ಕನ್ನಡಪ್ರಭ ವಾರ್ತೆ ಬೀದರ್
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಆಧಾರದ ಮೇಲೆ ಮೀಸಲಾತಿ ಅನುಭವಿಸುತ್ತಿರುವ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿ ಜನಾಂಗದವರು ಧರ್ಮದ ಕಾಲಂನಲ್ಲಿ ಬೌದ್ಧ ಎಂದು, ಜಾತಿ ಕಾಲಂನಲ್ಲಿ ಹೊಲೆಯ, ಮಾದಿಗ, ಎಂಬಿತ್ಯಾದಿ ಜಾತಿಗಳ ಹೆಸರು ಬರೆಸಬೇಕೆಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ಕರೆ ನೀಡಿದರು.ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆ. 22ರಿಂದ ಪ್ರಾರಂಭವಾಗಲಿರುವ ಹಿಂದುಳಿದ ವರ್ಗಗಳ ಆಯೋಗದ ಸಾಮಾ ಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ ಡಾ. ಅಂಬೇಡ್ಕರ್ ಅವರ ಅನುಯಾಯಿಗಳು ತಮ್ಮ ಧರ್ಮ ಬೌದ್ಧ ಎಂದು ದಾಖಲಿಸುವಂತೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಯೋಜನೆ ಕುರಿತು ಚರ್ಚೆ ಮಾಡಲು ರಾಜ್ಯದ ಎಲ್ಲಾ ಬೌದ್ಧಸಂಘ ಸಂಸ್ಥೆಗಳ ಪದಾಧಿಕಾರಿಗಳು, ಬೌದ್ಧ ಉಪಾಸಕರು, ಎಲ್ಲಾ ದಲಿತ ಸಂಘಟನೆಗಳ ನಾಯಕರು ಮತ್ತು ಸಮಸ್ತ ಸಮಾಜದ ಮುಖಂಡರ ಸಭೆ ಕಳೆದ 13ರಂದು ಬೆಂಗಳೂರು ನಾಗಸೇನ ಬುದ್ಧ ವಿಹಾರದಲ್ಲಿ ಜರುಗಿತು. ಅದರಲ್ಲಿ ಎಲ್ಲರೂ ಧರ್ಮ ಬೌದ್ಧ ಬರೆಸಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.
ಯತ್ನಾಳ್ ಹೇಳಿಕೆಗೆ ಖಂಡನೆ: ವಿಜಯಪುರ ನಗರ ಶಾಸಕ ಹಾಗೂ ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ ಯತ್ನಾಳ ಅವರು ಇತ್ತಿಚೀಗೆ ದಲಿತ ಮಹಿಳೆಯೊಬ್ಬಳು ಮಾತೆ ಚಾಮುಂಡಿದೇವಿಗೆ ಪೂಜೆ ಮಾಡಲು ಬರುವುದಿಲ್ಲ ಎಂದು ಹೇಳಿಕೆ ನೀಡಿ ಇಡೀ ಮಹಿಳಾ ಕುಲಕ್ಕೆ ಹಾಗೂ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಇಂಥ ಬಾಲಿಶ ಹೇಳಿಕೆ ನೀಡುವ ಯತ್ನಾಳರ ಹೇಳಿಕೆಯನ್ನು ಇಡೀ ದಲಿತ ಸಮುದಾಯ ಖಂಡಿಸುತ್ತದೆ ಎಂದರು.ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ತುಕಾರಾಮ ಲಾಡಕರ್, ಪದಾಧಿಕಾರಿಗಳಾದ ರಮೇಶ ಮಂದಕನಳ್ಳಿ, ಶಿವರಾಜ ಲಾಡಕರ್, ವಿಠಲ ಲಾಡಕರ್, ರಾಜಕುಮಾರ ಚಂದನ್, ಅಂಕುಶ ಡಾಂಗೆ, ಅಂಬರೀಶ ಅತಿವಾಳ, ರವಿಂದ್ರ ಭಾಲ್ಕಿ ಹಾಗೂ ಇತರರು ಇದ್ದರು.