ಧಾರವಾಡ:
ಅತಿವೃಷ್ಟಿಯಿಂದಾಗಿ ಬೆಳೆ ಹಾನಿ ಕುರಿತು ಪರಿಹಾರ ತಂತ್ರಾಂಶದಲ್ಲಿ ಅಂಕಿ ಅಂಶ ದಾಖಲಿಸುವಾಗ ಕಲಘಟಗಿ ತಾಲೂಕಿನಲ್ಲಿ ತಪ್ಪು ದಾಖಲಿಸಿದ್ದು ಮತ್ತು ಕೆಲವು ರೈತರ ಹೆಸರು ಬಿಟ್ಟು ಹೋಗಿದ್ದು ಇದೀಗ ತಹಸೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಕುತ್ತು ತಂದಿದೆ.ಕಳೆದ ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಧಾರವಾಡದಲ್ಲಿ ಸುರಿದ ಭಾರೀ ಮಳೆಗೆ ಅತಿವೃಷ್ಟಿಯಾಗಿ ಬೆಳೆಹಾನಿಯಾಗಿತ್ತು. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಜಂಟಿ ಸಮೀಕ್ಷೆಯಲ್ಲಿ ಲೋಪಗಳಾಗಿದ್ದು, ಜಿಲ್ಲಾಡಳಿತವು ಮುಂಜಾಗ್ರತೆ ವಹಿಸಿ ಆಗಿರುವ ತಪ್ಪನ್ನು ಜಿಲ್ಲಾ ಹಂತದಲ್ಲಿಯೇ ಪರಿಶೀಲಿಸಿದ್ದರಿಂದ ಆರ್ಥಿಕ ನಷ್ಟ ತಪ್ಪಿದೆ. ಇಲ್ಲದೇ ಹೋದಲ್ಲಿ ಅನರ್ಹ ರೈತರಿಗೆ ಪರಿಹಾರ ಹಣ ಹೋಗುತ್ತಿತ್ತು. ಇಷ್ಟಾಗಿಯೂ ಬರುವ ದಿನಗಳಲ್ಲಿ ಈ ರೀತಿ ತಪ್ಪು ನಡೆಯಬಾರದೆಂದು ಈ ಅಂಶವನ್ನು ಪರಿಶೀಲಿಸಿ ವರದಿ ಸಲ್ಲಿಸಲು ಉಪವಿಭಾಗಾಧಿಕಾರಿಗಳ ಮತ್ತು ಕೃಷಿ ಇಲಾಖೆ ಜಂಟಿ ನಿರ್ದೇಶಕರ ಜಂಟಿ ಸಮಿತಿ ರಚಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಸಮಿತಿಯು ತಪ್ಪು ಮಾಹಿತಿ ದಾಖಲಿಸಿರುವುದು ದೃಢಪಡಿಸಿ, ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿತ್ತು.
ಇದರ ಅನ್ವಯ ಬೆಳೆ ಹಾನಿ ಕುರಿತು ತಪ್ಪು ಮಾಹಿತಿ ದಾಖಲಿಸಿ, ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಲು ಪ್ರಯತ್ನಿಸಿರುವ ಕಲಘಟಗಿ ತಹಸೀಲ್ದಾರ್, ಕಲಘಟಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಮತ್ತು ಆರು ಜನ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲು ಸರ್ಕಾರದ ಕಂದಾಯ ಇಲಾಖೆಗೆ ಡಿಸೆಂಬರ್‌ನಲ್ಲಿ ವರದಿ ಸಹಿತ ಪತ್ರವನ್ನು ಜಿಲ್ಲಾಡಳಿತ ಬರೆದಿತ್ತು.ಕ್ರಮಕ್ಕೆ ಸೂಚನೆ:
ಈ ಪತ್ರಕ್ಕೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಂದ ಫೆ. 5ರಂದು ಉತ್ತರ ಬಂದಿದ್ದು, ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಲು ಪ್ರಯತ್ನಿಸಿರುವ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಲು ಸರ್ಕಾರ ಸೂಚಿಸಿದೆ.ಈ ಕುರಿತು ಜಿಲ್ಲಾಧಿಕಾರಿ ದಿವ್ಯಪ್ರಭು ಪ್ರತಿಕ್ರಿಯೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಅತಿವೃಷ್ಟಿಯಿಂದ ಕಲಘಟಗಿ ತಾಲೂಕಿನಲ್ಲಿ ಬೆಳೆ ಹಾನಿ ಆಗಿರುವ ಕುರಿತು ಸರಿಯಾದ ವರದಿ ಸಲ್ಲಿಸಿದ ನಂತರ ಸರ್ಕಾರದಿಂದ ಪರಿಹಾರ ಬಿಡುಗಡೆ ಆಗುತ್ತದೆ. ಈ ಕುರಿತು ಪರಿಷ್ಕೃತ ಬೆಳೆಹಾನಿ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಸಲ್ಲಿಸಲಾಗಿದ್ದು, ಪರಿಶೀಲಿಸಿ ಸರ್ಕಾರ ಶೀಘ್ರದಲ್ಲಿ ಕಲಘಟಗಿ ತಾಲೂಕಿಗೆ ಬೆಳೆ ಪರಿಹಾರ ಬಿಡುಗಡೆ ಮಾಡಲಿದೆ ಎಂದರು. ಅನರ್ಹ ರೈತರ ಸೇರ್ಪಡೆ
ಕಲಘಟಗಿ ತಾಲೂಕಿನ ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆಯಲ್ಲಿ ತಾಲೂಕಿನಲ್ಲಿ 13,829 ರೈತರ 4400 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಪರಿಹಾರ ತಂತ್ರಾಂಶದಲ್ಲಿ ವರದಿ ಸಲ್ಲಿಸಲಾಗಿತ್ತು. ಆದರೆ, ಪರಿಷ್ಕೃತ ಸಮೀಕ್ಷೆಯಲ್ಲಿ 154 ರೈತ ಫಲಾನುಭವಿಗಳ 37.76 ಹೆಕ್ಟೇರ್ ಹಾನಿ ಕ್ಷೇತ್ರವನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ. ಜತೆಗೆ 100 ಅನರ್ಹ ರೈತ ಫಲಾನುಭವಿಗಳನ್ನು ಸೇರಿಸಲಾಗಿದೆ ಎಂದು ತಪ್ಪು ಕಂಡು ಹಿಡಿಯಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸರ್ಕಾರದ ಗಮನ ಸೆಳೆದಿತ್ತು.