ಗದಗ: ನವರಾತ್ರಿಯ ಸಂದರ್ಭದಲ್ಲಿ ಶ್ರೀದೇವಿಯ ಆರಾಧನೆಯಿಂದ ಮನುಷ್ಯ ಜನ್ಮದಲ್ಲಿ ನೆಮ್ಮದಿ ಹಾಗೂ ಸಂತೃಪ್ತ ಜೀವನ ಹೊಂದಲು ಸಾಧ್ಯ ಎಂದು ಗದಗ ರೇಣುಕಾಚಾರ್ಯ ಮಂದಿರದ ಚಂದ್ರಶೇಖರ ದೇವರು ಹೇಳಿದರು.
ನಗರದ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ ದಸರಾ ಮಹೋತ್ಸವ, ಕುಮಾರಿ ಪೂಜೆ ಹಾಗೂ ಶ್ರೀದೇವಿ ಪುರಾಣ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನಮ್ಮ ನಿತ್ಯ ಕಾಯಕದೊಂದಿಗೆ ದೇವರ ಆರಾಧನೆಯೊಂದೇ ನಾವು ಜೀವನದಲ್ಲಿ ಯಶಸ್ಸು, ಕೀರ್ತಿ ಗಳಿಸಲು ಸಾಧ್ಯವಾಗಲಿದೆ. ಅಡವೀಂದ್ರಸ್ವಾಮಿ ಮಠದಲ್ಲಿ ಸುಮಾರು 45 ವರ್ಷಗಳಿಂದಲೂ ಶ್ರೀ ಅನ್ನಪೂರ್ಣೇಶ್ವರಿ ಹಾಗೂ ಶ್ರೀ ದೇವಿಯ ಆರಾಧನೆ ನಡೆದುಕೊಂಡು ಬಂದಿರುವುದು ಇತಿಹಾಸ. ಅಷ್ಟೂ ವರ್ಷಗಳಿಂದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿರುವ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.ಸಮ್ಮುಖ ವಹಿಸಿದ್ದ ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ವೇಳೆ ಚನ್ನಯ್ಯ ಹಿರೇಮಠ, ಶೈಲಾ ಕೊಡೇಕಲ್, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ಅನುಷಾ ಯಳವತ್ತಿ ಅವರು ಶ್ರೀಗಳಿಂದ ಗುರುರಕ್ಷೆ ಪಡೆದರು.ಎಸ್.ಪಿ. ಸಂಶಿಮಠ, ಸದಾಶಿವಯ್ಯ ಮದರಿಮಠ, ಶರಣಬಸಪ್ಪ ಗುಡಿಮನಿ, ಸುವರ್ಣಾ ಮದರಿಮಠ, ಶರಣಯ್ಯಸ್ವಾಮಿ ಶಿವಪ್ಪಯ್ಯನಮಠ, ವೀರೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಗೀತಾ ಎಂ. ಹೂಗಾರ, ಸುಷ್ಮಾ ಖಂಡಪ್ಪಗೌಡ್ರ, ಅಶ್ವಿನಿ ನೀಲಗುಂದ, ವಿ.ಎಚ್. ದೇಸಾಯಿಗೌಡ್ರ ಇತರರು ಇದ್ದರು. ಜ್ಯೋತಿ ರಾಜೇಂದ್ರ ಗಡಾದ ಸ್ವಾಗತಿಸಿದರು. ಪ್ರಭುಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಬಂಡಿ ವಂದಿಸಿದರು.
