ರೋಚಕ ಹಣಾಹಣಿಗೆ ಸಾಕ್ಷಿಯಾದ ಕುಸ್ತಿ ಪಂದ್ಯಾವಳಿ

KannadaprabhaNewsNetwork |  
Published : Feb 14, 2026, 02:30 AM IST
ಫೋಟೊ ಶೀರ್ಷಿಕೆ: 13ಹೆಚ್‌ವಿಆರ್-5ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿ ಶ್ರೀ ಹಕ್ಕಲು ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಕಡೆ ಕುಸ್ತಿ ಪಂದ್ಯಾವಳಿಯ ದೃಶ್ಯ. | Kannada Prabha

ಸಾರಾಂಶ

ಹಕ್ಕಲು ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ತಾಲೂಕಿನ ಅಗಡಿ ಗ್ರಾಮದಲ್ಲಿ ನಡೆದ ಬಯಲು ಜಂಗೀ ಕಡೆ ಕುಸ್ತಿ ಪಂದ್ಯಾಟದಲ್ಲಿ ದಾವಣಗೆರೆ ಹಾಗೂ ಮಹಾರಾಷ್ಟ್ರ ಮೂಲದ ಫೈಲ್ವಾನರ ಮಧ್ಯೆ ರಣರೋಚಕ ಹಣಾಹಣಿ ಸ್ಪರ್ಧೆ ನಡೆಯಿತು. ಮಹಾರಾಷ್ಟ್ರದ ಪೈಲ್ವಾನ್‌ರನ್ನು ಮಣಿಸುವ ಮೂಲಕ ಕೊನೆಗೂ ದಾವಣಗೆರೆಯ ಬಸವರಾಜ ವಿಜಯ ಪತಾಕೆ ಹಾರಿಸಿದರು.

ಹಾವೇರಿ: ಶ್ರೀ ಹಕ್ಕಲು ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ತಾಲೂಕಿನ ಅಗಡಿ ಗ್ರಾಮದಲ್ಲಿ ನಡೆದ ಬಯಲು ಜಂಗೀ ಕಡೆ ಕುಸ್ತಿ ಪಂದ್ಯಾಟದಲ್ಲಿ ದಾವಣಗೆರೆ ಹಾಗೂ ಮಹಾರಾಷ್ಟ್ರ ಮೂಲದ ಫೈಲ್ವಾನರ ಮಧ್ಯೆ ರಣರೋಚಕ ಹಣಾಹಣಿ ಸ್ಪರ್ಧೆ ನಡೆಯಿತು. ಮಹಾರಾಷ್ಟ್ರದ ಪೈಲ್ವಾನ್‌ರನ್ನು ಮಣಿಸುವ ಮೂಲಕ ಕೊನೆಗೂ ದಾವಣಗೆರೆಯ ಬಸವರಾಜ ವಿಜಯ ಪತಾಕೆ ಹಾರಿಸಿದರು.ಶ್ರೀ ಹಕ್ಕಲು ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಿತಿ ಹಾಗೂ ಅಗಡಿ ಗ್ರಾಮಸ್ಥರ ನೇತೃತ್ವದಲ್ಲಿ ಕಳೆದ 65 ವರ್ಷಗಳ ನಂತರ ತಾಲೂಕಿನ ಅಗಡಿ ಗ್ರಾಮದಲ್ಲಿ ಶ್ರೀ ಹಕ್ಕಲು ದುರ್ಗಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ಎರಡು ದಿನಗಳ ಕುಸ್ತಿ ಪಂದ್ಯಾವಳಿಗಳು ಜರುಗಿದವು. ಈ ಹಿಂದೆ ದೇಸಾಯಿ ಹಾಗೂ ನೇಕಾರರು ಇದ್ದಾಗಿನ ಸಮಯದಲ್ಲಿ ಜರುಗುತ್ತಿದ್ದ ಕುಸ್ತಿ ಪಂದ್ಯಾವಳಿಯ ಗತ ವೈಭವವನ್ನು ಪುನರ್ ಆರಂಭಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಬಹುತೇಕ ಯಶಸ್ಸು ಕಂಡಿತು. ಕುಸ್ತಿ ಪಂದ್ಯಾವಳಿಗೆ ದೆಹಲಿ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ, ಮಹಾರಾಷ್ಟ್ರ, ಕರ್ನಾಟಕ ರಾಜ್ಯದ ಗುಲಬರ್ಗಾ, ಬಿಜಾಪುರ, ಹುಬ್ಬಳ್ಳಿ-ಧಾರವಾಡ, ಗದಗ, ದಾವಣಗೆರೆ, ಕಡೂರು, ಬೀರೂರ, ಭದ್ರಾವತಿ, ಬಳ್ಳಾರಿ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ 120ಕ್ಕೂ ಹೆಚ್ಚು ಘಟಾನುಘಟಿ ಕುಸ್ತಿ ಪೈಲ್ವಾನರು ಆಗಮಿಸಿದ್ದರು.ಕುಸ್ತಿ ಪಂದ್ಯಾವಳಿ ಚಾಲನೆ ಕಾರ್ಯಕ್ರಮದಲ್ಲಿ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ, ಮೊಬೈಲ್ ಯುಗ ಬಂದಾಗಿನಿಂದ ಕುಸ್ತಿ, ಕಬಡ್ಡಿಯಂತಹ ದೇಶಿ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಅದರಲ್ಲೂ ಅಗಡಿ ಗ್ರಾಮಸ್ಥರು, ಬಹದ್ದೂರ ದೇಸಾಯಿ ಕುಟುಂಬಸ್ಥರು ಹಾಗೂ ಜಾತ್ರಾ ಮಹೋತ್ಸವ ಸೇವಾ ಸಮಿತಿಯವರು ಕಳೆದ 65 ವರ್ಷಗಳ ಹಿಂದೆ ನಡೆಯುತ್ತಿದ್ದ ಕುಸ್ತಿ ಪಂದ್ಯಾವಳಿಗಳನ್ನು ಮತ್ತೆ ಹಮ್ಮಿಕೊಳ್ಳುವ ಮೂಲಕ ಹಿಂದಿನ ಗತವೈಭವವನ್ನು ಇಂದಿನ ಮಕ್ಕಳಿಗೆ ಪ್ರೇರಣೆ ನೀಡಿ ತಮ್ಮ ಇಚ್ಛಾಶಕ್ತಿಯನ್ನು ತೋರಿಸಿ ಕೊಟ್ಟಿದ್ದಾರೆ. ಅದಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ. ಬರುವ ದಿನಗಳಲ್ಲಿಯೂ ಈ ರೀತಿಯ ಉತ್ಸಾಹ ಹೀಗೆ ಮುಂದುವರೆದು ಅಗಡಿ ಗ್ರಾಮದ ಕುಸ್ತಿ ಪಂದ್ಯಾವಳಿಯೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂತಾಗಲಿ ಎಂದು ತಿಳಿಸಿದರು. ರಣ ರೋಚಕ ಗೆಲುವು...