ಹುಬ್ಬಳ್ಳಿ: ಜಾತ್ಯತೀತರು ಎಂದು ಹೇಳುತ್ತಲೇ ಮುಂದಿನ ಪೀಳಿಗೆಯನ್ನು ಇನ್ನಷ್ಟು ಜಾತಿವಾದಿಗಳನ್ನಾಗಿ ಮಾಡುತ್ತಿದ್ದೇವೆ. ಜಾತಿ ಸಮಾವೇಶಗಳಿಂದ ತಪ್ಪು ಸಂದೇಶ ಹೋಗುತ್ತಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಬೇಸರ ವ್ಯಕ್ತಪಡಿಸಿದರು.
ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಿದ್ದ ಮಠಾಧೀಶರು, ರಾಜ್ಯಭಾರ ಮಾಡಿದ, ಮಾಡುತ್ತಿರುವ ಮಂತ್ರಿ-ಮಹೋದಯರು, ಮುಖಂಡರು, ಗಣ್ಯರು ಎನಿಸಿಕೊಂಡವರು ಇಂದು ತಮ್ಮ ತಮ್ಮ ಜಾತಿಗಳ ಜನರನ್ನು ದೊಡ್ಡ ಸಂಖ್ಯೆಯಲ್ಲಿ ಕೂಡಿಸಿ ಸಮಾವೇಶ ಮಾಡುವ ಮೂಲಕ ಅವರಿಗೆ ಜಾತಿಯ ವಿಷಯವನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಬೇರೆ ಸಮುದಾಯದವರನ್ನು ದ್ವೇಷಿಸುವಂತೆ ಮಾಡುತ್ತಿದ್ದಾರೆ. ಹಾಗಿದ್ದರೆ ಇವರೆಲ್ಲ ಬೇರೆ ವೇದಿಕೆಗಳಲ್ಲಿ ಜಾತ್ಯಾತೀತೆಯ ಭಾಷಣ ಬಿಗಿಯುದು ಬೂಟಾಟಿಕೆ ಅನಿಸುವುದಿಲ್ಲವೇ? ಎಂದರು.
ಹಿಂದೆ ನಾನು ಯಾರೋ ಒತ್ತಾಯ ಮಾಡಿದರು ಎನ್ನುವ ಕಾರಣಕ್ಕೆ ಒಂದು ಸಮಾವೇಶದಲ್ಲಿ ಭಾಗವಹಿಸಿದ್ದೆ. ಅ ಬಳಿಕ ಯಾವುದೇ ಜಾತಿ ಸಮಾವೇಶದಲ್ಲಿ ಭಾಗಿಯಾಗಿಲ್ಲ, ಮುಂದೆಯೂ ಯಾವುದೇ ಜಾತಿಯ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಬಸವರಾಜ ಹೊರಟ್ಟಿ, ಜಾತಿವಿನಾಶದಿಂದ ಮಾತ್ರ ಶಾಂತಿ, ಸಮಾನತೆ, ಸಹೋದರತ್ವ ಬೆಳೆಯಲು ಸಾಧ್ಯ ಎಂದರು.