ಐತಿಹಾಸಿಕ ನಾಟಕಗಳ ರಚನೆ ಸವಾಲಿನ ಕೆಲಸವಾಗಿದೆ: ವೇಣು ಜಾಲಿಬೆಂಚಿ

KannadaprabhaNewsNetwork |  
Published : Sep 28, 2026, 01:15 AM IST
 | Kannada Prabha

ಸಾರಾಂಶ

ರಾಯಚೂರಿನ ಕನ್ನಡ ಭವನದಲ್ಲಿ ಕಸಾಪ ಜಿಲ್ಲಾ ಹಾಗೂ ತಾಲೂಕು ಸಮಿತಿಗಳು, ಹೊಸಮನಿ ಪ್ರಕಾಶನ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬಶೀರ್‌ ಅಹ್ಮದ್‌ ಹೊಸಮನಿ ರಚಿಸಿದ ‘ರಾಷ್ಟ್ರಕೂಟ ಸಾರ್ವಭೌಮರು’ ಕೃತಿ ಜನಾರ್ಪಣೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಐತಿಹಾಸಿಕ ನಾಟಕಗಳನ್ನು ರಚಿಸುವುದು ಸಾಮಾನ್ಯ ಕೃತಿಗಳ ರಚನೆಗಿಂತ ಬಹಳ ಸವಾಲಿನ ಮತ್ತು ಗಂಭೀರ ಕೆಲಸವಾಗಿದೆ ಎಂದು ಯುವ ಕವಿ ವೇಣು ಜಾಲಿಬೆಂಚಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಕನ್ನಡ ಭವನದಲ್ಲಿ ಕಸಾಪ ಜಿಲ್ಲಾ ಹಾಗೂ ತಾಲೂಕು ಸಮಿತಿಗಳು, ಹೊಸಮನಿ ಪ್ರಕಾಶನ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬಶೀರ್‌ ಅಹ್ಮದ್‌ ಹೊಸಮನಿ ರಚಿಸಿದ ‘ರಾಷ್ಟ್ರಕೂಟ ಸಾರ್ವಭೌಮರು’ ಕೃತಿ ಜನಾರ್ಪಣೆಗೊಳಿಸಿ ಭಾನುವಾರ ಮಾತನಾಡಿದ ಅವರು. ಸಾಹಿತಿಗಳು ಕೇವಲ ಕಲ್ಪನೆಯಾಧಾರಿತ ಕಾವ್ಯ ಅಥವಾ ಕಥೆಗಳನ್ನು ಬರೆಯುವುದಕ್ಕಿಂತ ಐತಿಹಾಸಿಕ ನಾಟಕಗಳನ್ನು ರಚಿಸಬೇಕಾಗಿದ್ದು, ಅದಕ್ಕಾಗಿ ಆ ಕಾಲಘಟ್ಟದ ಸೂಕ್ಷ್ಮತೆ, ಸಮಕಾಲೀನ ಸನ್ನಿವೇಶ ಗಳು ಮತ್ತು ಆಳವಾದ ಐತಿಹಾಸಿಕ ಜ್ಞಾನ ಅತ್ಯಗತ್ಯ. ಇತಿಹಾಸದ ಸತ್ಯಾಸತ್ಯತೆಯನ್ನು ಕಲಾತ್ಮಕವಾಗಿ ಕಟ್ಟುವುದು ದೊಡ್ಡ ಸವಾಲಾಗಿದ್ದರೂ, ಈ ಕೃತಿಯಲ್ಲಿ ಲೇಖಕರು ಇದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದರು.

