ಯಾದಗಿರಿ: ಬ್ಲಡ್ ಬ್ಯಾಂಕ್‌ ಪುನಾರಂಭಕ್ಕೆ ಕರವೇ ಒತ್ತಾಯ

KannadaprabhaNewsNetwork | Published : Jun 22, 2024 12:55 AM

ಸಾರಾಂಶ

ಜಿಲ್ಲಾ ಕೇಂದ್ರದಲ್ಲಿ ರಕ್ತನಿಧಿ ಕೇಂದ್ರ ಇಲ್ಲದೇ ಇರುವುದರಿಂದ ಜಿಲ್ಲೆಯ ಜನತೆ ವಿಶೇಷವಾಗಿ ಗರ್ಭಿಣಿಯರು, ಅಪಘಾತಕ್ಕೀಡಾದವರ ಸಾವು-ನೋವು ಹೆಚ್ಚುತ್ತಿವೆ. ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಅಧಿಕಾರಿಗಳೇ ನೇರ ಹೊಣೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲಾ ಕೇಂದ್ರದಲ್ಲಿ ರಕ್ತನಿಧಿ ಕೇಂದ್ರ ಇಲ್ಲದೇ ಇರುವುದರಿಂದ ಜಿಲ್ಲೆಯ ಜನತೆ ವಿಶೇಷವಾಗಿ ಗರ್ಭಿಣಿಯರು, ಅಪಘಾತಕ್ಕೀಡಾದವರ ಸಾವು-ನೋವು ಹೆಚ್ಚುತ್ತಿವೆ. ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಅಧಿಕಾರಿಗಳೇ ನೇರ ಹೊಣೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಕರವೇಯಿಂದ ನಾರಾಯಣಗೌಡರ ಜನ್ಮದಿನ ಪ್ರಯುಕ್ತ ರಕ್ತದಾನ ಮಾಡಬೇಕೆಂದರೆ ಜಿಲ್ಲೆಯಲ್ಲಿ ರಕ್ತನಿಧಿ ಕೇಂದ್ರವೇ ಮುಚ್ಚಿ ಹೋಗಿರುವುದು ಗಮನಕ್ಕೆ ಬಂದಿದ್ದು, ಇದು ಅತ್ಯಂತ ದುರ್ದೈವದ ಸಂಗತಿ ಎಂದರು.

ಜೂ.28ರಂದು ರಕ್ತದಾನ ಮಾಡಲು ಜಿಲ್ಲೆಯ ಕರವೇ ಸೇನಾನಿಗಳು ಸಿದ್ಧರಾಗಿದ್ದರು. ಆದರೆ, ರಕ್ತನಿಧಿ ಕೇಂದ್ರವೇ ಇಲ್ಲದಿದ್ದರಿಂದ ರಕ್ತದಾನ ಕಾರ್ಯಕ್ರಮ ರದ್ದುಮಾಡಬೇಕಾಗಿ ಬಂತು ಎಂದು ಅವರು ಸಭೆಗೆ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದುಳಿದ ಜಿಲ್ಲೆ ಎಂದು ಘೋಷಿಸಿವೆ. ಶಿಕ್ಷಣ ಮತ್ತು ಆರೋಗ್ಯ ಕ್ರಮಾಂಕದಲ್ಲಿ ತೀರ ಹಿಂದುಳಿದಿರುವುದಕ್ಕೆ ರಕ್ತನಿಧಿ ಕೇಂದ್ರ ಇಲ್ಲದೇ ಇರುವುದೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ಇದಲ್ಲದೇ ಕಳೆದ ಹಲವು ವರ್ಷಗಳಿಂದ ಬಂದ್ ಆಗಿರುವ ರಕ್ತನಿಧಿ ಕೇಂದ್ರದಿಂದಾಗಿ ಸಮಸ್ಯೆಗಳು ಉಲ್ಬಣಿಸಿವೆ. ರೋಗಿಗಳು ಪರದಾಡುತ್ತಿದ್ದರೂ ಯಾರೊಬ್ಬರೂ ಈ ಕುರಿತು ಕಳಕಳಿ ಇಲ್ಲದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದರು.

ಕೂಡಲೇ ಒಂದು ವಾರದಲ್ಲಿ ರಕ್ತನಿಧಿ ಕೇಂದ್ರ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕರವೇ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತಕ್ಕೆ ಘೇರಾವ್ ಮಾಡುವ ಕಾರ್ಯಕ್ರಮ ರೂಪಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ವಿಶ್ವಾರಾಧ್ಯ ದಿಮ್ಮೆ, ಸಂತೋಷ ನಿರ್ಮಲಕರ್, ಚೌಡಯ್ಯ ಬಾವೂರ, ಶರಣಪ್ಪ ದಳಪತಿ, ಸಿದ್ರಾಮರಡ್ಡಿ ಚಿನ್ನಾಕಾರ, ಸಾಹೇಬಗೌಡ ನಾಯಕ, ವಿಶ್ವರಾಜ ಹೊನಿಗೇರಾ, ಸಿದ್ದಪ್ಪ ಕೊಯಿಲೂರ, ಯಮುನಯ್ಯ ಗುತ್ತೇದಾರ, ಶರಣು ಸಾಹುಕಾರ, ಸಿದ್ದಪ್ಪ ಕ್ಯಾಸಪನಳ್ಳಿ, ಭೀಮರಾಯ ರಾಮಸಮುದ್ರ, ವೆಂಕಟೇಶ ಮಿಲ್ಟ್ರಿ ಇತರರಿದ್ದರು.

Share this article