ್ ದಾಖಲೆ ಬರೆದಿದ್ದು, ಇದನ್ನು ಮುರಿದು ಹೊಸ ದಾಖಲೆ ನಿರ್ಮಿಸಲು, ಭಾರತ ದೇಶದ ಹೆಸರನ್ನು ಗಿನ್ನೆಸ್ ದಾಖಲೆ ಬುಕ್‌ ನಲ್ಲಿ ಸೇರಿಸಬೇಕು ಎಂಬ ಗುರಿ ಹೊಂದಿ ತಮಿಳುನಾಡಿನ ಕೊಯಿಮತ್ತೂರು ಜಿಲ್ಲೆಯ ಪೊಳ್ಳಾಚಿ ತಾಲೂಕಿನ ಪೊಳ್ಳಾಚಿ ಪಟ್ಟಣದ ನಿವಾಸಿ, 26ರ ಯುವಕ ಮುತ್ತು ಸೆಲ್ವಂ ಸೈಕಲ್ ಮೂಲಕ ಪ್ರಪಂಚ ಪರ್ಯಟನೆ ನಡೆಸಿದ್ದಾರೆ. ಕಳೆದ 2021ರ ಡಿಸೆಂಬರ್‌ 21ರಿಂದ ತಮಿಳುನಾಡಿನ ಪೊಳ್ಳಾಚಿಯಿಂದ ಸೈಕಲ್ ಪ್ರವಾಸ ಪ್ರಾರಂಭಿಸಿದ್ದು, ಈಗಾಗಲೇ ಆಂಧ್ರ, ತೆಲಂಗಾಣ, ಪಂಜಾಬ, ಉತ್ತರಪ್ರದೇಶ, ಜಮ್ಮು ಕಾಶ್ಮೀರ, ಹರ್ಯಾಣ, ಚಂಡಿಗಡ, ಮಧ್ಯಪ್ರದೇಶ ಸೇರಿದಂತೆ 19 ರಾಜ್ಯಗಳಲ್ಲಿ ಸಂಚರಿಸಿ, ಒಟ್ಟು 773 ದಿನ ಸೈಕಲ್ ತುಳಿದಿದ್ದಾನೆ.1111 ದಿನಗಳು, 34,000 ಕಿ.ಮೀ ಗುರಿ ಮುತ್ತು ಸೆಲ್ವಂ ಒಟ್ಟು 1111 ದಿನಗಳ ಪ್ರವಾಸ ಕೈಗೊಂಡು, ಒಟ್ಟು 34,200 ಕಿ.ಮೀ ಕ್ರಮಿಸುವ ಗುರಿ ಹೊಂದಿದ್ದಾನೆ. ಈಗಾಗಲೇ 773 ದಿನಗಳನ್ನು ಪೂರ್ತಿಗೊಳಿಸಿ, ಒಟ್ಟು 20,630 ಕಿ.ಮೀ ಸಂಚರಿಸಿದ್ದಾನೆ. ಸೈಕಲ್ ನಲ್ಲಿಯೇ ತನ್ನ ನಿತ್ಯದ ಉಡುಗೆ, ತೊಡುಗೆ, ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಸುಮಾರು 150. ಕೆ.ಜಿ ತೂಕದ ಸಾಮಗ್ರಿ ಸಮೇತ ಸೈಕಲ್ ತುಳಿಯುವ ಈತನ ಸಾಹಸ ಮೆಚ್ಚುವಂತದ್ದಾಗಿದೆ. ಸ್ವತಃ ತಾನೇ ಅಡುಗೆ ಮಾಡಿಕೊಳ್ಳುತ್ತಾನೆ. ಪೆಟ್ರೋಲ್ ಪಂಪ್, ದೇವಸ್ಥಾನ, ಕ್ರೀಡಾಂಗಣಗಳೇ ಸೆಲ್ವಂ ನಿತ್ಯ ವಾಸ್ತವ್ಯದ ತಾಣಗಳಾಗಿವೆ. 773 ಕಿ.