ಕುಪಗಲ್ ಹತ್ತಾರು ಸಮಸ್ಯೆಗಳ ಬಂಡಲ್‌

KannadaprabhaNewsNetwork | Published : Feb 20, 2024 1:49 AM

ಸಾರಾಂಶ

ಕುಪಗಲ್‌ ಗ್ರಾಮದಲ್ಲಿ ನಿರ್ಮಾಣವಾಗಿ 2 ವರ್ಷಗಳಾದರೂ ಆರ್‌ಓ ಪ್ಲಾಂಟ್ ಇನ್ನೂ ಆರಂಭವಾಗಿಲ್ಲ, ಊರಿನ ಮಧ್ಯೆ ರಸ್ತೆ ಹೋಗಿ ಧೂಳಿನಿಂದ ಗ್ರಾಮಸ್ಥರು ಹೈರಾಣಾಗುತ್ತಿದ್ದು, ಚರಂಡಿ ಸ್ವಚ್ಛತೆಯಿಲ್ಲದೆ ಸೊಳ್ಳೆಯ ಹಾವಳಿ, ಫಾಗಿಂಗ್‌ಗೆ ಪಂಚಾಯ್ತಿ ರವರು ಮುಂದಾಗದಿರುವದಕ್ಕೆ ಗ್ರಾಮಸ್ಥರ ಆಕ್ರೋಶ ಹೆಚ್ಚುತ್ತಿದೆ.

ನಾಗರಾಜ್ ಡಿ ನ್ಯಾಮತಿ

ಕನ್ನಡಪ್ರಭ ವಾರ್ತೆ ಸುರಪುರ

ಮಣ್ಣಿನ ರಸ್ತೆ, ಧುತ್ತೆಂದು ಎದ್ದೇಳುವ ಧೂಳು, ಶುದ್ಧ ಕುಡಿಯುವ ನೀರಿಲ್ಲ, ಶಿಕ್ಷಕರ ಸಮಸ್ಯೆs, ಅಸ್ವಚ್ಛತೆ, ಬೆಳಗದ ಸೋಲಾರ್ ದೀಪಗಳು, ಸೊಳ್ಳೆಗಳ ಹಾವಳಿಗೆ ಜನತೆ ಹೈರಾಣ, ಗುಂಡಿ-ತಗ್ಗುಗಳಿರುವ ಶಾಲಾವರಣ, ಆಶಾ-ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರ ಸಮಸ್ಯೆ ಸೇರಿ ಹಲವಾರು ಸಮಸ್ಯೆ...

ಸುರಪುರ ತಾಲೂಕಿನ ಸುಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕುಪಗಲ್ ಗ್ರಾಮದ ಚಿತ್ರಣವಿದು. ಸುಮಾರು 1100 ಜನಸಂಖ್ಯೆ ಇರುವ ಗ್ರಾಮದಲ್ಲಿ ಪುರುಷರು-520, ಮಹಿಳೆಯರು-580 ಇದ್ದಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, 173 ಮಕ್ಕಳ ದಾಖಲಾತಿ ಹೊಂದಿದೆ. ಇಬ್ಬರು ಗ್ರಾಪಂ ಸದಸ್ಯರಿದ್ದರೂ ಅಭಿವೃದ್ಧಿ ಮಾತ್ರ ಮರೀಚಿಕೆ.

ಗ್ರಾಮದ ಮಧ್ಯೆ ಭಾಗದಲ್ಲೇ ಮಣ್ಣಿನ ರಸ್ತೆ ಹಾದು ಹೋಗಿದೆ. ಡಾಂಬರ್‌ ರಸ್ತೆ ಮಾಡುತ್ತೇವೆ ಎಂದು ಅಗೆದವರು 3 ಮೂರು ವರ್ಷವಾದರೂ ನಿರ್ಮಾಣ ಮಾಡಿಲ್ಲ. ಮರಳು ಲಾರಿ, ವಾಹನಗಳಿಂದ ಧೂಳು ಮನೆಯೊಳಗೆ ಪ್ರವೇಶಿಸುತ್ತಿದೆ. ಇದರಿಂದ ನೀರು, ಊಟಕ್ಕೂ ಧೂಳು ಮುತ್ತಿಕೊಳ್ಳುತ್ತಿದೆ. ಆದರೂ ರಸ್ತೆ ನಿರ್ಮಾಣ ಎಂದೋ ಯಾರಿಗೆ ಗೊತ್ತು.

ಉದ್ಘಾಟನೆ ಕಾಣದ ಆರ್‌ಒ ಪ್ಲಾಂಟ್:

ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಎರಡು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಹೀಗಾಗಿ ಕೊಳವೆಬಾವಿ ಆಶ್ರಯಿಸಬೇಕಿದೆ. ಅಲ್ಲದೆ ವಾರಕ್ಕೊಮ್ಮೆ ಮಾತ್ರ ನೀರು ಬಿಡುತ್ತಾರೆ. ಇದರಿಂದ ಹಲವಾರು ಜನರು ರೋಗದ ಬಾಧೆಗೆ ತುತ್ತಾಗಿದ್ದಾರೆ.

