ಒಳ ಮೀಸಲಾತಿ ಜಾರಿಗೆ ಅಗತ್ಯವಾಗಿರುವ ಗಣತಿ ಕಾರ್ಯಕ್ರಮ 5 ರಿಂದ ನಡೆಯಲಿದ್ದು, ಜಾತಿ ಕಾಲಂನಲ್ಲಿ ಹೊಲೆಯ ಎಂದು ಬರೆಸಬೇಕು ಎಂದು ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಟಿ. ಈರಣ್ಣ ತಿಳಿಸಿದರು
ಕನ್ನಡಪ್ರಭ ವಾರ್ತೆ ಗುಬ್ಬಿ
ಒಳ ಮೀಸಲಾತಿ ಜಾರಿಗೆ ಅಗತ್ಯವಾಗಿರುವ ಗಣತಿ ಕಾರ್ಯಕ್ರಮ 5 ರಿಂದ ನಡೆಯಲಿದ್ದು, ಜಾತಿ ಕಾಲಂನಲ್ಲಿ ಹೊಲೆಯ ಎಂದು ಬರೆಸಬೇಕು ಎಂದು ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಟಿ. ಈರಣ್ಣ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಆಯೋಜಿಸಿದ್ದ ಒಳ ಮೀಸಲಾತಿ ಮತ್ತು ಜಾತಿಗಣತಿ ಸಮಾಲೋಚನ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಒಳ ಮೀಸಲಾತಿ ಜಾತಿ ಮತ್ತು ಜನಗಣತಿಗೆ ಅವಕಾಶ ಕಲ್ಪಿಸಿದ್ದು, ಇದರಲ್ಲಿ ಬಲಗೈ ಸಮುದಾಯಕ್ಕೆ 37 ಉಪಜಾತಿಗಳು ಸೇರಲಿವೆ. ಈ ಜಾತಿ ಜನಗಣತಿ 3 ಹಂತಗಳಲ್ಲಿ ನಡೆಯಲ್ಲಿದ್ದು, ಮೊದಲನೇ ಹಂತವು ಮೇ 5ರಿಂದ ಮೇ 17 ರವರೆಗೆ ನಡೆಯುತ್ತದೆ. ಇದರಲ್ಲಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಾರೆ. ಎರಡನೇ ಹಂತವು ಮೇ 19 ರಿಂದ 21 ರವರೆಗೆ ನಡೆಯಲಿದೆ ಇದರಲ್ಲಿ ಪ್ರದೇಶವಾರು ಮತಗಟ್ಟೆಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಸಮೀಕ್ಷೆ ಮಾಡುತ್ತಾರೆ. ಹಾಗೇ ಮೂರನೇ ಹಂತವು ಮೇ 19 ರಿಂದ 23 ರವರೆಗೆ ಆನ್ ಲೈನ್ ಮೂಲಕ ಘೋಷಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ನಮ್ಮ ಸಮಿತಿಯಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು ಗ್ರಾಮಗಳಲ್ಲಿಯೂ ಮನೆ ಮನೆಗೆ ಭೇಟಿ ನೀಡಿ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.
ತಾಲೂಕು ಛಲವಾದಿ ಮಹಾಸಭಾದ ಉಪಾಧ್ಯಕ್ಷರು ಕಿಟ್ಟದಕುಪ್ಪೆ ನಾಗರಾಜು ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಪದಾಧಿಕಾರಿಗಳು ಮಾಡಬೇಕಾಗಿದೆ ಎಂದರು.ನಿಟ್ಟೂರು ಹೋಬಳಿ ಘಟಕದ ಅಧ್ಯಕ್ಷ ಗೋಪಾಲ್ ಮಾತನಾಡಿ, ಜಾತಿಗಣತಿ ಮಾಡುವ ಅಧಿಕಾರಿಗಳು ಮನೆ ಬಾಗಿಲಿಗೆ ಬಂದಾಗ ತಾವುಗಳು ಖುದ್ದಾಗಿ ಇದ್ದು ಪೆನ್ನಿನಲ್ಲಿ ಹೊಲೆಯ ಎಂದು ಬರೆಯುವುದನ್ನು ಖಾತರಿ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಭೆಯಲ್ಲಿ ತಾಲೂಕು ಉಪಾಧ್ಯಕ್ಷರು ಸಚಿನ್, ಇರಕಸಂದ್ರ ಮಂಜುನಾಥ್, ಯುವ ಘಟಕದ ಅಧ್ಯಕ್ಷ ಮಧು, ಪ್ರಧಾನ ಕಾರ್ಯದರ್ಶಿ ರಮೇಶ್, ಮುಖಂಡರು ಕೃಷ್ಣಪ್ಪ, ಆನಂದ್, ಸೋಮಣ್ಣ, ರವೀಶ್, ಜಗದೀಶ್, ಹೋಬಳಿ ಘಟಕದ ಅಧ್ಯಕ್ಷರಾದ, ಮುನಿರಾಜು ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.