ಅನ್ಯಾಯದ ವಿರುದ್ಧ ಬರೆಯುವುದೇ ಬಂಡಾಯ ಸಾಹಿತ್ಯ: ಹುರುಗಲವಾಡಿ ರಾಮಯ್ಯ

KannadaprabhaNewsNetwork |  
Published : Sep 01, 2025, 01:03 AM IST
31ಕೆಎಂಎನ್ ಡಿ12 | Kannada Prabha

ಸಾರಾಂಶ

ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಕೊಪ್ಪ, ಸರೋಜಮ್ಮ ಲಿಂಗರಾಜು ಅವರ ಹಕ್ಕಿಗೂಡು ಕವನ ಸಂಕಲನ ಕುರಿತು ಮಾತನಾಡಿದರು. ಸಾಹಿತಿ ಬಿ.ಎಲ್.ಮಧುಸೂದನ್, ಪ್ರಾಧ್ಯಾಪಕ ಡಾ. ಹೊಂಬಯ್ಯ ಹೊನ್ನಲಗೆರೆ, ಶಿಕ್ಷಕಿ ಹಾಗೂ ಕವಯತ್ರಿ ಸರೋಜಮ್ಮ ಲಿಂಗರಾಜು ಅವರಿಗೆ ದಲಿತ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಮದ್ದೂರು

ಅನ್ಯಾಯದ ವಿರುದ್ಧ ಮಾತನಾಡುವುದು ಮತ್ತು ಬರೆಯುವುದೇ ಬಂಡಾಯ ಸಾಹಿತ್ಯ ಎಂದು ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಹುರುಗಲವಾಡಿ ರಾಮಯ್ಯ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ದಲಿತ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಉದ್ಘಾಟನೆ ಹಾಗೂ ಸಾಮಾಜಿಕ ಚಳವಳಿ ನೇತಾರ ನಾರಾಯಣ ಗುರು ಜನ್ಮದಿನಾಚರಣೆಯಲ್ಲಿ ಮಾತನಾಡಿ, 70ರ ದಶಕದಲ್ಲಿ ಹುಟ್ಟಿಕೊಂಡ ದಲಿತ ಚಳವಳಿಯೇ ಬಂಡಾಯ ಸಾಹಿತ್ಯವನ್ನು ಹುಟ್ಟುಹಾಕಿದೆ. ದಲಿತ ಚಳವಳಿಯೇ ನಿಜವಾದ ಜಾತ್ಯಾತೀತ ಚಳವಳಿಯಾಗಿದೆ ಎಂದರು.

ದಲಿತ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಸೇರಿ ಇನ್ಯಾವುದೇ ಸಂಘಟನೆಗೆ ಪರ್ಯಾಯ ಸಂಘಟನೆ ಅಲ್ಲ. ದಲಿತರ ಪರ ಚಿಂತನೆಯುಳ್ಳವರು ಈ ಪರಿಷತ್ತಿನ ಒಡನಾಡಿಗಳು, ಬಂಧುಗಳಾಗಿದ್ದಾರೆ ಎಂದು ಹೇಳಿದರು.

ದಲಿತ ಕೇವಲ ಜಾತಿ ಸೂಚಕ ಪದವಲ್ಲ. ತುಳಿತಕ್ಕೊಳ್ಳಗಾದ, ದೌರ್ಜನ್ಯಕ್ಕೊಳಗಾದ, ನೊಂದವರೆಲ್ಲರೂ ದಲಿತರಾಗಿದ್ದಾರೆ. ತಮಗಾಗುತ್ತಿರುವ ದೌರ್ಜನ್ಯದ ವಿರುದ್ದ ದನಿ ಎತ್ತುವುದೇ ದಲಿತ ಸಾಹಿತ್ಯದ ತಿರುಳಾಗಿದೆ ಎಂದರು.

ಸಾಹಿತಿ ಬಿ.ವಿ.ಹಳ್ಳಿ ನಾರಾಯಣ ಮಾತನಾಡಿ, ನಾರಾಯಣ ಗುರು ಅವರು ಅಸ್ಪೃಶ್ಯತೆಗೆ ಒಳಗಾಗಿದ್ದ ಈಳವ ಸಮುದಾಯದ ವಿಮೋಚನೆಗಾಗಿ ದುಡಿದ ಮಹನೀಯ. ಜಾತಿ ತಾರತಮ್ಯವನ್ನು ಹೋಗಲಾಡಿಸಿ ಸಮಾನತೆಯನ್ನು ದೇಶಕ್ಕಂಚಿದ ದಾರ್ಶನಿಕ ಎಂದು ಬಣ್ಣಿಸಿದರು.

ಡಯಟ್ ‌ನ ನಿವೃತ್ತ ಶಿಕ್ಷಕ ಗುರುಮೂರ್ತಿ ಮಾತನಾಡಿ, ದಲಿತ ಸಾಹಿತ್ಯ ಹೋರಾಟದ ಹಾಡುಗಳ ಮೂಲಕ ಹುಟ್ಟಿಕೊಂಡ ಸಾಹಿತ್ಯವಾಗಿದೆ. ವ್ಯವಸ್ಥೆ ವಿರುದ್ದ ಪ್ರಶ್ನಿಸುವ ಮೂಲಕ ದಲಿತ ಪ್ರಜ್ಞೆ ಹುಟ್ಟಿಕೊಂಡಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಕೊಪ್ಪ, ಸರೋಜಮ್ಮ ಲಿಂಗರಾಜು ಅವರ ಹಕ್ಕಿಗೂಡು ಕವನ ಸಂಕಲನ ಕುರಿತು ಮಾತನಾಡಿದರು. ಸಾಹಿತಿ ಬಿ.ಎಲ್.ಮಧುಸೂದನ್, ಪ್ರಾಧ್ಯಾಪಕ ಡಾ. ಹೊಂಬಯ್ಯ ಹೊನ್ನಲಗೆರೆ, ಶಿಕ್ಷಕಿ ಹಾಗೂ ಕವಯತ್ರಿ ಸರೋಜಮ್ಮ ಲಿಂಗರಾಜು ಅವರಿಗೆ ದಲಿತ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಬೆಸಗರಹಳ್ಳಿ ಸತ್ಯ ಅವರು ಗೀತ ಗಾಯನ ನಡೆಸಿಕೊಟ್ಟರು. ದಸಾಪ ತಾಲೂಕು ಗೌರವ ಅಧ್ಯಕ್ಷ ಹನುಮಂತ ರಾಯಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ತಾಲೂಕು ಗೌರವ ಅಧ್ಯಕ್ಷೆ ಸುಶೀಲಮ್ಮ, ರಾಣಿ ಐಶ್ವರ್ಯ ಡೆವಲಪರ್ಸ್ ಮಾಲೀಕ ಎಚ್.ಎಲ್.ಸತೀಶ್, ದಸಾಪ ತಾಲೂಕು ಅಧ್ಯಕ್ಷ ಕೆ.ಟಿ. ಶಿವಕುಮಾರ್, ಬಿಇಒ ಧನಂಜಯ, ಡಿ.ಸಿ.ಮಹೇಂದ್ರ, ಶಶಿಕುಮಾರ, ಕಾರ್ಕಹಳ್ಳಿ ಬಸವರಾಜ ಪಾಲ್ಗೊಂಡಿದ್ದರು.

PREV

Recommended Stories

ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ
ತಾಂತ್ರಿಕ ಕ್ಷೇತ್ರದಲ್ಲಿ ಕನ್ನಡ ಬೆಳೆಸಬೇಕಿದೆ: ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