ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ: ಒಂದು ಜಿಲ್ಲೆ ಒಂದು ತಾಣ ಯೋಜನೆಗೆ ಯಾದಗಿರಿ ಕೋಟೆ ಆಯ್ಕೆ

KannadaprabhaNewsNetwork |  
Published : Jul 21, 2024, 01:29 AM ISTUpdated : Jul 21, 2024, 11:39 AM IST
ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ  ಸಮಿತಿ ಸಭೆ ನಡೆಯಿತು. | Kannada Prabha

ಸಾರಾಂಶ

ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಡೆಯಿತು.

 ಯಾದಗಿರಿ :  ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಸರ್ಕಾರ ಒಂದು ಜಿಲ್ಲೆ ಒಂದು ತಾಣ ಎಂಬ ವಿನೂತನ ಯೋಜನೆ ರೂಪಿಸಿದ್ದು, ಈ ಯೋಜನೆಗೆ ಯಾದಗಿರಿ ನಗರದ ಕೋಟೆ ಆಯ್ಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಯಾದಗಿರಿ ಕೋಟೆಯು ಕಲ್ಯಾಣ ಕರ್ನಾಟಕದ ಪ್ರಮುಖ ಆಕರ್ಷಣೀಯವಾದ ಪ್ರವಾಸಿ ತಾಣವಾಗಿದೆ. ಪ್ರವಾಸಿ ತಾಣಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದರೆ ಹೆಚ್ಚು ಪ್ರವಾಸಿಗರನ್ನು ಸೆಳೆಯಬಹುದಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳು ಅಭಿವೃದ್ದಿಯಾದರೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ನಗರದ ಕೋಟೆಯನ್ನು ಸೌಂದರ್ಯೀಕರಣ ಮಾಡುವುದರ ಮೂಲಕ ಸ್ಥಳಿಯರಿಗೆ ಉದ್ಯೋಗವಕಾಶ, ಹೆಚ್ಚಿನ ವ್ಯಾಪಾರ ವಹಿವಾಟು ಹೆಚ್ಚಳಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯ ಹೃದಯದಂತಿರುವ ನಗರ ಕೋಟೆ ಮತ್ತು ಲುಂಬಿನಿ ವನ ಹಾಗೂ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕ್ರಿಯಾಯೋಜನೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಮಚಂದ್ರ ಕಟ್ಟಿಮನಿ, ನಗರಸಭೆ ಪೌರಾಯುಕ್ತ ಲಕ್ಷ್ಮಿಕಾಂತ ಡಿಎಚ್‌ಒ ಡಾ.ಪ್ರಭುಲಿಂಗ ಮಾನಕರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಅಭಿಮನ್ಯು, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಅಧಿಕಾರಿ ಕೆ. ಶಿವರಾಜ್, ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಪರಮೇಶ್ವರ, ಶ್ರಾವಣಕುಮಾರ ಸೇರಿದಂತೆ ಇತರರಿದ್ದರು.

ಯಾದಗಿರಿ ಕೋಟೆಯ ವಿಶೇಷತೆ: ಯಾದಗಿರಿ ಕೋಟೆಯು ಭೀಮಾ ನದಿಯಿಂದ 2 ಕಿಮೀ ಅಂತರದಲ್ಲಿದ್ದು, ಪ್ರಾಚೀನ ಶಾಸನಗಳಲ್ಲಿ ''''''''ಏತಗಿರಿ'''''''' ಎಂದೇ ಉಲ್ಲೇಖಿತಗೊಂಡಿರುವ ಯಾದಗಿರಿ ಕಲ್ಯಾಣ ಚಾಲುಕ್ಯರ ಆಳ್ವಿಕೆಯಲ್ಲಿ ಸ್ವಲ್ಪ ಕಾಲ ರಾಜಧಾನಿ ಪಟ್ಟಣವಾಗಿತ್ತು. ಐತಿಹಾಸಿಕವಾಗಿ ಹಾಗೂ ಭೌಗೋಳಿಕವಾಗಿ ಮಹತ್ವವಾದ ಸ್ಥಳ ಕಲ್ಯಾಣಿ ಚಾಲುಕ್ಯರು ನಿರ್ಮಿಸಿದ ಗಿರಿಯ ಮೇಲಿರುವ ಮೂರು ಸುತ್ತಿನ ಕೋಟೆ ಅನೇಕ ರಾಜರ ಆಡಳಿತದಲ್ಲಿ ಬಲಗೊಂಡಿದೆ. 

ಎತ್ತರವಾದ ಗಿರಿಯ ಮೇಲಿರುವ ಕೋಟೆಯಲ್ಲಿ ರಾಮಲಿಂಗೇಶ್ವರ ದೇವಸ್ಥಾನ, ಶ್ರೀ ಭುವನೇಶ್ವರಿ ದೇವಸ್ಥಾನ, ಉತ್ತರ ದಿಕ್ಕಿನ ಕೋಟೆಯ ಸುಸಜ್ಜಿತ ಮುಖ್ಯ ದ್ವಾರ, ವಾಯುವ್ಯ ದಿಕ್ಕಿನ ಕೋಟೆಯ ಸುಸಜ್ಜಿತ ಹೆಬ್ಬಾಗಿಲು, ಕೋಟೆಯಲ್ಲಿನ ನೀರಿನ ಸಂಗ್ರಹಣದ ದೋಣಿ, ರಾಮತೀರ್ಥ ಭಾವಿ, ಗಣಪತಿ ದೇವಸ್ಥಾನ, ಕೋಟೆಯ ಮೇಲಿರುವ ಬೃಹತ್ ತೋಪಿನ ಬುರಜು, ಶ್ರೀರಾಮ-ಲಕ್ಷ್ಮಣ ಮತ್ತು ಹನುಮಾನ ಉಬ್ಬು ಶಿಲಾ ಮೂರ್ತಿಗಳು, ಮಲ್ಲಯ್ಯನ ಪಾದಗಳು, ಮದ್ದಿನ ಸಂಗ್ರಹದ ಶೀಲಾ ಭಾವಿ, ಬೆಟ್ಟದ ಮೇಲಿನಿಂದ ಈಶಾನ್ಯ ದಿಕ್ಕಿಗೆ ಹಿರಿ ಕೆರೆ ಮತ್ತು ಅರಮನೆಯ ಅವಶೇಷಗಳು, 3 ಜನ ಜೈನ ತೀರ್ಥಂಕರ ಬಸದಿಗಳಿವೆ ಹಾಗೂ ಎತ್ತರವಾದ ಬೆಟ್ಟದ ಮೇಲಿರುವ ಅಕ್ಕ-ತಂಗಿಯರ ಬಾವಿಯಲ್ಲಿ ವರ್ಷಪೂತಿ ನೀರಿನಿಂದ ತುಂಬಿರುತ್ತದೆ ಎಂದು ತಿಳಿಸಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