ಕನ್ನಡಪ್ರಭ ವಾರ್ತೆ ಹಾವೇರಿ
ದೀಪಾವಳಿ ಹಬ್ಬದ ಎರಡನೇ ದಿನವಾದ ಸೋಮವಾರ ಜಿಲ್ಲಾದ್ಯಂತ ಲಕ್ಷ್ಮಿ ಪೂಜೆಯನ್ನು ಸಂಭ್ರಮ, ಸಡಗರದೊಂದಿಗೆ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಜನರು ವಾಹನಗಳನ್ನು ಹೂ ಮಾಲೆಗಳಿಂದ ಅಲಂಕರಿಸಿ ಪೂಜೆ ಮಾಡಿದರು.ನಗರದಲ್ಲಿ ಕೆಲವರು ಮನೆಗಳಿಗೆ, ಅಂಗಡಿ-ಮುಗ್ಗಟ್ಟುಗಳಿಗೆ ತಳಿರು ತೋರಣಕಟ್ಟಿ, ರಂಗೋಲಿ ಹಾಕಿ, ದೀಪಾಲಕಾರದ ಮೂಲಕ ಹಣ್ಣು, ಹೂವು ಹಾಗೂ ಸಿಹಿ ಆಹಾರ ಪಾದಾರ್ಥ ತಯಾರಿಸಿ ನೈವೇದ್ಯ ಮಾಡಿ, ಲಕ್ಷ್ಮಿ ಪೂಜೆ ಸಲ್ಲಿಸಿದರು.
ಅಮವಾಸ್ಯೆ ತಿಥಿ ಎರಡು ದಿನ ಬಂದ ಹಿನ್ನೆಲೆ ಕೆಲವರು ಭಾನುವಾರ ಸಂಜೆ ಶ್ರೀ ಲಕ್ಷ್ಮಿ ಪೂಜೆ ನೆರವೇರಿಸಿದರೆ, ಇನ್ನು ಕೆಲವರು ಸೋಮವಾರ ಬೆಳಗ್ಗೆ ಪೂಜೆ ಸಲ್ಲಿಸಿದರು. ಬೆಳಗ್ಗೆಯಿಂದ ಸಂಜೆವರೆಗೂ ಮಾರುಕಟ್ಟೆಯಲ್ಲಿ ಅಲಂಕಾರಿಕ ಸಾಮಗ್ರಿಗಳು, ಆಕಾಶಬುಟ್ಟಿ, ಹಣ್ಣು-ಹಂಪಲು, ಹೂವು, ಕಬ್ಬು, ಮಾವು, ಬಾಳೆ ವ್ಯಾಪಾರ ಜೋರಾಗಿಯೇ ನಡೆಯಿತು. ಕೆಲವರು ತಮ್ಮ ಅಂಗಡಿ, ವ್ಯಾಪಾರ ವಹಿವಾಟನ್ನು ಬೆಳಗ್ಗೆಯಿಂದಲೇ ಬಂದ್ ಮಾಡಿ ಶ್ರೀಲಕ್ಷ್ಮೀಯನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ ಪೂಜಿಸಿದರು. ಅನೇಕರು ಸಂಜೆ ಹೊತ್ತಿಗೆ ತಮ್ಮ ಅಂಗಡಿಗಳನ್ನು ಬಣ್ಣ ಬಣ್ಣದ ದೀಪಗಳಿಂದ ಸಿಂಗರಿಸಿ, ರಂಗುರಂಗಿನ ರಂಗೋಲಿಯ ಚಿತ್ತಾರ ಬಿಡಿಸಿ, ಹಣತೆ, ಮೊಂಬತ್ತಿಗಳನ್ನು ಸಾಲು ಸಾಲಾಗಿ ಹಚ್ಚಿ, ಪಟಾಕಿ ಸಿಡಿಸಿ ದೀಪಾವಳಿ ಲಕ್ಷ್ಮೀ ಪೂಜೆ ಸಲ್ಲಿಸಿದರು.ಸಂಜೆಯಾಗುತ್ತಿದ್ದಂತೆ ನಗರದ ಅಂಗಡಿಗಳೆಲ್ಲ ಝಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಎಲ್ಲರನ್ನು ಆಕರ್ಷಿಸುತ್ತಿದ್ದವು. ಬಹುತೇಕ ಎಲ್ಲ ಅಂಗಡಿಗಳಲ್ಲಿಯೂ ವಿದ್ಯುತ್ ಅಲಂಕಾರ ಮಾಡಿದ್ದರಿಂದ ಇಡೀ ನಗರವೇ ಬೆಳಕಿನಲ್ಲಿ ಮಿಂಚುವಂತಿತ್ತು. ಸಂಜೆ ಹೊತ್ತು ಮಾರುಕಟ್ಟೆ ಪ್ರದೇಶದೆಲ್ಲೆಡೆ ಪೂಜೆಯ ಜಾಗಟೆ, ಗಂಟೆಯ ನಾದ, ಸಿಡಿ ಮದ್ದಿನ ಶಬ್ದ, ಚಿಣ್ಣರ ಕೈಯಲ್ಲಿದ್ದ ಮಿಂಚಿ ಕಿಡಿ ಸೂಸುವ ಸುರುಸುರಬತ್ತಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿತು.
ಅಲ್ಲದೇ ವಾಹನಗಳನ್ನು ದೀಪ, ವಿವಿಧ ಹೂ, ಬಾಳೆ, ಬಣ್ಣದ ಹಾಳೆ, ರಿಬ್ಬನ್‌ಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಾಹನಗಳನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಿಂಗರಿಸಿದ್ದು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ವಾಹನ ಪೂಜೆ, ಅಂಗಡಿಗಳಲ್ಲಿ ಶ್ರೀಲಕ್ಷ್ಮೀ ಪೂಜೆಯನ್ನು ಇನ್ನು ಕೆಲವರು ಪಾಡ್ಯದ ದಿನವಾದ ಮಂಗಳವಾರ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಒಟ್ಟಾರೆ ದೀಪಾವಳಿ ಹಬ್ಬದ ಸಂಭ್ರಮ, ಸಡಗರ ಎಲ್ಲೆಡೆ ಕಂಡು ಬರುತ್ತಿದೆ.