ಕನ್ನಡಪ್ರಭ ವಾರ್ತೆ ತುರುವೇಕೆರೆ
ಇಂದಿನ ವಿಷಮ ಪರಿಸ್ಥಿತಿಯಲ್ಲಿ ಪ್ರಕೃತಿಯನ್ನು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಪ್ರಕೃತಿಯನ್ನು ದೇವರೆಂದು ಪೂಜಿಸಿ ಸಂರಕ್ಷಿಸಿದರೆ ಎಲ್ಲರಿಗೂ ಸುಖ ಜೀವನ ಲಭ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಡಿ.ಪವಿತ್ರ ಹೇಳಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಅರಣ್ಯ ಇಲಾಖೆ, ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಆಧುನೀಕರಣ ಮತ್ತು ನಗರೀಕರಣದ ಭರಾಟೆಯಲ್ಲಿ ಪ್ರಕೃತಿ ಬಗೆಗಿನ ಕಾಳಜಿಯನ್ನು ಮನುಷ್ಯ ನಿರ್ಲಕ್ಷ್ಯ ಮಾಡಬಾರದು. ಪ್ರಕೃತಿಯನ್ನು ದೇವರಂತೆ ಪೂಜಿಸಿ, ರಕ್ಷಿಸಬೇಕು ಎಂದರು.ಮನುಷ್ಯ ಸುಶಿಕ್ಷಿತನಾದ ಮೇಲೆ ಮರ, ಗಿಡ, ಭೂಮಿ, ನೀರು, ಪ್ರಕೃತಿ ಪರಿಸರವನ್ನು ತನ್ನ ಬದುಕಿನ ಒಂದು ಭಾಗ ಎಂದು ಭಾವಿಸಬೇಕು. ಇಂದು ಪ್ರಕೃತಿಯಲ್ಲಿ ಹಲವು ವೈಪರಿತ್ಯಗಳನ್ನು ಘಟಿಸುತ್ತಿವೆ. ಇದು ನೇರವಾಗಿ ಮನುಷ್ಯ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇಂತಹ ವಿಚಾರವನ್ನು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಹೇಳಿದರು.
ತಾಲೂಕು ವಲಯ ಅರಣ್ಯಧಿಕಾರಿ ಎನ್.ಎಸ್.ಲಿಂಗರಾಜು ಮಾತನಾಡಿ, ಮುಂದಿನ ಪೀಳಿಗೆಗೆ ಸುಂದರವಾದ ಪ್ರಕೃತಿಯನ್ನು ನಾವೆಲ್ಲ ಬಳುವಳಿಯಾಗಿ ನೀಡದೇ ಹೋದರೆ ಭೀಕರ ಸನ್ನಿವೇಶ ಎದುರಿಸಬೇಕಾಗುತ್ತದೆ. ಯುವ ಸಮೂಹ ಈ ಸಮಕಾಲೀನ ಸಮಾಜವನ್ನು ದೂಷಿಸದಂತೆ ನಾವೆಲ್ಲೆ ಮನೆಗೊಂದು ಗಿಡ, ಊರಿಗೊಂದು ವನ ನಿರ್ಮಾಣ ಮಾಡಬೇಕು ಎಂದರು. ಮರ ಕಡಿದರೆ ಮಳೆ ಹೋಗಿ ಭೀಕರ ಬರಗಾಲ ಕಾಡಲಿದೆ. ಮುಂದಿನ ದಿನಗಳಲ್ಲಿ ಅನ್ನ, ನೀರು ಇಲ್ಲದೆ ಮನುಷ್ಯ ನರಳಬೇಕಾದ ಕಾಲ ದೂರವೇನಿಲ್ಲ. ಹಾಗಾಗಿ ನಾವೆಲ್ಲ ಅರಿತು ಬಾಳಬೇಕು. ಮನುಷ್ಯ ಜನ್ಮ ಅಪರೂಪ ಅದನ್ನು ಸಾರ್ಥಕಗೊಳಿಸಬೇಕಾದರೆ ಪ್ರಕೃತಿಯನ್ನು ಪ್ರೀತಿಸಿ, ಬೆಳೆಸಬೇಕು ಎಂದು ಕಿವಿಮಾತು ಹೇಳಿದರು. ಸಿವಿಲ್ ನ್ಯಾಯಾಧೀಶ ಟಿ.ಪಿ.ಪುರುಷೋತ್ತಮ, ವಕೀಲರ ಸಂಘದ ತಾಲೂಕು ಅಧ್ಯಕ್ಷ ನಟರಾಜು, ಉಪಾಧ್ಯಕ್ಷ ಎಚ್.ಕೆ.ನಂಜೇಗೌಡ, ಕಾರ್ಯದರ್ಶಿ ಎಂ.ಸಿ. ಕುಮಾರ್, ಸಹ ಕಾರ್ಯದರ್ಶಿ ಈಶ್ವರ್, ಖಜಾಂಚಿ ರಾಘವೇಂದ್ರ, ಸರ್ಕಾರಿ ಅಭಿಯೋಜಕಿ ಕವಿತ ಹಿರೇಮಠ್, ಉಪವಲಯ ಅರಣ್ಯಾಧಿಕಾರಿ ತಿಪ್ಪೇಶ್, ಸಿಬ್ಬಂದಿ ಗಂಗಾಧರ್ ಇದ್ದರು.