ಕನ್ನಡಪ್ರಭ ವಾರ್ತೆ ಮಂಡ್ಯಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶ್ರೀರಾಮನ ಆರಾಧನೆ ಮೇಳೈಸಿತ್ತು. ಎಲ್ಲೆಡೆಯಿಂದ ಶ್ರೀರಾಮನ ಭಜನೆ, ನಾಮಸ್ಮರಣೆ, ಶ್ರೀ ಆಂಜನೇಯನ ಸ್ತುತಿಗಳು ಕೇಳಿಬರುತ್ತಿದ್ದವು. ಶ್ರೀರಾಮ, ಶ್ರೀ ಆಂಜನೇಯನ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರಗಳನ್ನು ಮಾಡಲಾಗಿತ್ತು. ದೇಗುಲಕ್ಕೆ ಬಂದ ಭಕ್ತರೆಲ್ಲರಿಗೂ ಅನ್ನಸಂತರ್ಪಣೆ ನೆರವೇರಿಸಲಾಯಿತು. ರಸ್ತೆ ಬದಿಗಳಲ್ಲಿ ರಾಮಭಕ್ತರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಸಾದ ವಿತರಣೆ ಮಾಡಿದರು.
ಅಯೋಧ್ಯೆಯ ಶ್ರೀಬಾಲರಾಮನ ವಿಗ್ರಹವನ್ನು ಕೆತ್ತನೆ ಮಾಡಿದ ಅರುಣ್ ಯೋಗಿರಾಜ್ ಕುಸುರಿಯಲ್ಲಿ ಅರಳಿದ ಶ್ರೀರಾಮ, ಸೀತೆ, ಲಕ್ಷ್ಮಣ, ಆಂಜನೇಯನ ವಿಗ್ರಹಗಳನ್ನು ಮಂಡ್ಯದ ಲೇಬರ್ ಕಾಲೋನಿಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ೧೪ ವರ್ಷಗಳ ಪರಿಶ್ರಮದಿಂದ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರವನ್ನು ಭಕ್ತರ ದರ್ಶನಕ್ಕೆ ಮುಕ್ತಗೊಳಿಸಲಾಯಿತು.ದೇಗುಲ ಉದ್ಘಾಟನೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಶ್ರೀರಾಮ ಮಂದಿರದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಂಡವು. ಬೆಳಗ್ಗೆ ೫ ಗಂಟೆಯಿಂದ ಹೋಮ-ಹವನ, ಗಣಪತಿ ಹೋಮ, ಅಧಿವಾಸ, ಪ್ರತಿಷ್ಠಾಪನಾ ಹೋಮವನ್ನು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಶಿಷ್ಯ ವೃಂದ ಪೂಜೆ, ವಿಧಿ-ವಿಧಾನಗಳನ್ನು ನೆರವೇರಿಸಿದರು. ಬೆಳಗ್ಗೆ ೧೦.೩೦ಕ್ಕೆ ಮೀನ ಲಗ್ನದಲ್ಲಿ ಶ್ರೀರಾಮದೇವರ ಪ್ರತಿಷ್ಠಾಪನೆ ಮಾಡಲಾಯಿತು.