ಮಹಿಳೆಯರಿಂದ ಶ್ರೀ ಅನ್ನಪೂರ್ಣೇಶ್ವರಿ ರಥೋತ್ಸವ: ಗದಗ ನಗರದ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಜರುಗಿದ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ರಥವನ್ನು ಮುತ್ತೈದೆಯರು ಸಡಗರ, ಸಂಭ್ರಮದಿಂದ ಎಳೆಯುವ ಮೂಲಕ 11ನೇ ವರ್ಷದ ಜಾತ್ರೆಗೆ ಚಾಲನೆ ನೀಡಿದರು. ಶ್ರೀಮಠದ ಲಿಂ. ಶರಣಯ್ಯ ಸ್ವಾಮಿಗಳವರು ಮಹಿಳೆಯರಿಂದಲೇ ಅನ್ನಪೂರ್ಣೇಶ್ವರಿ ರಥ ಎಳೆಸಬೇಕು ಎಂಬ ಸಂಕಲ್ಪ ಮಾಡಿದ್ದರು. ಅವರ ಸಂಕಲ್ಪವನ್ನು ಸದ್ಯ ಶ್ರೀಮಠದ ಧರ್ಮಾಧಿಕಾರಿ ಮಹೇಶ್ವರ ಸ್ವಾಮಿಗಳು ಸಾಕಾರಗೊಳಿಸಿದ್ದಾರೆ.ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಇದ್ದರು.ಪಾಲಕರು ಮಕ್ಕಳಲ್ಲಿ ಶ್ರಮ ಸಂಸ್ಕೃತಿ ರೂಢಿಸಲಿ:ಬಸವಣ್ಣನವರ ಕಾಯಕವೇ ಕೈಲಾಸ ಎಂಬ ನಾಣ್ನುಡಿಯಂತೆ ತಮ್ಮ ಮಕ್ಕಳಿಗೆ ಶ್ರಮ ಸಂಸ್ಕೃತಿಯನ್ನು ರೂಢಿಸಬೇಕು ಎಂದು ಶ್ರೀ ಅನ್ನಪೂರ್ಣೇಶ್ವರಿ ದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸದಾಶಿವಯ್ಯ ಎಸ್. ಮದರಿಮಠ ಹೇಳಿದರು.
ಗದಗ ನಗರದ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ ನಡೆದ ದಸರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿದ ಬಳಿಕ ಅವರನ್ನು ಮನೆಯಲ್ಲಿ ಕೂರಿಸದೇ ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯಲು ಬಿಡಬೇಕು ಎಂದು ಹೇಳಿದರು.ಯುವ ಜನರು ವ್ಯಾಪಾರ, ಉದ್ಯೋಗ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಬೇಕು. ಜತೆಗೆ ತಮ್ಮ ಪಾಲಕರನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು. ಯುವ ಸಮುದಾಯ ಸಮಾಜದ ಮುಂಚೂಣಿಗೆ ಬಂದು ತಾವೂ ಉದ್ಯೋಗ ಮಾಡುವುದರೊಂದಿಗೆ ತಮ್ಮ ಜತೆ ಕೆಲವು ಜನರಿಗಾದರೂ ಉದ್ಯೋಗ ನೀಡುವ ಮೂಲಕ ತಾವೂ ಉದ್ಯೋಗದಾತರಾಗಿ ಸಮಾಜದಲ್ಲಿರುವ ನಿರುದ್ಯೋಗದ ಪೆಡಂಭೂತ ಹೊಡೆದೋಡಿಸಬೇಕು ಎಂದು ಹೇಳಿದರು.ಶ್ರೀ ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಎಸ್.ಪಿ. ಸಂಶಿಮಠ, ಸದಾಶಿವಯ್ಯ ಮದರಿಮಠ, ಶರಣಬಸಪ್ಪ ಗುಡಿಮನಿ, ಸುವರ್ಣಾ ಮದರಿಮಠ, ಡಾ. ರಾಜಗುರು ಗುರುಸ್ವಾಮಿ ಕಲಕೇರಿ, ಚನ್ನಬಸಯ್ಯ ಶಾಸ್ತ್ರಿ ಹೇಮಗಿರಿಮಠ, ಶರಣಯ್ಯಸ್ವಾಮಿ ಶಿವಪ್ಪಯ್ಯನಮಠ, ವೀರೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಗೀತಾ ಎಂ. ಹೂಗಾರ, ಸುಷ್ಮಾ ಖಂಡಪ್ಪಗೌಡ್ರ, ಅಶ್ವಿನಿ ನೀಲಗುಂದ, ವಿ.ಎಚ್. ದೇಸಾಯಿಗೌಡ್ರ ಇದ್ದರು. ಮಂಗಲಾ ಯಾನಮಶೆಟ್ಟಿ ಸ್ವಾಗತಿಸಿದರು. ವಿ.ಎಂ. ಕುಂದಾಳಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಯು.ಆರ್. ಭೂಸನೂರಮಠ ವಂದಿಸಿದರು.