ಕುಸ್ತಿ ಪಂದ್ಯಾವಳಿಯ ಎರಡನೇ ದಿನದ ಕಡೆ ಕುಸ್ತಿಯಲ್ಲಿ ಮಹಾರಾಷ್ಟ್ರದ ಫಂಡರಾಪುರ ಮೂಲದ ರೀತು ಹಾಗೂ ದಾವಣಗೆರೆ ಜಿಲ್ಲೆಯ ಬಸವರಾಜ ದಾವಣಗೆರೆ ನಡುವೆ ರಣರೋಚಕ ಸೆಣಸಾಟ ಏರ್ಪಟ್ಟಿತ್ತು. ಕುಸ್ತಿ ಅಖಾಡದಲ್ಲಿ ಪರಸ್ಪರ ಕೈ ಕುಲುಕಿ, ಸಡ್ಡು ಹೊಡೆಯುವ ಮೂಲಕ ಆಟದ ಮೆರುಗನ್ನು ಹೆಚ್ಚಿಸಿದರು. ಕದನ ಕುತೂಹಲ ನಡುವೆ ತೀವ್ರ ಜಿದ್ದಾಜಿದ್ದಿನ ಹಣಾಹಣಿ ಏರ್ಪಟ್ಟಿತ್ತು. ಅಖಾಡದ ತುಂಬೆಲ್ಲಾ ಸೇರಿದ್ದ ಸಾವಿರಾರು ಸಂಖ್ಯೆಯ ಕುಸ್ತಿ ಪ್ರೇಮಿಗಳು ಸಿಳ್ಳೆ ಕೇಕೆ ಹಾಕಿ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಕೊನೆಯ ಕ್ಷಣದವರೆಗೂ ಉತ್ಸಾಹದಲ್ಲಿದ್ದ ಕುಸ್ತಿ ಪ್ರೇಮಿಗಳಿಗೆ ದಾವಣಗೆರೆ ಮೂಲದ ಬಸವರಾಜ ಮಹಾರಾಷ್ಟ್ರದ ರೀತುವನ್ನು ಮಣಿಸುವ ಮೂಲಕ ಗೆಲುವಿನ ನಗೆ ಬೀರಿದರು. ಪ್ರಥಮ ಬಹುಮಾನವಾಗಿ ಬೈಕ್ ಹಾಗೂ ದ್ವಿತೀಯ ಬಹುಮಾನವನ್ನು ಬೆಳ್ಳಿ ಕಡೆ ನೀಡುವ ಮೂಲಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಎರಡು ದಿನಗಳ ಕಾರ್ಯಕ್ರಮದಲ್ಲಿ ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮೀಜಿ, ಕೆಸಿಸಿ ಬ್ಯಾಂಕಿನ ನಿರ್ದೇಶಕ ಕೋಟ್ರೇಶಪ್ಪ ಬಸೇಗಣ್ಣಿ, ಆನಂದವನದ ಗುರುದತ್ತ ಚಕ್ರವರ್ತಿ ಸ್ವಾಮೀಜಿ, ವಿಶ್ವನಾಥ ಚಕ್ರವರ್ತಿ ಸ್ವಾಮೀಜಿ, ಉದ್ಯಮಿ ಪವನ್‌ಬಹದ್ದೂರ ದೇಸಾಯಿ, ಲವಣ್ಣ ದೇಸಾಯಿ, ಜಾತ್ರಾ ಸಮಿತಿ ಅಧ್ಯಕ್ಷ ಹನುಮಂತಪ್ಪ ದಾಸರ, ಬ್ರಹ್ಮಾನಂದ ಚಕ್ರವರ್ತಿ, ಬಸವರಾಜ ತಳ್ಳಿಹಳ್ಳಿ, ಹುಚ್ಚಪ್ಪ ಯಾತಗಿರಿ, ಪರಮೇಶ್ವರ ಮಣೆಗಾರ, ಕರಿಯಪ್ಪ ರಾಣಿಬೆನ್ನೂರ, ಪ್ರಕಾಶ ಹಿತ್ತಲಮನಿ, ಮಧು ಹಂಚಿನಮನಿ, ಬಿದ್ದಾಡೆಪ್ಪ ಸುಣಗಾರ, ಗಣೇಶ ಮಣೆಗಾರ, ಪ್ರಕಾಶ ಬೆಳವಿಗಿ, ಕೃಷ್ಣಾ ಸುಣಗಾರ, ಸೋಮಪ್ಪ ಬಾರ್ಕಿ, ಸುರೇಶ ರಾಣೇಬೆನ್ನೂರ, ಉಮೇಶ ಬಾರ್ಕಿ, ಪಂಡಿತ ಮಣೆಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಯಿ ಮಂದಿರದ ಅವ್ಯವಹಾರ: ತನಿಖೆಗೆ ಕಮಿಟಿ ರಚನೆ
ಹಂಪಿಯ ಗತ ವೈಭವ ಸಾರಿದ ಐತಿಹಾಸಿಕ ರಾಜಬೀದಿ