ಶ್ರೀರಾಮ ಮಂದಿರ ಆವರಣದ ಮೇಲ್ಭಾಗದಲ್ಲಿ ದ್ರಾಕ್ಷಿ, ಸೇಬು, ಕಿತ್ತಳೆ ಸೇರಿದಂತೆ ವಿವಿಧ ಹಣ್ಣುಗಳಿಂದ ಅಲಂಕರಿಸಲಾಗಿತ್ತು. ಸ್ಥಳೀಯ ನಿವಾಸಿಗಳು ಮಾತ್ರವಲ್ಲದೇ, ನಗರದ ವಿವಿಧೆಡೆಯಿಂದ ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ ಶ್ರೀರಾಮನನ್ನು ಕಣ್ತುಂಬಿಕೊಂಡರು. ಭಕ್ತರೆಲ್ಲರಿಗೂ ಅನ್ನಸಂತರ್ಪಣೆ ನೆರವೇರಿಸಲಾಯಿತು. ಪ್ರಸಾದ ರೂಪದಲ್ಲಿ ಸಜ್ಜಿಗೆ, ಬೂಂದಿಯನ್ನು ನೀಡಲಾಯಿತು.೧೮ ಅಡಿ ಶ್ರೀಆಂಜನೇಯ ವಿಗ್ರಹ ಉದ್ಘಾಟನೆ:
ಇಲ್ಲಿನ ನೆಹರು ನಗರದ ಶ್ರೀರಾಮ ಸಭಾದಿಂದ ಶ್ರೀರಾಮ ಮಂದಿರದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ೧೮ ಅಡಿ ಎತ್ತರದ ಶ್ರೀಅಭಯ ಆಂಜನೇಯಸ್ವಾಮಿ ಪ್ರತಿಮೆ ಉದ್ಘಾಟಿಸಲಾಯಿತು. ಆದಿ ಚುಂಚನಗಿರಿ ಮಠದ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಚಿನ್ಮಯ ರಾಮಮಂದಿರದ ಆದಿತ್ಯಾನಂದಜೀ, ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಡಾ.ಪ್ರಭಾವತಿ, ಬಿ.ಟಿ.ಜಯರಾಂ, ವಿಶ್ವನಾಥ ಬಾಬು ಅವರು ಹಾಜರಿದ್ದರು. ದೇಗುಲಕ್ಕೆ ಬಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.ಕೆಇಬಿ ಕ್ವಾರ್ಟರ್ಸ್‌ನಲ್ಲಿ ಶ್ರೀರಾಮ ಸಮಿತಿಯವರ ಸಂಭ್ರಮ:
ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಬಳಿ ಇರುವ ಕೆಇಬಿ ಕ್ವಾರ್ಟರ್ಸ್‌ನಲ್ಲಿರುವ ಶ್ರೀರಾಮಮಂದಿರದಲ್ಲಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಲಯವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಮುಂಭಾಗದಲ್ಲಿ ಕೇಸರಿ ಬಂಟಿಂಗ್ಸ್‌ಗಳನ್ನು ಹಾಕಲಾಗಿತ್ತು. ಶ್ರೀರಾಮ ಸಮಿತಿ ಸದಸ್ಯರು ಹಾಗೂ ಮಹಿಳೆಯರು ಮಕ್ಕಳಿಗೆ ಶ್ರೀರಾಮ, ಸೀತೆ, ಲಕ್ಷ್ಮಣ , ಆಂಜನೇಯ, ಗಣೇಶ, ಈಶ್ವರ, ಸುಬ್ರಹ್ಮಣ್ಯ ದೇವರ ಉಡುಗೆಗಳನ್ನು ತೊಡಿಸಿ ಮೆರವಣಿಗೆ ನಡೆಸಿದರು. ಶ್ರೀರಾಮನ ಭಕ್ತಿಗೀತೆಗಳಿಗೆ ನರ್ತಿಸುತ್ತಾ ಸಂಭ್ರಮದಿಂದ ನಲಿದಾಡಿದರು.ರಸ್ತೆ ಬದಿಗಳಲ್ಲೂ ಶ್ರೀರಾಮ ಸ್ಮರಣೆ:
