ಯಲಬುರ್ಗಾ:
ಇತ್ತೀಚೆಗೆ ವೀರಶೈವ ಬೇರೆ, ಲಿಂಗಾಯತ ಬೇರೆ ಎನ್ನುವ ಕೂಗು ಕೇಳಿ ಬರುತ್ತಿದೆ. ಧರ್ಮದ ಕಾಲಂನಲ್ಲಿ ಎಲ್ಲರೂ ಲಿಂಗಾಯತ ಎಂದು ಬರೆಯಿಸಿ ಎಂದು ಶ್ರೀಧರ ಮುರಡಿ ಹಿರೇಮಠದ ಶ್ರೀಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.ಪಟ್ಟಣದ ಶ್ರೀಧರ ಮುರಡಿ ಹಿರೇಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಒಂದು ಧರ್ಮ ಆಗಿದೆ. ಸೆ. ೨೨ರಂದು ನಡೆಯಲಿರುವ ಸಮೀಕ್ಷೆಯಲ್ಲಿ ಎಲ್ಲರೂ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸಿ, ಉಪಜಾತಿ ಕಾಲಂನಲ್ಲಿ ತಮ್ಮ ತಮ್ಮ ಜಾತಿ ಬರೆಯಿಸಬೇಕು. ಪ್ರಾಚೀನ ಕಾಲದಿಂದಲೂ ಆಗಿನ ಜನ ಸಣ್ಣ-ಸಣ್ಣ ಲಿಂಗ ಪೂಜೆ ಮಾಡುತ್ತಿದ್ದರು. ಶತಮಾನಗಳಿಂದ ಬಂದಂತಹ ಲಿಂಗಾಯತ ಧರ್ಮ ಒಂದೇ ಆಗಿದೆ ಎಂದರು.
ಸೆ. ೧೯ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ರಾಜ್ಯಮಟ್ಟದ ಏಕತಾ ಸಮಾವೇಶ ನಡೆಯಲಿದ್ದು, ೧೦೦೦ ಮಠಾಧೀಶರು, ಪಂಚಪೀಠಾಧೀಶರು, ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕಿನ ವೀರಶೈವ ಲಿಂಗಾಯತ ಮಹಾಸಭಾದ ಮುಖಂಡರು, ಪದಾಧಿಕಾರಿಗಳು ಹಾಗೂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಏಕತಾ ಸಮಾವೇಶದಲ್ಲಿ ಭಾಗವಹಿಸಬೇಕು ಎಂದರು.ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಮಾತನಾಡಿ, ಬಸವ ಸಂಸ್ಕೃತಿ ಒಪ್ಪುವ ಜಾತಿಗಣತಿ ಧರ್ಮದ ಕಾಲಂನಲ್ಲಿ ಬರುವ ಬಸವಣ್ಣ ಅವರನ್ನು ಪೂಜಿಸುವ ಎಲ್ಲರೂ ಲಿಂಗಾಯತ ಧರ್ಮದವರೇ ಆಗಿದ್ದು ವೀರಶೈವ-ಲಿಂಗಾಯತ ಧರ್ಮ ಒಂದೇ ಎಂದರು.
ಅಕ್ಟೋಬರ್‌ನಲ್ಲಿ ಸದ್ಭಾವನಾ ಯಾತ್ರೆ:ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ಅಕ್ಟೋಬರ್ ತಿಂಗಳಲ್ಲಿ ಪ್ರತಿ ಗ್ರಾಮಕ್ಕೆ ತೆರಳಿ ಸದ್ಭಾವನಾ ಜನ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲೊದ್ದಾರೆ. ದುಶ್ಚಟಗಳ ಭೀಕ್ಷೆ, ಸದ್ಗುಣಗಳ ದೀಕ್ಷೆ ಪಾದಯಾತ್ರೆ ಮಾಡಲಿದ್ದಾರೆ ಎಂದರು.ಈ ವೇಳೆ ಕೆರೂರಿನ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಜಿಗೇರಿಯ ಶ್ರೀಗುರುಸಿದ್ದೇಶ್ವರ ಸ್ವಾಮೀಜಿ, ಭಕ್ತರು ಇದ್ದರು.