ಮದ್ದೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಯನ್ಸ್ ಸಂಸ್ಥೆ ವಿಶ್ವದ 208 ದೇಶಗಳಲ್ಲಿ ಸಮಾಜ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದೆ ಎಂದು ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಅಧ್ಯಕ್ಷೆ ಡಾ.ಪ್ಯಾಟಿಹಿಲ್ ಶುಕ್ರವಾರ ಹೇಳಿದರು.
ಸೇವೆಯೇ ತನ್ನ ಗುರಿ ಎಂದು ಕೆಲಸ ಮಾಡುತ್ತಿರುವ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯು ರಾಜ್ಯದ ಸುಮಾರು 2 ಸಾವಿರ ಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಮಹಿಳಾ ಸ್ವಾವಲಂಬನೆ. ಮಕ್ಕಳ ಆರೋಗ್ಯ ಮತ್ತು ವಿಕಲಚೇತನರ ಅಭಿವೃದ್ಧಿಯ ದೃಷ್ಟಿಕೋನವನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದರು.
ಅಂತಾರಾಷ್ಟ್ರೀಯ ಸಂಸ್ಥೆ ತನ್ನ ಸಹ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರು ಮತ್ತು ಮೈಸೂರು ನಗರದಲ್ಲಿ ಕಣ್ಣಿನ ಆಸ್ಪತ್ರೆ, ರಕ್ತ ನಿಧಿ ಕೇಂದ್ರ ಹಾಗೂ ಶ್ರವಣ ದೋಷವುಳ್ಳ ಜನರಿಗೆ ಸಾಧನ ಸಲಕರಣೆಗಳನ್ನು ಉಚಿತವಾಗಿ ನೀಡುವುದರ ಜೊತೆಗೆ ಗ್ರಾಮೀಣ ಪ್ರದೇಶದ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದೆ ಎಂದರು.ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ನಿರ್ದೇಶಕ ವಂಶಿಧರ್, ಶಾಂತಿ ಬಾಬು, ಪ್ರಾದೇಶಿಕ ಮುಖ್ಯಸ್ಥ ವಿಜಯಕುಮಾರ್ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮದ್ದೂರು ಲಯನ್ಸ್ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ವಿ.ಕೆ.ಜಗದೀಶ್, ಪ್ರಾಂತೀಯ ಅಧ್ಯಕ್ಷ ಎಸ್.ಪಿ.ಆದರ್ಶ, ಜಿಎಂಟಿಯ ಕೆ.ಎಸ್. ಸುನಿಲ್ ಕುಮಾರ್, ಅಧ್ಯಕ್ಷ ಎಂ.ಎಚ್.ಸಿದ್ದೇಗೌಡ, ಲಿಂಗನದೊಡ್ಡಿ ರಾಮಕೃಷ್ಣ, ಕದಂಬ ಲಯನ್ ಸಂಸ್ಥೆ ಅಧ್ಯಕ್ಷ ಕೆಂಗಲ್ ಗೌಡ, ಸೇರಿ ಸಂಸ್ಥೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.