ನಗರದ ವಿವಿಧ ರಸ್ತೆಗಳಲ್ಲಿ ಶ್ರೀರಾಮ ಸ್ಮರಣೆ ನಡೆಯಿತು. ರಾಮಭಕ್ತರು ಸಂಘಟಿತರಾಗಿ ನಗರದ ಹೊಸಹಳ್ಳಿ-ರಾಮನಹಳ್ಳಿ ವೃತ್ತ, ನೂರಡಿ ರಸ್ತೆ, ಬನ್ನೂರು ರಸ್ತೆ, ವಿವೇಕಾನಂದ ರಸ್ತೆ, ಪೇಟೆಬೀದಿ, ಅನ್ನಪೂರ್ಣೇಶ್ವರಿ ಬಡಾವಣೆ, ದ್ವಾರಕನಗರ ಸೇರಿದಂತೆ ವಿವಿಧೆಡೆ ರಸ್ತೆಬದಿಯಲ್ಲೇ ಶ್ರೀರಾಮದೇವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿದರು.ನಗರದ ಕಲ್ಲಹಳ್ಳಿಯ ವಿವಿನಗರ ಬಡಾವಣೆಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಶ್ರೀ ವರಸಿದ್ಧಿ ವಿನಾಯಕ ಶ್ರೀಕಂಠೇಶ್ವರ ಹಿತೈಷಿ ಮಹಿಳಾ ಟ್ರಸ್ಟ್ ವತಿಯಿಂದ ಶ್ರೀರಾಮ ಸ್ಮರಣೆ, ಭಜನೆ, ಕೀರ್ತನೆ, ವಿಶೇಷ ಪೂಜೆ, ಪ್ರಸಾದ ವಿನಿಯೋಗ ಕಾರ್ಯಕ್ರಮ ಏರ್ಪಡಿಸಿದ್ದರು. ಶ್ರೀರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಎಲ್ಲೆಡೆ ಪ್ರಸಾದ ರೂಪದಲ್ಲಿ ಬೆಲ್ಲದ ಪಾನಕ, ಕೋಸಂಬರಿ, ಕಡಲೆಕಾಳು ಗುಗ್ಗರಿ, ಬಾತು, ಕೇಸರಿಬಾತ್, ಪೊಂಗಲ್, ಹುಳಿಯನ್ನ, ಚಿತ್ರಾನ್ನವನ್ನು ಪ್ರಸಾದ ರೂಪದಲ್ಲಿ ವಿತರಿಸಿದರು.
ವಿವಿಧೆಡೆ ಆಚರಣೆ:ಶ್ರೀರಾಮ ಹಾಗೂ ವಿಷ್ಣು ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಕೋಸಂಬರಿ, ಬೆಲ್ಲದ ಪಾನಕ, ಮಜ್ಜಿಗೆಯನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು.
ನಗರದ ಪೇಟೆ ಬೀದಿಯಲ್ಲಿರುವ ಶ್ರೀರಾಮ ಸಭಾ ವತಿಯಿಂದ ಶ್ರೀರಾಮ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಶ್ರೀ ಕೋದಂಡರಾಮನಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆಗಳು ನಡೆದವು. ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ನಡೆಯಿತು. ಬಳಿಕ ಭಕ್ತರಿಗೆ ವಿಶೇಷ ಪ್ರಸಾದ ವಿತರಿಸಲಾಯಿತು.ಗಾಂಧಿ ನಗರದಲ್ಲಿರುವ ಶ್ರೀರಾಮ ದೇವಸ್ಥಾನ ಮಂಡಳಿ ವತಿಯಿಂದ ರಾಮೋತ್ಸವವನ್ನು ಅದ್ದೂರಿಯಾಗಿ ನಡೆಸಲಾಯಿತು. ದೇವರಿಗೆ ವಿಶೇಷ ಪೂಜೆ, ಹೋಮ ಹವನಗಳನ್ನು ನಡೆಸಿ ಸಾರ್ವಜನಿಕರಿಗೆ ಪಾನಕ ಮಜ್ಜಿಗೆ ವಿತರಿಸಲಾಯಿತು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ವಸತಿಗೃಹದ ಆವರಣದಲ್ಲಿರುವ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಸಮಿತಿಯ ಎಂ.ಬಿ. ರಮೇಶ್ ನೇತೃತ್ವದಲ್ಲಿ ಭಕ್ತರು ಬೈಕ್ ಜಾಥಾ ನಡೆಸಿದರು. ಬಳಿಕ ಅನ್ನಸಂತರ್ಪಣೆ, ಲಾಡು, ಮಜ್ಜಿಗೆ, ಪಾನಕ ವಿತರಿಸಿದರು.ನಗರದ ಬನ್ನೂರು ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ನಿನ್ನೆಯಿಂದಲೇ ಹೋಮ, ಹವನಗಳನ್ನು ನಡೆಸಲಾಯಿತು. ಬಳಿಕ ವಿವಿ ಜಾನಪದ ಕಲಾತಂಡಗಳೊಂದಿಗೆ ದೇವರ ಮೆರವಣಿಗೆ ಮಾಡಲಾಯಿತು.