ಕೊರೋನಾ ವೇ‍ಳೆ ಕುಪಗಲ್‌ ಆಶಾ ಕಾರ್ಯಕರ್ತರು ಕೊರೋನಾದಿಂದ ಮೃತಪ್ಟಟಿದ್ದರು. ಅವರ ಹುದ್ದೆಗೆ ಮತ್ತೊಬ್ಬರನ್ನು ಆಯ್ಕೆ ಮಾಡಿಕೊಂಡಿಲ್ಲ. ಇದರಿಂದ ಗರ್ಭಿಣಿ, ಬಾಣಂತಿಯರ ಆರೈಕೆ, ಮಾಹಿತಿ ನೀಡುವವರೇ ಇಲ್ಲದಂತಾಗಿದೆ. ಅಂಗನವಾಡಿ ಸಹಾಯಕಿ ಹುದ್ದೆಯೂ ಖಾಲಿ ಇದೆ.

ಗ್ರಾಮದ ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಿಸುವ ಅಗತ್ಯವಿದೆ. ಚರಂಡಿ ನಿರ್ಮಿಸಿದರೂ ಸ್ವಚ್ಛತೆ ಮಾಡದೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿವೆ. ಫಾಗಿಂಗ್ ಮಾಡುತ್ತಿಲ್ಲ ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.

ಸರಕಾರಿ ಶಾಲೆ:

1ರಿಂದ 7ನೇ ತರಗತಿವರೆಗೆ ಬಾಲಕರು -88, ಬಾಲಕಿಯರು 85 ಒಟ್ಟು ಶಾಲಾ ದಾಖಲಾತಿ 173 ಇದ್ದರೂ ಇಬ್ಬರು ಕಾಯಂ ಶಿಕ್ಷಕರಿದ್ದಾರೆ. ನಾಲ್ಕು ಹುದ್ದೆಗಳು ಖಾಲಿಯಿವೆ. ಶಾಲೆ ಆವರಣವು ಗುಂಡಿ ತಗ್ಗುಗಳಿಂದ ಕೂಡಿದೆ. ಶುದ್ಧ ಕುಡಿಯುವ ನೀರೂ ಇಲ್ಲ.

ಗ್ರಾಮದಲ್ಲಿ 580 ಮಹಿಳೆಯರಿದ್ದು, ಸಮುದಾಯ ಶೌಚಾಲಯವಿದಲ್ಲದೆ ಬಯಲನ್ನೇ ಆಶ್ರಯಿಸಿದ್ದಾರೆ. ಗ್ರಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೆಲ ವಿದ್ಯುತ್ ದೀಪಗಳು ಉರಿದರೆ ಬಹುತೇಕ ಬಂದ್ ಆಗಿವೆ. ಕೆಲವೆಡೆ ಸೋಲಾರ ಅಳವಡಿಸಿದ್ದರೂ ನಿಂತು ಹೇಗಿವೆ. ಮಕ್ಕಳಲ್ಲಿ ರಕ್ತಹೀನತೆ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಈ ಗ್ರಾಮವೂ ಸುವರ್ಣ ಗ್ರಾಮ ಯೋಜನೆಗೆ ಒಳಪಟ್ಟಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ.

ರಾಜಾ ವೆಂಕಟಪ್ಪ ನಾಯಕರ 2017-18ರ ಅವಧಿಯಲ್ಲಿ ಕುಪಗಲ್ ಗ್ರಾಮವೂ ಸುವರ್ಣ ಗ್ರಾಮ ಯೋಜನೆಗೆ ಒಳಪಟ್ಟಿತ್ತು. ಸುಮಾರು ₹1 ಕೋಟಿ ಅನುದಾನ ಬಂದಿತ್ತು. ಆಗ ಕೆಲ ಕೆಲಸವಾದವು. ಈ ಕಾಮಗಾರಿಗಳು ಈಗಲೂ ನಡೆಯುತ್ತಿವೆ. ಸುಗೂರು ಗ್ರಾಮ ಪಂಚಾಯ್ತಿಯಿಂದ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ. ಮೂಲಸೌಲಭ್ಯ ಒದಗಿಸಿ ಅಭಿವೃದ್ಧಿ ಮಾಡದಿದ್ದರೆ ಮುಂಬರುವ ಚುನಾವಣೆ ಬಹಿಷ್ಕರಿಸುತ್ತೇವೆ.

ವೆಂಕಟೇಶ ನಾಯಕ, ರೈತ ಮುಖಂಡ, ಕುಪಗಲ್.

ಶಾಲೆಯಲ್ಲಿ ಉತ್ತಮ ದಾಖಲಾತಿಯಿದೆ. ಆದರೆ, ನಾಲ್ವರು ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಶಾಲೆಯಲ್ಲಿ ಮೂಲಸೌಲಭ್ಯದ ಕೊರತೆಯಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯ್ತಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯವಾಗುತ್ತದೆ.

ರಾಘವೇಂದ್ರ ಹುಲಕಲ್, ಎಸ್‌ಡಿಎಂಸಿ ಅಧ್ಯಕ್ಷ, ಕುಪಗಲ್.

Share this article