11ನೇ ವರ್ಷದ ಆರಾಧನೆ । ಧಾರ್ಮಿಕ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಹಾಸನ
ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದಲ್ಲಿ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ೧೧ ವರ್ಷದ ಪುಣ್ಯಾರಾಧನಾ ಕಾರ್ಯಕ್ರಮದ ಅಂಗವಾಗಿ ಶನಿವಾರ ಶ್ರೀ ಶಂಭುನಾಥ ಸ್ವಾಮೀಜಿ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮವು ಜರುಗಿದವು. ಇದೇ ವೇಳೆ ವಿವಿಧ ಮಠದ ಸ್ವಾಮೀಜಿಗಳು ಹಾಗೂ ರಾಜಕಾರಣಿಗಳು ಬಾಗಿಯಾಗಿದ್ದರು.ಶನಿವಾರ ಬೆಳಗಿನಿಂದಲೇ ಪೂಜಾ ಕೈಂಕರ್ಯವು ವಿವಿಧ ಮಠದ ಸ್ವಾಮೀಜಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆದು, ಬೆಳಿಗ್ಗೆ ೬ ಗಂಟೆಗೆ ಮಠದ ಆವರಣದಲ್ಲಿರುವ ಶ್ರೀ ಮಹಾ ಗಣಪತಿಗೆ ಅಭಿಷೇಕ ಮತ್ತು ರಜತ ಕವಚಾಲಂಕಾರ ಹಾಗೂ ಮಹಾ ಮಂಗಳಾರತಿ ಮೂಲಕ ಶ್ರೀ ಪಾದುಕೆಗಳಿಗೆ ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ದೀಪಾರಾಧನೆ ಮಾಡಲಾಯಿತು. ೯ ರಿಂದ ೯.೩೦ ರ ವರೆಗೆ ಶ್ರೀ ಲಲಿತಾ ಸಹಸ್ರನಾಮ ಭಗನಿಯವರಿಂದ ನಡೆಯಿತು. ೯.೩೦ ರಿಂದ ೧.೩೦ ರ ವರೆಗೆ ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿ, ಒಕ್ಕಲಿಗರ ಮಹಿಳಾ ಸಂಘ ಹಾಗೂ ಶ್ರೀ ಶಾರದಾ ಕಲಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ೧೦.೩೦ ರಿಂದ ೧೧ ಗಂಟೆವರೆಗೆ ರೋಹನ್ ಅಯ್ಯರ್ ಮತ್ತು ಶ್ರೀ ಆದಿಚುಂಚನಗಿರಿ ಒಕ್ಕಲಿಗರ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಿಂದ ಭಕ್ತಿಭಾವ ಸಂಗಮ ಜರುಗಿತು.
೧೧ ರಿಂದ ೧೨ ಗಂಟೆವರೆಗೆ ಶ್ರೀ ಶಂಕರಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು. ಮಧ್ಯಾಹ್ನ ೧೨ ಗಂಟೆ ನಂತರ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ನೂರಾರು ಮಂದಿ ಮಠದ ಭಕ್ತರು ಹಾಗೂ ಸ್ವಾಮೀಜಿ ಅವರ ಅನುಯಾಯಿಗಳು ಆಗಮಿಸಿದ್ದರು.ಶ್ರೀ ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ, ಶಿವಲಿಂಗಾನಂದ ಮಹಾಸ್ವಾಮೀಜಿ, ಶ್ರೀ ಮಂಗಳನಾಥ ಸ್ವಾಮೀಜಿ, ಜಯದೇವ ಸ್ವಾಮೀಜಿ, ಬಸವರಾಜೇಂದ್ರ ಸ್ವಾಮೀಜಿ, ಗುರುಮೂರ್ತಿ ಸಾಯಿಚರಣ ಸ್ವಾಮೀಜಿ, ಸದಾಶಿವ ಮಹಾಸ್ವಾಮೀಜಿ, ಚಂದ್ರಶೇಖರನಾಥ ಸ್ವಾಮೀಜಿ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ಮಠದ ಹುಣ್ಣಿಮೆ ಕಾರ್ಯಕ್ರಮದ ಸಂಚಾಲಕ ಎಚ್.ಬಿ ಮದನಗೌಡ, ಪ್ರೊ.ಕೃಷ್ಣೇಗೌಡರು, ಬಿಜಿಎಸ್ ಚಂದ್ರಶೇಖರ್, ಗೋಪಾಲಗೌಡ, ಕೃಷ್ಣೇಗೌಡ ಉಪಸ್ಥಿತರಿದ್ದರು. ಗಾಯಕ ರೋಹನ್ ಅಯ್ಯರ್ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು. ಉಪನ್ಯಾಸಕ ಲಕ್ಷ್ಮೀ ನಾರಾಯಣ್ ನಿರೂಪಣೆ ಮಾಡಿದರು.