ಕನ್ನಡಪ್ರಭ ವಾರ್ತೆ ಅರಸೀಕೆರೆ
ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿರುವ ಶಿವಲಿಂಗೇಗೌಡರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ದೊರೆಯಬೇಕು ಎಂದು ಪ್ರಾರ್ಥಿಸಿ, ಮಾಲೆಕಲ್ಲು ಅಮರಗಿರಿ ತಿರುಪತಿಯ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಕೋರಿದರು. ಕಾಡುಗೊಲ್ಲ ಯಾದವ ಸಮಾಜದ ಅಧ್ಯಕ್ಷ ಬೆಂಡೆಕೆರೆ ಅಜ್ಜಪ್ಪ ಹಾಗೂ ರಾಜ್ಯ ಯುವ ಘಟಕದ ಅಧ್ಯಕ್ಷ ಪ್ರಭು ಅವರ ನೇತೃತ್ವದಲ್ಲಿ ನೂರಾರು ಸಮಾಜಬಾಂಧವರು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಭಾಗವಹಿಸಿದರು. ಬಳಿಕ ದೇವಾಲಯದ ಮುಖ್ಯ ದ್ವಾರದ ಮುಂಭಾಗದಲ್ಲಿ ಈಡುಗಾಯಿ ಸಮರ್ಪಿಸುವ ಮೂಲಕ ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ದೊರೆಯಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಜ್ಜಪ್ಪ, ಶಿವಲಿಂಗೇಗೌಡರು ಜಲಸಂಪನ್ಮೂಲ, ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ನಾಯಕರು. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಕ್ಷೇತ್ರದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದ್ದು, ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಅವರ ಅನುಭವ ಮತ್ತು ಜನಪರ ಆಡಳಿತದ ದೃಷ್ಟಿಕೋನ ರಾಜ್ಯದ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಆದ್ದರಿಂದ ಅವರಿಗೆ ಸಚಿವ ಸ್ಥಾನ ದೊರೆಯುವುದು ಕ್ಷೇತ್ರದ ಜನರ ಬಹುದಿನಗಳ ಆಸೆಯಾಗಿದೆ ಎಂದು ಹೇಳಿದರು.ರಾಜ್ಯ ಯುವ ಘಟಕದ ಅಧ್ಯಕ್ಷ ಪ್ರಭು ಮಾತನಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೇ ಶಿವಲಿಂಗೇಗೌಡರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಬೇಕು ಎಂಬುದು ಕ್ಷೇತ್ರದ ಜನರ ನಿರೀಕ್ಷೆಯಾಗಿತ್ತು. ಜನರ ನಡುವೆ ಅಪಾರ ಜನಪ್ರಿಯತೆ ಗಳಿಸಿರುವ ಅವರು ಪಕ್ಷ ಸಂಘಟನೆ ಮತ್ತು ಕ್ಷೇತ್ರಾಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಹಿರಿಯ ನಾಯಕರು ನೀಡಿದ್ದ ಭರವಸೆಯನ್ನು ಈಡೇರಿಸಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕ್ಷೇತ್ರದ ಜನರ ಭಾವನೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಕಾಡುಗೊಲ್ಲ ಯಾದವ ಸಮಾಜದ ಕಾರ್ಯದರ್ಶಿ ಮಲ್ಲಪ್ಪ, ಮುಖಂಡರಾದ ರಂಗಪ್ಪ, ತಿಮ್ಮಪ್ಪ, ವಸಂತ, ಪರಮೇಶಪ್ಪ, ಕಾಂತರಾಜು, ನಾರಾಯಣಗಟ್ಟಿಹಳ್ಳಿ ವಿಜಯಕುಮಾರ್, ಮಾಡಾಳು ಪಾಪಣ್ಣ ಸೇರಿದಂತೆ ಸಮಾಜದ ಅನೇಕ ಮುಖಂಡರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.