ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿಶ್ವ ಜಲ ದಿನಾಚರಣೆ

KannadaprabhaNewsNetwork | Published : Mar 23, 2024 1:24 AM

ಸಾರಾಂಶ

ವಿವಿಧ ಇಲಾಖೆಗಳ ಆಶ್ರಯದಲ್ಲಿ ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ. ಗೋಪಾಲಕೃಷ್ಣ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯಿತಿ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಆಶ್ರಯದಲ್ಲಿ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ. ಗೋಪಾಲಕೃಷ್ಣ ಮಾತನಾಡಿ, ಸಕಲ ಜೀವರಾಶಿಗಳಿಗೂ ಅತಿ ಅಗತ್ಯವಾಗಿರುವ ನೀರಿನ ಮಹತ್ವವನ್ನು ಎಲ್ಲರೂ ಅರಿತುಕೊಂಡು, ಅದರ ಸಂರಕ್ಷಣೆಗೆ ಪ್ರತಿಯೋರ್ವರೂ ಮುಂದಾಗಬೇಕು ಎಂದು ಕರೆ ನೀಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ಪೋಲು ಕಂಡುಬಂದರೆ ತಕ್ಷಣ ಸರಿಪಡಿಸಬೇಕು. ಸರ್ಕಾರಗಳು ಜಾರಿಗೊಳಿಸುವ ಕಾನೂನು ಹಾಗೂ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಜೀವ ಜಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ವಕೀಲ ಎಚ್.ಎಸ್. ವೆಂಕಟೇಶ್ ಅವರು, ಜಲಮೂಲಗಳ ಸಂರಕ್ಷಣೆಯೊಂದಿಗೆ, ಹಸಿರೀಕರಣಕ್ಕೆ ಆದ್ಯತೆ ನೀಡಬೇಕು. ದಿನಬಳಕೆಯಲ್ಲಿ ನೀರಿನ ಮಿತವ್ಯಯ ಮಾಡಬೇಕು. ನೀರಿನ ಪುನರ್ಬಳಕೆಗೆ ಹೆಚ್ಚು ಒತ್ತು ನೀಡಬೇಕು. ಹಸಿರು ಉಳಿದರೆ ಮಾತ್ರ ನೀರು, ನೀರಿದ್ದರೆ ಮಾತ್ರ ಜೀವನ ಎಂಬುದನ್ನು ಮರೆಯಬಾರದು ಎಂದರು.

ವಕೀಲರ ಸಂಘದ ಅಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ಮಾತನಾಡಿ, ನೀರಿನ ಮಾಲಿನ್ಯ ತಡೆಗಟ್ಟುವಲ್ಲಿ ಎಲ್ಲರೂ ಜವಾಬ್ದಾರಿ ತೋರಬೇಕು. ಕೆರೆ, ಹೊಳೆ, ನದಿ, ತೊರೆಗಳ ಸಂರಕ್ಷಣೆ ಆಗಬೇಕು. ಸರ್ಕಾರದ ಮಳೆ ಕೊಯ್ಲು, ಕೆರೆ ನಿರ್ಮಾಣ, ಇಂಗು ಗುಂಡಿಯಂತಹ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅಭಿಪ್ರಾಯಿಸಿದರು.

ತಹಸೀಲ್ದಾರ್‌ ನವೀನ್‍ಕುಮಾರ್ ಮಾತನಾಡಿ, ಜಲ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿ ಎಂದು ಭಾವಿಸದೆ ಸಾರ್ವಜನಿಕರೂ ಸಹ ಸಾಮೂಹಿಕ ಜವಾಬ್ದಾರಿ ನಿರ್ವಹಿಸಬೇಕು ಎಂದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೀರಿಗೆ ಸಂಬಂಧಿಸಿದಂತೆ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

Share this article