ಮಾನ್ವಿಯ ಹಿರೇಕೊಟ್ನೇಕಲ್ ಗ್ರಾಮದ ಸಾಹಿತಿ ಸರ್ವಮಂಗಳ ಓತೂರು ಅವರು ಕೃತಿ ಪರಿಚಯವನ್ನು ಮಾಡಿಕೊಟ್ಟರು. ಸಾಹಿತಿ ವೀರಹನುಮಾನ್ ಮಾತನಾಡಿ, ಅದಿಲ್ ಶಾಹಿಗಳು ಧಾರ್ಮಿಕ ಸಹಿಷ್ಣುತೆಯನ್ನು ಹೊಂದಿದ್ದವರು ಹಾಗೂ ವಿಜಯನಗರದ ಮೇಲೆ ಆಕ್ರಮಣ ಮಾಡಿದರೂ ಕೂಡ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಬದುಕಿಗೆ ಅವರು ನೀಡಿದ ಕೊಡುಗೆ ಅಪಾರವಾದುದು. ಮಹಿಪಾಲ ದಾಸರ ಕುರಿತಾದ ನಾಟಕದಲ್ಲಿ ಅವರು ಅರಮನೆಯ ಬಾಜುವೇ ನರಸಿಂಹ ದೇವರ ದೇವಸ್ಥಾನ ಕಟ್ಟಿಸಿ ಪ್ರವಚನ ನೀಡಿ, ಎಲ್ಲ ಮೌಢ್ಯಗಳನ್ನು ಹೋಗಲಾಡಿಸಲು ಆಜ್ಞೆ ಹೊರಡಿಸಿದ ಪ್ರಸಂಗ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಒಟ್ಟಾರೆಯಾಗಿ, ಈ ಹೊಸ ನಾಟಕವು ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಲೋಕಕ್ಕೆ ಮತ್ತೊಂದು ಮೌಲ್ಯಯುತ ಸೇರ್ಪಡೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಅವರು ಉದ್ಘಾಟಿಸಿ ಮಾತನಾಡಿ, ರಾಷ್ಟ್ರಕೂಟರು ಮತ್ತು ಹಂಪಿಯ ವಿಜಯನಗರ ಸಾಮ್ರಾಜ್ಯಗಳ ಐತಿಹಾಸಿಕ ಹಿನ್ನೆಲೆಯಲ್ಲಿ ಹಾಗೂ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಕನ್ನಡಿಗರಿಗೆ ಹಾಗೂ ಕನ್ನಡ ಭಾಷೆಗೆ ಸಿಕ್ಕಿದ ಮನ್ನಣೆಯನ್ನು ಈ ಪುಸ್ತಕವು ಬಿಂಬಿಸುತ್ತದೆ. ಕಾವೇರಿಯಿಂದ ನರ್ಮದಾ ನದಿವರೆಗೆ ಅಂದರೆ ರಾಜಸ್ಥಾನದ ಉತ್ತರ ಭಾರತದವರೆಗೂ ವಿಜಯನಗರ ಹಾಗೂ ರಾಷ್ಟ್ರಕೂಟರ ಸಾಮ್ರಾಜ್ಯವು ವಿಸ್ತರಿಸಿದ್ದರ ಇತಿಹಾಸವನ್ನು ಈ ಕೃತಿಯು ತೆರೆದಿಡುತ್ತದೆ ಎಂದರು.

ಕಸಾಪ ತಾಲೂಕಾಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ ಅಧ್ಯಕ್ಷತೆಯನ್ನು ವಹಿಸಿದ್ದರು. ಕೃತಿಕಾರರಾದ ಬಶೀರ್ ಅಹ್ಮದ್ ಹೊಸಮನಿ ಪ್ರಾಸ್ತಾವಿಕ ನುಡಿಗಳ ನ್ನಾಡಿದರು. ಈ ವೇಳೆ ಕವಿಗಳಾದ ತಿಮ್ಮಯ್ಯ ರಾಯಚೂರಕರ್, ಸಿರವಾರ ತಾಲೂಕಿನ ಮಾಡಗಿರಿ ಗ್ರಾಮದ ಮುಖಂಡರಾದ ನಟರಾಜ್ ಪಾಟೀಲ್, ಹುಸೇನ್ ಭಾಷಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಸಾಪ ತಾಲೂಕು ಗೌರವ ಕಾರ್ಯದರ್ಶಿ ರಾವುತರಾಬ್ ಬರೂರ, ಮಹಿಳಾ ಸದಸ್ಯೆ ವೈಶಾಲಿ ಪಾಟೀಲ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸಾಹಿತಿಗಳು, ಕನ್ನಡದಾಸಕ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೨೦೩೫ ಕ್ಕೆ ೪೦೦ ಕೋಟಿ ಜನರು ಬೊಜ್ಜಿನ ಸಮಸ್ಯೆ: ಕೆ.ಟಿ.ಹನುಮಂತು
ದೇಶಕ್ಕೆ ಮಾದರಿಯಾಗುವ ಸಂವಿಧಾನ ಭವನ: ಪಿ.ರವಿಕುಮಾರ್