ಯಾದಗಿರಿ: ಕಾಲುವೆಗೆ ನೀರು ಸರ್ಕಾರ ಒಪ್ಪಿಗೆ, ಡಿಸಿಎಂಗೆ ಶಾಸಕ ಕಂದಕೂರು ಧನ್ಯವಾದ

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ಶಹಾಪುರ ನಗರದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಮಣಿದು 2.75ಟಿಎಂಸಿ ನೀರು ಬೀಡಲು ಒಪ್ಪಿಗೆ ಸೂಚಿಸಿದಕ್ಕೆ ಗುರುಮಠಕಲ್‌ ಶಾಸಕ ಶರಣಗೌಡ ಕಂದುಕೂರ ಡಿಸಿಎಂಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಕಳೆದ 23 ದಿನಗಳಿಂದ ಶಹಾಪುರ ನಗರದಲ್ಲಿ ರೈತರು ನಡೆಸುತ್ತಿರುವ ಹೋರಾಟ ಗಮನಿಸಿದ ಸರ್ಕಾರ ರೈತರ ಅನುಕೂಲಕ್ಕಾಗಿ ಎನ್‌ಎಲ್‌ಬಿಸಿಯಿಂದ ಮುಡಬೂಳ ಶಾಖಾ ಕಾಲುವೆಗೆ ಜಲಾಶಯದಿಂದ 2.75 ಟಿಎಂಸಿ ನೀರು ಬಿಡಲು ಒಪ್ಪಿಗೆ ಸೂಚಿಸಿದೆ ಎಂದು ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ತಿಳಿಸಿದ್ದಾರೆ.

ಜ.6ರಂದು ಶನಿವಾರ ಸಂಜೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಯಾದಗಿರಿ ಜಿಲ್ಲೆಯ ಶಾಸಕರು ಮತ್ತು ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಜೊತೆಗೆ ಮೀಟಿಂಗ್ ನಡೆಸಿ ವಿಷಯ ತಿಳಿಸಿದ್ದಾರೆ ಎಂದಿದ್ದಾರೆ.

ಈಗಾಗಲೇ ಬೆಳೆದು ನಿಂತಿರುವ ಮೆಣಸಿನಕಾಯಿ ಸೇರಿ ಇತ್ಯಾದಿ ಬೆಳೆ ಸಂರಕ್ಷಿಸಿ ಇಳುವರಿ ಕಾಪಾಡಲು ಹಾಗೂ ರೈತರ ಹಿತಾಸಕ್ತಿ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ರೈತರ ಹೋರಾಟ ರಾಜ್ಯ ಸರ್ಕಾರದ ಗಮನಕ್ಕೆ ತಂದಿರುವುದರಿಂದ ರಾಜ್ಯ ಸರ್ಕಾರ ರೈತರ ಹಿತಕಾಪಾಡುವ ದೃಷ್ಠಿಯಿಂದ ನೀರು ಬಿಡಲು ಒಪ್ಪಿಗೆ ನೀಡಿದ್ದು, ರೈತರ ಪರವಾಗಿ ಶಾಸಕ ಕಂದಕೂರ ಕೋರಿದ್ದರು.

ಕಳೆದ ಹಲವು ದಿನಗಳಿಂದ ರೈತರು, ಉಪವಾಸ ಸತ್ಯಾಗ್ರಹ, ಗುಂಡಿತೆಗೆದು ಮಣ್ಣು ಮುಚ್ಚಿಬಿಡಿ ಎಂದು ರೈತರ ಜಮೀನಿನಲ್ಲಿ ತಗ್ಗು ಗುಂಡಿ ತೆಗೆದು ಪ್ರತಿಭಟನೆ ನಡೆಸಿದ್ದು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದನ್ನು ಶಾಸಕ ಶರಣಗೌಡ ಕಂದಕೂರ ಸವಿಸ್ತಾರವಾಗಿ ಮೀಟಿಂಗ್‌ನಲ್ಲಿ ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಅನಾರೋಗ್ಯ ನಿಮಿತ್ತ ವಿಶ್ರಾಂತಿಯಲ್ಲಿದ್ದ ಉಪಮುಖ್ಯಮಂತ್ರಿಗಳು ತಮ್ಮ ಆರೋಗ್ಯದ ಕಾಳಜಿ ಬದಿಗಿಟ್ಟು ರೈತರಿಗಾಗಿ ಸಭೆ ನಡೆಸಿ, ನೀರು ಬಿಡಲು ಸೂಕ್ತ ಕ್ರಮ ಕೈಗೊಂಡಿದ್ದಾರೆ.

ಉಪಮುಖ್ಯಮಂತ್ರಿಗಳು ಸಭೆಯಲ್ಲಿ ಚರ್ಚಿಸಿದಂತೆ, ಜ.7ರಂದು ಭಾನುವಾರ ಬೆಳಗ್ಗೆ ಆದೇಶ ಹೊರಡಿಸಿ ಕ್ರಮಕೈಗೊಂಡಿರುವ ಪ್ರಯುಕ್ತ ಸಮಸ್ತ ಜಿಲ್ಲೆಯ ರೈತರ ಪರವಾಗಿ ಹಾಗೂ ವೈಯಕ್ತಿಕವಾಗಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಉಪಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Share this article