ಮೀ. ಕ್ರಮಿಸಿದ ಈತ ಈಗಾಗಲೇ 3 ಸೈಕಲ್, 110 ಟೈರ್ ಬದಲಿಸಿದ್ದಾನೆ. ಕರ್ನಾಟಕ ರತ್ನ ಪುನೀತ ರಾಜಕುಮಾರ ಅವರ ಅಪ್ಪಟ ಅಭಿಮಾನಿಯಾದ ಸೆಲ್ವಂ, ಸೈಕಲ್ ನಲ್ಲಿ ಭಾರತ ಮತ್ತು ಕೆಂಪು, ಹಳದಿ ಬಣ್ಣ ಕರ್ನಾಟಕ ಬಾವುಟ, ಅಪ್ಪು ಭಾವಚಿತ್ರವಿರುವ ಬಾವುಟ ಕಟ್ಟಿಕೊಂಡು, ಸೈಕಲ್‌ಗೆ ಅಪ್ಪು ಪೋಟೋ ಅಂಟಿಸಿದ್ದಾನೆ. ಅಪ್ಪು ಭಾವಚಿತ್ರವಿರುವ ಡ್ರೆಸ್ ತೊಟ್ಟಿರುವ ಸೆಲ್ವಂ ಅಪ್ಪು ವ್ಯಕ್ತಿತ್ವವನ್ನು ಎಲ್ಲೆಡೆ ಪರಿಚಯಿಸುತ್ತಿದ್ದಾನೆ. ಈಗಾಗಲೇ 2.5 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ದೇಶದ ವಿವಿಧೆಡೆ ನೆಟ್ಟಿದ್ದು, ಈ ಕುರಿತು ಸೆಲ್ವಂ ಬಳಿ ಪೂರಕ ದಾಖಲೆಗಳಿವೆ.ಎಂ.ಬಿ.ಎ. ಫೈನಾಷಿಯಲ್ ಮ್ಯಾನೇಜ್‌ಮೆಂಟ್‌ ಪದವಿ ಪಡೆದು, ಬಯೋ ಮೆಡಿಕಲ್ ಉದ್ಯೋಗಿಯಾಗಿದ್ದ ಸೆಲ್ವಂ ತನ್ನ ಉದ್ಯೋಗಕ್ಕೆ ರಾಜಿನಾಮೆ ನೀಡಿ, ಸೈಕಲ್ ಮೂಲಕ ಪ್ರಪಂಚ ಪರ್ಯಟನೆ ಮಾಡಿ ಹೊಸ ಗಿನ್ನಿಸ್ ದಾಖಲೆ ಮಾಡಲು ಮುಂದಾಗಿದ್ದಾನೆ. ಈಗಾಗಲೇ ಲಿಮ್ಕಾ ದಾಖಲೆ, ಇಂಡಿಯಾ ಬುಕ್ ಆಪ್ ರಿಕಾರ್ಡ್‌ಗೆ ಈತನ ಹೆಸರು ಸೇರಿದ್ದು, 1111 ದಿನಗಳಲ್ಲಿ 34,200 ಕಿ.ಮೀ. ಸಂಚರಿಸಿ ವಿಶ್ವ ಗಿನ್ನಿಸ್ ದಾಖಲೆ ಬರೆಯಬೇಕು ಎಂಬುವುದು ಈತನ ಗುರಿಯಾಗಿದೆ. ಪಾಂಡಿಚೇರಿ ಮೂಲಕ ನೇಪಾಳ, ವಿಯಟ್ನಾಂ, ನಾಗಾಲ್ಯಾಂಡ್‌, ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾನೆ. ನಿತ್ಯ ತಾನು ತೆರಳಿದ ಬಗ್ಗೆ ಲಿಖಿತ ಮಾಹಿತಿಗಾಗಿ ಅಲ್ಲಿನ‌ ಪೊಲೀಸ್ ಠಾಣೆ, ತಹಸೀಲ್ದಾರ್‌ ಕಚೇರಿ, ಜಿಲ್ಲಾಧಿಕಾರಿ ಕಚೇರಿಗಳಿಗೆ ತೆರಳಿ ಪ್ರಮಾಣಪತ್ರ ಪಡೆಯುತ್ತಾನೆ. ಕಳೆದ 2 ವರ್ಷಗಳಿಂದ ಒಮ್ಮೆಯೂ ತನ್ನೂರಿಗೆ ಹೋಗಿಲ್ಲ. ಗುರಿ ಸಾಧನೆಗೆಯೊಂದೇ ಈತನ ಉದ್ದೇಶವಾಗಿದೆ‌ ಎಂಬುದು ಗಮನಾರ್ಹ ಸಂಗತಿಯಾಗಿದೆ.

Share this article