ಸರ್ಕಾರಿ ಶಾಲೆಯ ಆವರಣ ಗೋಡೆಯಲ್ಲಿ ವರ್ಲಿ ಚಿತ್ರ ಆಕರ್ಷಣೆ

KannadaprabhaNewsNetwork | Published : Mar 14, 2025 12:33 AM

ಸಾರಾಂಶ

ಸಮಾಜ ಸೇವಾ ಸಂಸ್ಥೆಯೊಂದು ಸರ್ಕಾರಿ ಶಾಲೆಯ ಆವರಣ ಗೋಡೆಯನ್ನು ಸ್ವಚ್ಛಗೊಳಿಸಿ ವರ್ಲಿ ಚಿತ್ರಗಳನ್ನು ಬಿಡಿಸಿ ನೋಡುಗರನ್ನು ತಿರುಗಿ ನೋಡುವಂತೆ ಮಾಡಿದೆ.

ಮಂಜುನಾಥ್ ಟಿ. ಎನ್.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಸರ್ಕಾರಿ ಶಾಲೆಗಳಿಗೆ ಅನುದಾನಗಳು ಕಡಿಮೆ ಪ್ರಮಾಣದಲ್ಲಿ ಲಭ್ಯ ವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿದೆ. ಇಂತಹ ಸ್ಥಿತಿಯಲ್ಲಿ ಸ್ಥಳೀಯ ದಾನಿಗಳ ಸಾಮಾಜಿಕ ಕಳಕಳಿಯಿಂದ ನೆರವು ನೀಡುವ ಸಂಘ ಸಂಸ್ಥೆಗಳ ಮೂಲಕ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಲಭಿಸುತ್ತಿದೆ. ಈ ನಿಟ್ಟಿನಲ್ಲಿ ಸಮಾಜ ಸೇವಾ ಸಂಸ್ಥೆಯೊಂದು ಸರ್ಕಾರಿ ಶಾಲೆಯ ಆವರಣ ಗೋಡೆಯನ್ನು ಸ್ವಚ್ಛಗೊಳಿಸಿ ವರ್ಲಿ ಚಿತ್ರಗಳನ್ನು ಬಿಡಿಸಿ ನೋಡುಗರನ್ನು ತಿರುಗಿ ನೋಡುವಂತೆ ಮಾಡಿದೆ.

ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣ ಗೋಡೆಯಲ್ಲಿ ವರ್ಲಿ ಚಿತ್ರಕಲೆ, ಸಾಮಾಜಿಕ ಮೌಲ್ಯ, ಪರಿಸರ ಕಾಳಜಿಯ ರೇಖಾ ಚಿತ್ರಗಳು, ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿಗಳನ್ನು ಸ್ಥಳದಲ್ಲಿಯೇ ತಯಾರಿಸುವ ವಿಧಾನ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಬೆಂಗಳೂರು ಮೂಲದ ಜಾಗೃತಿ ಸಮಾಜ ಸೇವಾ ಟ್ರಸ್ಟ್ ಮತ್ತು ಸಿಸ್ಕೊ ಸಂಸ್ಥೆಯ ಸಹಯೋಗದ ವತಿಯಿಂದ ನಡೆಯಿತು.

ಕೊಡಗು ಜಿಲ್ಲೆ ಮೂಲದ ರೇಣು ಅಪ್ಪಚ್ಚು ಅವರು ಶಾಂತಿ ದೂತರು, ವಿಶ್ವ ಶಾಂತಿಗಾಗಿ ನೋಬೆಲ್ ಪ್ರಶಸ್ತಿ ಗಳಿಸಿದ ದಿ. ಮದರ್ ತೆರೇಸಾ ಅವರಿಂದ ಪ್ರೇರೇಪಿತರಾಗಿ ಬೆಂಗಳೂರು ಮಹಾನಗರದ ಹೊರ ವಲಯದಲ್ಲಿ 1996 ರಲ್ಲಿ ಸಾಮಾಜಿಕ ಕಳಕಳಿಯ ಮನೊಉದ್ದೇಶದಿಂದ ಸ್ಥಾಪನೆಯಾದ ಸಂಸ್ಥೆ ಜಾಗೃತಿ ಸೇವಾ ಸಂಸ್ಥೆ. ಸೇವಾ ಸಂಸ್ಥೆಯು ಬೆಂಗಳೂರಿನ ನಾನಾ ಭಾಗಗಳಲ್ಲಿ ಸಂತ್ರಸ್ತ ಮಕ್ಕಳ ಮತ್ತು ಮಹಿಳೆಯ ಹಾಗೂ ನಿರ್ಗತಿಕ ವೃದ್ಧರಿಗಾಗಿ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಇದಲ್ಲದೆ ಎರಡು ಆರೋಗ್ಯ ಕೇಂದ್ರಗಳು, ಯುವ ಸಮುದಾಯಕ್ಕೆ ದಾರಿ ದೀಪ ವಾಗುವ ನಿಟ್ಟಿನಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳು, ಆಪ್ತ ಸಮಾಲೋಚನೆ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿ ಹೆಸರನ್ನು ಗಳಿಸಿರುತ್ತದೆ. 2018 ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಳಯದ ವೇಳೆ ತುರ್ತು ಪರಿಸ್ಥಿತಿಯಲ್ಲಿ ಸೇವಾ ಕಾರ್ಯಕ್ರಮವನ್ನು ನೀಡಿದೆ. ಸತತ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯ ನಾನಾ ಭಾಗಗಳಲ್ಲಿರುವ ಶಾಲೆಗಳಲ್ಲಿ ಕ್ರೀಡೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತನ್ನ ಕಲಿಕ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಜಾಗೃತಿ ಸೇವಾ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಕಣ್ಣನ್ ಆರ್ ಅವರು ಸಂಸ್ಥೆ ಬಗ್ಗೆ ಮಾಹಿತಿ ನೀಡಿದರು.

