ಯಾದಗಿರಿ: ನಿರ್ಲಕ್ಷ್ಯಆರೋಪ: ಮಕ್ಕಳ ಆಯೋಗದಿಂದ ಜಿಪಂ ಸಿಇಓಗೆ ಪತ್ರ

KannadaprabhaNewsNetwork |  
Published : Jan 21, 2024, 01:30 AM IST
ಸಿಇಓಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಪತ್ರ. | Kannada Prabha

ಸಾರಾಂಶ

ಅನಪುರದ ಸರ್ಕಾರಿ ಹೈಸ್ಕೂಲ್‌ ಮಕ್ಕಳಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕನ ವಿರುದ್ಧ ತುರ್ತಾಗಿ ಕ್ರಮ ವಹಿಸದ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಪಂಚಾಯ್ತಿ ಸಿಇಓಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚನೆ ನೀಡಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಅನಪುರದ ಸರ್ಕಾರಿ ಪ್ರೌಢಶಾಲೆಯ ಶಾಲಾ ಮುಖ್ಯೋಪಾಧ್ಯಾಯರಿಂದ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯ ಶಿಕ್ಷಕನ ವಿರುದ್ಧ ತುರ್ತಾಗಿ ಕ್ರಮ ಜರುಗಿಸದೇ ಇರುವುದಕ್ಕೆ ಸೂಕ್ತ ಸಮಜಾಯಿಷಿಯೊಂದಿಗೆ 7 ದಿನಗಳೊಳಗೆ ಉತ್ತರವನ್ನು ನೀಡುವಂತೆ ಯಾದಗಿರಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಜ.20ರಂದು ಪತ್ರ ಬರೆದು, ನಿರ್ದೇಶಿಸಿದೆ.

ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ, ಈ ಕುರಿತು ಆರೋಪಿಸಿದ್ದ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರು, ಮಕ್ಕಳ ದೂರಿನ ನಂತರ ಆರಂಭದಲ್ಲಿ ತುರ್ತು ಕ್ರಮ ಕೈಗೊಳ್ಳಬೇಕಾದ ಜಿಪಂ ಅಧಿಕಾರಿಗಳು ನಿಷ್ಕಾಳಜಿ ವಹಿಸಿದ್ದಾರೆ. ಅಲ್ಲದೆ, ಪೊಲೀಸರೂ ಸಹ ಈ ಬಗ್ಗೆ ಸಮಯೋಚಿತ ದೂರು ದಾಖಲಿಸುವಲ್ಲಿ ಹಿಂದೇಟು ಹಾಕಿದ್ದರು ಎಂದು ಆರೋಪಿಸಿದ್ದರು. ಈ ವಿಷಯ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪತ್ರ ಬರೆದು ದೂರಿದ್ದ ಶಾಸಕ ಕಂದಕೂರು, ಆಯೋಗವೂ ಈ ಬಗ್ಗೆ ಗಮನ ಹರಿಸುವಂತೆ ಕೋರಿದ್ದರು.

ಶಾಸಕ ಕಂದಕೂರು ಆರೋಪ ಆಧರಿಸಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ವಿಚಾರಣೆ ವೇಳೆ ಮುಖ್ಯ ಶಿಕ್ಷಕ ಹಣಮೇಗೌಡ ಲೈಂಗಿಕ ದೌರ್ಜನ್ಯ ಬಗ್ಗೆ ತಹಸೀಲ್ದಾರರು ಹಾಗೂ ಶಿಕ್ಷಣ ಇಲಾಖೆ ಜಂಟಿ ಅಧಿಕಾರಿಗಳೆದುರು ಮಕ್ಕಳು ದೂರಿದ್ದರು. ಶಿಕ್ಷಣ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳ ವರದಿ ಸಲ್ಲಿಸಿತ್ತು. ಮುಖ್ಯ ಶಿಕ್ಷಕ ಹಣಮೇಗೌಡ ವಿರುದ್ಧ ಪೋಕ್ಸೋ ಪ್ರಕರಣದಂತಹ ಆರೋಪ ಕೇಳಿ ಬಂದಿದ್ದರೂ, ತಾವು ಈ ಬಗ್ಗೆ ತುರ್ತಾಗಿ ಕ್ರಮ ವಹಿಸದೇ ಇರುವ ಬಗ್ಗೆ ಸೂಕ್ತ ಸಮಜಾಯಿಷಿಯೊಂದಿಗೆ 7 ದಿನಗಳೊಳಗೆ ಉತ್ತರ ಸಲ್ಲಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಅವರು ಜಿಪಂ ಸಿಇಓ ಗರೀಮಾ ಪನ್ವಾರ್‌ ಅವರಿಗೆ ಸೂಚಿಸಿದ್ದಾರೆ.

ಸ್ವಯಂ ದೂರು ದಾಖಲು, ಸಮನ್ಸ್‌:

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಬಿಇಓ ಹಾಗೂ ಸಿಪಿಐ ವಿರುದ್ಧ ಎರಡು ದಿನಗಳ ಹಿಂದಷ್ಟೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಮಕ್ಕಳ ಆಯೋಗ ಜ.23ರಂದು ಆಯೋಗದ ಬೆಂಗಳೂರು ಕಚೇರಿಗೆ ಹಾಜರಾಗುವಂತೆ ಸೂಚಿಸಿದೆ.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