-ಒಳ ಮೀಸಲಾತಿಗೆ ಮೇ 5ರಿಂದ 17ಕ್ಕೆ ಮೊದಲ ಹಂತದ ಸಮೀಕ್ಷೆ: ಡಿ.ಬಸವರಾಜ
-----ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಪರಿಶಿಷ್ಟ ಜಾತಿಗಳ 1ನೇ ಹಂತದ ಸಮೀಕ್ಷೆ ಕಾರ್ಯವು ಮೇ5ರಿಂದ 17ರವರೆಗೆ ರಾಜ್ಯಾದ್ಯಂತ ನಡೆಯಲಿದ್ದು, ಗಣತಿದಾರರು ಮನೆ ಬಾಗಿಲಿಗೆ ಬಂದಾಗ ಭೋವಿ ಸಮಾಜ ಬಾಂಧವರು ಜಾತಿ ಕಾಲಂನದಲ್ಲಿ ಭೋವಿ ಅಥವಾ ವಡ್ಡರ್ ಅಂತಲೇ ಬರೆಸಬೇಕು ಎಂದು ಸಮಾಜಗ ಹಿರಿಯ ಮುಖಂಡ ಡಿ.ಬಸವರಾಜ ಮನವಿ ಮಾಡಿದ್ದಾರೆ.ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕೆ ಇದೆಯೆಂಬ ತೀರ್ಪು ನೀಡಿದ್ದು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಜಾತಿಗಳನ್ನು ಉಪವರ್ಗೀಕರಣ ಮಾಡಿ, ಒಳ ಮೀಸಲಾತಿ ನೀಡುವಂತೆ 1.8.2024ರಂದು ತೀರ್ಪು ನೀಡಿದೆ ಎಂದರು.
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿಗೆ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅಧ್ಯಕ್ಷತೆಯಲ್ಲಿ ಏಕವ್ಯಕ್ತಿ ವಿಚಾರಣ ಆಯೋಗ ನೇಮಿಸಿ, ಒಳ ಮೀಸಲಾತಿ ವರ್ಗೀಕರಣಕ್ಕೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಉಪವರ್ಗೀಕರಣಕ್ಕೆ ಅಗತ್ಯ ದತ್ತಾಂಶ ಸಂಗ್ರಹಿಸಲು ಸಮೀಕ್ಷೆ ಕೈಗೊಳ್ಳಲು ಮರುಹಂತದಲ್ಲಿ ಸಮಗ್ರ ಅಂಕಿ ಅಂಶಗಳನ್ನು ಸಂಗ್ರಹಣೆ ಮಾಡಲಿದೆ ಎಂದು ಅವರು ತಿಳಿಸಿದರು.ಮೊದಲ 2ಹಂತದ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದವರು 3ನೇ ಹಂತದಲ್ಲಿ ಭಾಗವಹಿಸಬಹುದು. ಅಂತವರು ಆನ್ ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಂಡು, ಸಮೀಕ್ಷೆಗೆ ಮಾಹಿತಿ ಒದಗಿಸಬಹುದು. ಇದಕ್ಕಾಗಿ ಪರಿಶಿಷ್ಟ ಜಾತಿ ಜನರು ಆಧಾರ್ ಸಂಖ್ಯೆ, ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ ಕಡ್ಡಾಯವಾಗಿ ನೀಡಬೇಕು. ಆನ್ ಲೈನ್ ಸಮೀಕ್ಷೆ ಮೇ22ರಿಂದ 27ರವರೆಗೆ ನಡೆಯಲಿದೆ. ಮೇ19ರಿಂದ 21ರವರೆಗೆ 2ನೇ ಹಂತದಲ್ಲಿ ಮನೆ ಭೇಟಿ ಅವಧಿಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನು ತಾವು ವಾಸಿಸುವ ಮತಕ್ಷೇತ್ರದಲ್ಲಿ ಸ್ಥಾಪಿಸಿದ ಸಮೀಕ್ಷಾ ಕೇಂದ್ರಕ್ಕೆ ಆಧಾರ್ ಮತ್ತು ಪಡಿತರ ಚೀಟಿಯೊಂದಿಗೆ ಮತಗಟ್ಟೆಗೆ ತೆರಳಿ, ಭೋವಿ ಅಥವಾ ವಡ್ಡರ್ ಅಂತಾ ಬರೆಸಬೇಕು ಎಂದು ತಿಳಿಸಿದರು.
ಭೋವಿ ಸಮಾಜವು ಪರಿಶಿಷ್ಟ ಜಾತಿಯಲ್ಲೇ ಅತ್ಯಂತ ಶೋಷಿತ ಸಮುದಾಯ. ಅನಾದಿಯಿಂದಲೂ ಶ್ರಮಿಕ ವರ್ಗವಾಗಿದೆ. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ 1934ರಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಭೋವಿ ಸಮುದಾಯಕ್ಕೆ ಮೀಸಲಾತಿಯನ್ನು ಮೈಸೂರು, ಬೆಂಗಳೂರು ಸೇರಿದಂತೆ 16 ಜಿಲ್ಲೆಗಳಲ್ಲಿ ನೀಡಿದ್ದರು. ನಂತರ 1976ರಲ್ಲಿ ಆಗಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಶಿಫಾರಸ್ಸಿನಂತೆ ಆಗಿನ ಪ್ರಧಾನಿ ಮೋದಿ, ಕೇಂದ್ರ ಸಮಾಜ ಕಲ್ಯಾಣ ಸಚಿವ ಬಾಬು ಜಗಜೀವನ ರಾಂ ಇಡೀ ಅಖಂಡ ಕರ್ನಾಟಕಕ್ಕೆ ಪರಿಶಿಷ್ಟ ಜಾತಿಯಲ್ಲಿ ಭೋವಿ ಸಮುದಾಯವನ್ನು ಸೇರ್ಪಡೆ ಮಾಡಿದ್ದರು ಎಂದು ಅವರು ಹೇಳಿದರು.ಸಮಾಜದ ಮುಖಂಡರಾದ ಎಚ್.ಚಂದ್ರಪ್ಪ, ಎಚ್.ಮಂಜುನಾಥ, ಎಸ್.ಜಿ.ಸೋಮಶೇಖರ, ಮಂಜುನಾಥ, ಎಚ್.ಬಸವರಾಜ, ಬಿ.ಚೌಡೇಶ, ಗಿರಿಧರ ಸಾತಾಲ್, ಡಿ.ಶಿವಕುಮಾರ, ಗಣೇ ಶ, ಬಿ.ಎಚ್.ಉದಯಕುಮಾರ, ಬಿ.ಎಸ್.ಸುರೇಶ, ನೇರ್ಲಿಗೆ ಎಸ್.ಡಿ.ರಾಜೇಶ, ಸಿ.ರಮೇಶ, ಗಿರಿಧರ ಇದ್ದರು.
................ಫೋಟೊ: ದಾವಣಗೆರೆಯಲ್ಲಿ ಭೋವಿ ಸಮಾಜದ ಹಿರಿಯ ಮುಖಂಡ ಡಿ.ಬಸವರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.