ಸಿಸ್ಕೋ ಕಂಪನಿಯ ಪ್ರಮುಖರು ಮತ್ತು ಸ್ಥಳೀಯರಾದ ಮಚ್ಚಾರಂಡ ಅಯ್ಯಪ್ಪ ಮಾತನಾಡಿ, ಖಾಸಗಿ ಶಾಲೆಗಳಲ್ಲಿರುವ ಆಧುನಿಕ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ಇಲ್ಲ. ಆಧುನಿಕ ಬದುಕಿಗೆ ಹೊಂದಿಕೊಂಡಿರುವ ಪ್ರಸ್ತುತ ಜನತೆಯು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸಿ ತಾವು ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದ್ದೇವೆ ಎಂದು ತಿಳಿದುಕೊಳ್ಳುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದ ಸಾವಿರಾರು ಮಂದಿ ಉನ್ನತ ಮಟ್ಟದ ಸ್ಥಾನಮಾನ ಪಡೆದು ಜೀವನ ಕಂಡುಕೊಂಡಿದ್ದಾರೆ. ನಾವು ಕಲಿತ ಶಾಲೆಗೆ ಪರೋಪಕಾರ ಮಾಡುವ ಮನೋಭಾವ ನಮ್ಮದಾಗಬೇಕು. ಶಾಲೆಯ ಗುಣಮಟ್ಟ ಉತ್ತಮವಾಗಲು ಸ್ಥಳೀಯರ ಸಹಕಾರ ಸಂಘ ಸಂಸ್ಥೆಗಳ ಸಹಕಾರ ಹಣದ ಕ್ರೋಢೀಕರಣದೊಂದಿಗೆ ಶಾಲೆಯ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಎರಡು ದಿನಗಳ ಕಾಲ ನಡೆದ ಸೇವಾ ಕಾರ್ಯಕ್ರಮದಲ್ಲಿ ಸಿಸ್ಕೋ ಮತ್ತು ಜಾಗೃತಿ ಸೇವಾ ಟ್ರಸ್ಟ್ ನ 20 ಮಂದಿ ಸ್ವಯಂ ಸೇವಕರು ಭಾಗವಹಿಸಿದ್ದರು. ಶಾಲೆಯ ಆವರಣಗೋಡೆ ಸೇರಿದಂತೆ ಶಾಲಾ ಮೈದಾನಕ್ಕೆ ತೆರಳುವ ರಸ್ತೆಯ ಬದಿಯ ಗೋಡೆಗಳ ಮೇಲೆ ವರ್ಲಿ ಚಿತ್ರಕಲೆ, ಸಾಮಾಜಿಕ ಕಳಕಳಿಯನ್ನು ಬಿಂಬಿಸುವ ಚಿತ್ರಕಲೆಗಳನ್ನು ಬಿಡಿಸಿ ಗೋಡೆಗಳ ಅಂದವನ್ನು ದ್ವಿಗುಣಗೊಳಿಸಿದರು. ಶಾಲೆಯ ವಿದ್ಯಾರ್ಥಿಗಳೊಂದಿಗೆ ಬೆರೆತು ಸಂವಾದ ಮತ್ತು ಸ್ಥಳದಲ್ಲೇ ಶೈಕ್ಷಣಿಕ ಪ್ರಗತಿಗಾಗಿ ಚಾರ್ಟ್ ತಯಾರಿಸುವ ವಿಧಾನಗಳನ್ನು ಹೇಳಿಕೊಡಲಾಯಿತು.

ಈ ಸಂದರ್ಭ ಸಿಸ್ಕೋ ಸಂಸ್ಥೆಯ ಮಚ್ಚಾರಂಡ ಅಯ್ಯಪ್ಪ, ಸಂಪತ್ ಬಾನಂಡ, ಪವನ್ ಪ್ರಶಾಂತ್, ಜಾಗೃತಿ ಟ್ರಸ್ಟ್ ನ ಕೋಶಾಧಿಕಾರಿಗಳಾದ ಕೊಂಡಿಂಜಮ್ಮಂಡ ಶರಣು, ನೋಯಲ್, ಜಾಗೃತಿ ಟ್ರಸ್ಟ್ ನ ಸಂಸ್ಥಾಪಕರಾದ ರೇಣು ಅಪ್ಪಚ್ಚು, ಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಸ್. ಸೋಮಕ್ಕ, ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.

Share this article